ADVERTISEMENT

ಕಂಠೀರವ ಸ್ಟುಡಿಯೊದಲ್ಲಿ ಅಂಬರೀಷ್‌ ಸಮಾಧಿ ಬೇಡ: ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆ

ಕನ್ನಡ ಸಿನಿಮಾ, ಸಂಸ್ಕೃತಿಯ ಉದ್ಧಾರಕ್ಕೆ ಬಳಕೆಯಾಗಬೇಕಾದ ಜಾಗ: ಅರ್ಜಿದಾರರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2018, 11:45 IST
Last Updated 25 ನವೆಂಬರ್ 2018, 11:45 IST
   

ಬೆಂಗಳೂರು: ‘ಅಂಬರೀಷ್ ಅವರ ಪಾರ್ಥಿವ ಶರೀರವನ್ನು ಕಂಠೀರವ ಸ್ಟುಡಿಯೊ ಆವರಣದಲ್ಲಿ ಸಮಾಧಿ ಮಾಡಬಾರದು ಎಂಬ ಕೋರಿಕೆಯನ್ನು ಪರಿಗಣಿಸುವುದಕ್ಕೆ ಅಗತ್ಯವಾದ ಕಾನೂನು ಕ್ರಮ ಅನುಸರಿಸಿ’ ಎಂದು ಹೈಕೋರ್ಟ್ ಅರ್ಜಿದಾರರಿಗೆ ಮೌಖಿಕವಾಗಿ ನಿರ್ದೇಶಿಸಿದೆ.

ಈ ಕುರಿತ ಮನವಿಯನ್ನು ವಕೀಲ ಆರ್.ಎಲ್.ಎನ್.ಮೂರ್ತಿ ಅವರು ಭಾನುವಾರ ಹೈಕೋರ್ಟ್‌ನ ನ್ಯಾಯಾಂಗ ವಿಭಾಗದ ಹೆಚ್ಚುವರಿ ರಿಜಿಸ್ಟ್ರಾರ್ ಪಿ.ಎನ್‌.ದೇಸಾಯಿ ಅವರ ಮುಂದೆ ಮಧ್ಯಾಹ್ನ 3.3ರ ವೇಳೆಗೆ ವಿಶೇಷ ಅವಕಾಶ ಕೋರಿಕೆಯ ಮುಖಾಂತರ ಮಂಡಿಸಿದರು.

‘ಈ ಮನವಿಯನ್ನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಪರಿಗಣಿಸಿ ಸೂಕ್ತ ಆದೇಶ ಹೊರಡಿಸಿ’ ಎಂದು ಕೋರಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ದೇಸಾಯಿ ಅವರು, ‘ಕೋರ್ಟ್‌ನ ಎಂದಿನ ಪ್ರಕ್ರಿಯೆ ಅನುಸಾರವೇ ನಿಮ್ಮ ಈ ಅರ್ಜಿ ಪರಿಗಣನೆಗೆ ಬರಲಿದೆ. ಆದ್ದರಿಂದ ಹೈಕೋರ್ಟ್‌ ಕಾನೂನು ಮತ್ತು ನಿಯಮಗಳ ಅನುಸಾರ ಅಗತ್ಯವಾದ ಕ್ರಮದಲ್ಲೇ ಸಲ್ಲಿಸಿ’ ಎಂದು ಮೌಖಿಕವಾಗಿ ಸೂಚಿಸಿದರು.

ಅರ್ಜಿದಾರರ ಮನವಿ ಏನು?

* ಕಂಠೀರವ ಸ್ಟುಡಿಯೊ ಆವರಣಗಣ್ಯರನ್ನು ದಫನ್ ಮಾಡುವ ಸ್ಮಶಾನ ಭೂಮಿ ಅಲ್ಲ.

* ಅದು ಕನ್ನಡ ಸಿನಿಮಾ, ಸಂಸ್ಕೃತಿಯ ಉದ್ಧಾರಕ್ಕೆ ಬಳಕೆಯಾಗಬೇಕಾದ ಜಾಗ.

* ಈ ರೀತಿ ಜನಾನುರಾಗಿ ಚಿತ್ರನಟರನ್ನು ಸ್ಟುಡಿಯೊ ಆವರಣದಲ್ಲಿ ಕಾಲಕಾಲಕ್ಕೆ ದಫನ್ ಮಾಡುತ್ತಾ ಹೋದರೆ ಮುಂದೊಂದು ದಿನ ಅದು ರುದ್ರಭೂಮಿ ಆಗಿ ಮಾರ್ಪಾಡಾಗುತ್ತದೆ.

* ನನಗೆ ಅಂಬರೀಷ್ ಬಗ್ಗೆ ಯಾವುದೇ ರಾಗದ್ವೇಷಗಳಿಲ್ಲ. ಅವರ ಬಗ್ಗೆ ಅಪಾರ ಗೌರವವಿದೆ.

* ಕನ್ನಡದ ಸಿನಿಮಾ, ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಿರುವ ಬಗ್ಗೆ ಕನ್ನಡ ಸಿನಿಮಾ ರಂಗಕ್ಕೆ ನೀಡಿರುವ ಕೊಡುಗೆ, ಅವರ ಸಾಧನೆಗಳ ಬಗ್ಗೆ ಹೆಮ್ಮೆಯಿದೆ.

* ಹಾಗೆಂದಾಕ್ಷಣ ಇಂತಹ ಸಂದರ್ಭದಲ್ಲಿ ಸರ್ಕಾರ ಸಮಷ್ಟಿ ಪ್ರಜ್ಞೆಯನ್ನು ಮರೆತು ತಪ್ಪು ಹೆಜ್ಜೆ ಇಡಬಾರದು ಎಂಬ ಏಕೈಕ ಉದ್ದೇಶದಿಂದ ಈ ಅರ್ಜಿ ಸಲ್ಲಿಸುತ್ತಿದ್ದೇನೆ.

* ಈ ಅರ್ಜಿಯನ್ನು ಪರಿಗಣಿಸಿ ತಾವು ಕರ್ನಾಟಕದ ಜನತೆಯ ಹಿತದೃಷ್ಟಿಯಿಂದ ಮತ್ತು ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಎತ್ತಿಹಿಡಿಯುವ ಅಗತ್ಯ ಇರುವುದರಿಂದ ಅಂಬರೀಷ್‌ ಅವರ ಪಾರ್ಥಿವ ಶರೀರವನ್ನು ಕಂಠೀರವ ಸ್ಟುಡಿಯೊ ಆವರಣದಲ್ಲಿ ದಫನ್‌ ಮಾಡದಂತೆ ಸರ್ಕಾರಕ್ಕೆ ತಕ್ಷಣವೇ ನಿರ್ದೇಶಿಸಬೇಕು.

ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಲ್ಲದೆ ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೂ ಸಲ್ಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.