ADVERTISEMENT

ಕಾರು ಕೊಡಿಸದ್ದಕ್ಕೆ ಮನೆ ಬಿಟ್ಟು ಹೋಗಿದ್ದ ಅಂಬಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2018, 20:22 IST
Last Updated 25 ನವೆಂಬರ್ 2018, 20:22 IST
ವಿಜಯಲಕ್ಷ್ಮಿ ಸಿಂಗ್
ವಿಜಯಲಕ್ಷ್ಮಿ ಸಿಂಗ್   

ಬೆಂಗಳೂರು: ಅಪ್ಪ ಕಾರು ಕೊಡಿಸಲಿಲ್ಲ ಎನ್ನುವ ಕಾರಣಕ್ಕೆ ಅಂಬರೀಷ್‌ ಅವರು ಗಲಾಟೆ ಮಾಡಿ ಮನೆಬಿಟ್ಟು ಸುಮಾರು ಏಳು ತಿಂಗಳ ಕಾಲ ಮೈಸೂರಿನಲ್ಲೇ ಇದ್ದ ನಮ್ಮ ಮನೆಯಲ್ಲಿ ಬಂದು ನೆಲೆಸಿದ್ದರು. ಕೊನೆಗೂ ಅವರ ಅಪ್ಪ ಕಾರು ಖರೀದಿಸಲು ದುಡ್ಡು ಕೊಟ್ಟ ಬಳಿಕ ಮನೆಗೆ ವಾಪಸಾಗಿದ್ದರು. ಹಾಗೆ ಅವರು ಮೊದಲು ಖರೀದಿಸಿದ ಕಾರು ಹೆರಾಲ್ಡ್‌, ಅದರ ನಂಬರ್‌ 1011. ಆ ಬಳಿಕ ಆರು ತಿಂಗಳಿಗೊಂದರಂತೆ ಕಾರು ಬದಲಾಯಿಸಿದ್ದರು.

– ಹೀಗೆಂದು ತಮ್ಮ ಆತ್ಮೀಯ ಗೆಳೆಯ ಅಂಬರೀಷ್‌ ಕುರಿತ ನೆನಪುಗಳನ್ನು ಬಿಚ್ಚಿಡುತ್ತಾರೆ ನಟಿ, ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್‌. ‘ಮೈಸೂರಿನ ಸರಸ್ವತಿಪುರಂನದಲ್ಲಿ ನಮ್ಮದು 11ನೇ ಮೇನ್‌, ಅವರದ್ದು 7ನೇ ಮೇನ್‌ ರಸ್ತೆ. ಆಗ ಅವರ ಬಳಿ ಬೈಕ್‌ ಇತ್ತು. ಆದರೆ ಕಾರು ಕೊಡಿಸು ಎಂದು ಅಪ್ಪನನ್ನು ಕೇಳಿದರೆ ಅವರು ಒಪ್ಪಲಿಲ್ಲ. ಸಿಟ್ಟಿಗೆದ್ದು ಕೂಗಾಡಿ ನಮ್ಮ ಮನೆಗೆ ಬಂದು ವಾಸವಾದ ಅಂಬರೀಷ್‌, ಅಮ್ಮ ಬಂದು ಕರೆದರೂ ಮನೆಗೆ ವಾಪಸಾಗಲಿಲ್ಲ. ಅವರ ಅಮ್ಮ ಬಂದು ನಮ್ಮ ಅಮ್ಮನ ಬಳಿ ದೂರು ಹೇಳಿದಾಗ, ನಾವು– ಇಲ್ಲೇ ಹತ್ತಿರದಲ್ಲೇ ಮನೆ ಇದೆಯಲ್ಲ, ನೀವ್ಯಾಕೆ ಚಿಂತೆ ಮಾಡ್ತೀರಿ– ಎಂದು ಸಮಾಧಾನ ಮಾಡುತ್ತಿದ್ದೆವು’ ಎಂದು ವಿಜಯಲಕ್ಷ್ಮಿ ಸಿಂಗ್‌ ಪ್ರಜಾವಾಣಿ ಜೊತೆಗೆ ನೆನಪುಗಳನ್ನು ಹಂಚಿಕೊಂಡರು.

‘ಅಂಬರೀಷ್‌ ನಮ್ಮ ಮನೆಯ ಕಾಂಪೌಂಡ್‌ನ ಬಳಿಯಿದ್ದ ಮರವೊಂದರ ಬಳಿ ಬಂದು ಹಕ್ಕಿಯ ಧ್ವನಿ ತೆಗೆದು ನಿಲ್ಲುತ್ತಿದ್ದ. ಅದು ನನ್ನ ಅಣ್ಣ ರಾಜೇಂದ್ರಸಿಂಗ್‌ ಬಾಬುವನ್ನು ಕರೆಯಲು ಬಳಸುತ್ತಿದ್ದ ಸಂಕೇತ. ದೊಡ್ಡ ಕೆಂಪು ಕಣ್ಣುಗಳ ಈ ಯುವಕ ಹೀಗೆ ಬಂದು ಹಕ್ಕಿಯ ಧ್ವನಿಯ ತೆಗೆಯುವುದು ಹಾಗೂ ಅವನ ಜತೆಗೆ ಬಾಬಣ್ಣ ಬೈಕ್‌ ಹತ್ತಿ ಹೋಗುವುದನ್ನು ಕಂಡು ಅಮ್ಮ ಕೆಟ್ಟ ಹುಡುಗರ ಸಹವಾಸವೋ ಏನೋ ಎಂದು ಮೊದಲು ಚಿಂತೆಗೆ ಒಳಗಾಗಿದ್ದರು. ಆಮೇಲೆ ಆತ ಪಿಟೀಲು ಚೌಡಯ್ಯನವರ ಮೊಮ್ಮಗ ಎಂದು ಗೊತ್ತಾಗಿ ನಿರಾಳರಾದರು’ ಎಂದರು ವಿಜಯಲಕ್ಷ್ಮಿ ಸಿಂಗ್‌.

ADVERTISEMENT

‘ಅಂಬರೀಷ್‌ ಅವರು ಟೆನಿಸ್‌, ಶಟ್ಲ್‌ ಮಾತ್ರವಲ್ಲ ಅದ್ಭುತ ಕೇರಂ ಆಟಗಾರ ಕೂಡಾ. ಕೈಗೆ ಸ್ಟ್ರೈಕರ್‌ ಸಿಕ್ಕರೆ ಬೋರ್ಡ್‌ನಲ್ಲಿದ್ದ ಅಷ್ಟೂ ಕಾಯಿಗಳನ್ನು ಆಡಿಯೇ ನಮಗೆ ಸ್ಟ್ರೈಕರ್‌ ಬಿಟ್ಟುಕೊಡುತ್ತಿದ್ದುದು’ ಎಂದು ಅವರು ಯೌವನದ ದಿನಗಳನ್ನು ನೆನಪು ಮಾಡಿಕೊಂಡರು.

ಚೆನ್ನಾಗಿ ಲೈಫನ್ನು ಎಂಜಾಯ್‌ ಮಾಡಬೇಕು, ಥಟ್ಟಂತ ಎದ್ದು ಹೊರಟುಬಿಡಬೇಕು ಎನ್ನುವುದು ಅವರು ಯಾವಾಗಲೂ ಹೇಳುತ್ತಿದ್ದ ಡೈಲಾಗು. ಅವರ ಜೀವನವನ್ನು ಪೂರ್ಣವಾಗಿ ಅನುಭವಿಸಿದ್ದಾರೆ. ಆದರೆ ಮಗ ಮತ್ತು ಮಡದಿಗಾಗಿಯಾದರೂ ಅವರು ಇನ್ನಷ್ಟು ವರ್ಷ ಬದುಕಿರಬೇಕಿತ್ತು ಎಂದು ಅವರು ಕಣ್ಣೀರಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.