ADVERTISEMENT

‘ಅಂಬೇಡ್ಕರ್‌ ಸೋಲಿಗೆ ಕಾಂಗ್ರೆಸ್‌ ಪ್ರಯತ್ನಿಸಿದ್ದೇಕೆ?’: ಪ್ರಕಾಶ್‌ ಬೆಳವಾಡಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 16:40 IST
Last Updated 28 ನವೆಂಬರ್ 2021, 16:40 IST
ನಟ ‍ಪ್ರಕಾಶ್ ಬೆಳವಾಡಿ (ಎಡದಿಂದ ಎರಡನೇಯವರು) ಪುಸ್ತಕ ಬಿಡುಗಡೆ ಮಾಡಿದರು. (ಎಡದಿಂದ) ಸುಧಾಕರ ಹೊಸಳ್ಳಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್, ಶ್ರೀನಿವಾಸ ಬಾಬು ಹಾಗೂ ಪ್ರವೀಣ ಮಾವಿನಕಾಡು ಇದ್ದಾರೆ– ಪ್ರಜಾವಾಣಿ ಚಿತ್ರ
ನಟ ‍ಪ್ರಕಾಶ್ ಬೆಳವಾಡಿ (ಎಡದಿಂದ ಎರಡನೇಯವರು) ಪುಸ್ತಕ ಬಿಡುಗಡೆ ಮಾಡಿದರು. (ಎಡದಿಂದ) ಸುಧಾಕರ ಹೊಸಳ್ಳಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್, ಶ್ರೀನಿವಾಸ ಬಾಬು ಹಾಗೂ ಪ್ರವೀಣ ಮಾವಿನಕಾಡು ಇದ್ದಾರೆ– ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ಅವರನ್ನು ಸೋಲಿಸುವ ಸಾಹಸಕ್ಕೆ ಕಾಂಗ್ರೆಸ್ ಮುಂದಾಗಿದ್ದೇಕೆ. ಆ ಪಕ್ಷ ಅವಿರೋಧ ಆಯ್ಕೆಗೆ ಏಕೆ ಮುಂದಾಗಲಿಲ್ಲ ಎಂಬ ಪ್ರಶ್ನೆಗಳು ಈಗಲೂ ಕಾಡುತ್ತಿವೆ. ಅಂಬೇಡ್ಕರ್‌ ತಮ್ಮ ಜೀವಿತಾವಧಿಯಲ್ಲಿ ಅನೇಕ ಅವಮಾನಗಳನ್ನು ಎದುರಿಸಿದ್ದರು. ಅದನ್ನು ತೆರೆದಿಡುವ ಪ್ರಯತ್ನ ಈ ಪುಸ್ತಕ’ ಎಂದು ನಟಪ್ರಕಾಶ್‌ ಬೆಳವಾಡಿ ತಿಳಿಸಿದರು.

ಅಖಿಲ ಭಾರತ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರವೀಣ ಮಾವಿನಕಾಡು ಹಾಗೂ ಸುಧಾಕರ ಹೊಸಳ್ಳಿ ಅವರ ‘ಅವಿತಿಟ್ಟ ಅಂಬೇಡ್ಕರ್‌’ ಪುಸ್ತಕವನ್ನು ಭಾನುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.‌

‘ಕಾಂಗ್ರೆಸ್ ಸದಸ್ಯರೊಬ್ಬರು ಸಂವಿಧಾನದ ಕರಡು ಪ್ರತಿಯನ್ನು ಬಹಿರಂಗವಾಗಿ ಟೀಕಿಸಿದ್ದರು. ಅಂಬೇಡ್ಕರ್‌ ಅವರನ್ನು ಜೈಲಿಗೆ ಅಟ್ಟುವ ಮಾತುಗಳನ್ನೂ ಅವರು ಆಡಿದ್ದರು. ಆಗ ಕಾಂಗ್ರೆಸ್‌ ಮೌನದ ಮೊರೆ ಹೋಗಿತ್ತಂತೆ. ‘ನನ್ನೆದುರು ಕಾಂಗ್ರೆಸ್‌ ಪಕ್ಷದಿಂದ ಗೆದ್ದು ಬಂದವನು ನನ್ನ ಸಹಾಯಕ. ಆತನನ್ನು ದಾಳವಾಗಿಟ್ಟುಕೊಂಡು ನನ್ನನ್ನು ಸೋಲಿಸಿದವರು ತಳ ಸಮುದಾಯಕ್ಕೆ ಕೊಟ್ಟ ಸಂದೇಶವಾದರೂ ಏನು. ನನ್ನ ಸೋಲು ಅಪೇಕ್ಷಿಸಿದವರಿಗೆ ಕೀಳಾಗಿ ಕಂಡಿದ್ದು ನಾನೆ ಅಥವಾ ಸಂವಿಧಾನವೇ’ ಎಂದು ಅಂಬೇಡ್ಕರ್‌ ನೋವು ತೋಡಿಕೊಂಡಿದ್ದರಂತೆ. ಇವೆಲ್ಲದರ ಉಲ್ಲೇಖವೂ ಈ ಪುಸ್ತಕದಲ್ಲಿದೆ’ ಎಂದರು.

ADVERTISEMENT

‘ಸಂವಿಧಾನದ ಪೀಠಿಕೆಯಲ್ಲಿ ಜಾತ್ಯತೀತ ಹಾಗೂ ಸಮಾಜವಾದಿ ಎಂಬ ಪದಗಳನ್ನು ಬಲವಂತದಿಂದ ತುರುಕಲಾಗಿದೆ. ಪುಸ್ತಕದಲ್ಲಿ ಅದರ ಪ್ರಸ್ತಾವವೂ ಇದೆ. ಅಂಬೇಡ್ಕರ್‌ ವಿಚಾರ ಮಾತನಾಡುವುದೇ ಅಸ್ಪೃಶ್ಯತೆ ಎಂಬ ಪರಿಸ್ಥಿತಿ ಈಗ ಇದೆ. ನಾವು ಸ್ವತಂತ್ರ್ಯ ಭಾರತೀಯರು. ಟೀಕೆ ಮಾಡುವ ಹಕ್ಕು ನಮಗಿದೆ. ಸಂವಿಧಾನವನ್ನು ನೂರಾರು ಬಾರಿ ತಿದ್ದುಪಡಿ ಮಾಡುವುದನ್ನು ಟೀಕಿಸುವುದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.

‘ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರು ಕಾಶ್ಮೀರಕ್ಕೆ ಹೋದಾಗ ಅವರನ್ನು ಹಿಡಿದು ಜೈಲಿಗಟ್ಟಲಾಗಿತ್ತು. ವಾರದ ಬಳಿಕ ಅವರ ನಿಧನದ ಸುದ್ದಿ ಹೊರಬಿದ್ದಿತ್ತು. ಅವರ ಬಲಿದಾನವನ್ನು ಇತಿಹಾಸದ ಯಾವ ಪುಟದಲ್ಲೂ ಕಾಣಲು ಸಾಧ್ಯವಿಲ್ಲ. ಶಾಲಾ ಪಠ್ಯದಲ್ಲೂ ಸೇರ್ಪಡೆ ಮಾಡಿಲ್ಲ’ ಎಂದು ಹೇಳಿದರು.

ರಾಜ್ಯ ವಕೀಲರ ಪರಿಷತ್‌ನ ಅಧ್ಯಕ್ಷ ಶ್ರೀನಿವಾಸ ಬಾಬು, ‘ಈ ಪುಸ್ತಕದಲ್ಲಿ ನಮಗೆ ಗೊತ್ತಿರದ ಅನೇಕ ಸಂಗತಿಗಳು ಅಡಕವಾಗಿವೆ. ಅಂಬೇಡ್ಕರ್‌ ಅವರು ನಿರಂತರ ಅಭ್ಯಾಸದ ಮೂಲಕ ಜ್ಞಾನ ವೃದ್ಧಿಸಿಕೊಂಡಿದ್ದರು. ಶೇಷ, ವಿಶೇಷ ಹಾಗೂ ಸುಧಾಮ ಎಂಬ ಪಾತ್ರಗಳ ಉಲ್ಲೇಖ ಪುಸ್ತಕದಲ್ಲಿವೆ. ಆ ಪಾತ್ರಗಳು ಓದುಗರಿಗೆ ಹೆಚ್ಚು ಆಪ್ತವೆನಿಸುತ್ತವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.