ADVERTISEMENT

ಯಲಹಂಕದಲ್ಲಿ ಅಂಬೇಡ್ಕರ್‌ ಸ್ಮಾರಕ ಭವನ: ಸಚಿವ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 16:30 IST
Last Updated 5 ಜನವರಿ 2022, 16:30 IST
ನಾರಾಯಣಸ್ವಾಮಿ
ನಾರಾಯಣಸ್ವಾಮಿ   

ಬೆಂಗಳೂರು: ದೇಶದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಜೀವನ, ಸಾಧನೆ ಮತ್ತು ಕೊಡುಗೆಗಳ ಕುರಿತು ಸಮಗ್ರ ಮಾಹಿತಿ ನೀಡುವ ಸ್ಮಾರಕ ಭವನವೊಂದನ್ನು ಯಲಹಂಕದಲ್ಲಿ ನಿರ್ಮಿಸಲಾಗುವುದು ಎಂದು ಕೇಂಧ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಪಂಚಕ್ಷೇತ್ರದಲ್ಲಿ ನಿರ್ಮಿಸಿರುವ ಸ್ಮಾರಕದ ರೀತಿಯಲ್ಲೇ ನಗರದಲ್ಲೂ ಸ್ಮಾರಕ ನಿರ್ಮಿಸಲಾಗುವುದು. ಇದಕ್ಕಾಗಿ ಯಲಹಂಕ ಬಳಿ ಏಳು ಎಕರೆ ಜಮೀನು ಗುರುತಿಸಲಾಗಿದೆ’ ಎಂದರು.

ಅಂಬೇಡ್ಕರ್‌ ಅವರ ಜೀವನ ಚರಿತ್ರೆ, ಹೋರಾಟಗಳು, ಸಂವಿಧಾನ ರಚನೆಯ ಪ್ರಕ್ರಿಯೆ, ಆ ಸಂದರ್ಭದಲ್ಲಿ ಸಹಕಾರ ನೀಡಿದ ಮಹನೀಯರ ವಿವರ ಮತ್ತು ಸಾಧನೆಗಳ ಕುರಿತು ಸ್ಮಾರಕ ಭವನದಲ್ಲಿ ಸಮಗ್ರ ಮಾಹಿತಿ ಒದಗಿಸಲಾಗುವುದು. ವಸಂತ ನಗರದಲ್ಲಿರುವ ಅಂಬೇಡ್ಕರ್‌ ಭವನದಲ್ಲೂ ಅಂಬೇಡ್ಕರ್‌ ಅವರಿಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯವೊಂದನ್ನು ಆರಂಭಿಸಲಾಗುವುದು ಎಂದು ವಿವರಿಸಿದರು.

ADVERTISEMENT

ಸ್ಮಾರಕ ಭವನದ ಕಟ್ಟಡ ನಿರ್ಮಾಣಕ್ಕೆ ತಜ್ಞರ ತಂಡವೊಂದು ಅಧ್ಯಯನ ನಡೆಸುತ್ತಿದೆ. ಅಂಬೇಡ್ಕರ್‌ ಅವರಿಗೆ ಸಂಬಂಧಿಸಿದಂತೆ ದಕ್ಷಿಣ ಭಾರತದಲ್ಲೇ ಅತ್ಯುತ್ತಮವಾದ ಸ್ಮಾರಕ ನಿರ್ಮಿಸುವ ಗುರಿ ಇದೆ ಎಂದರು.

ಸುಮನಹಳ್ಳಿಯ ನಿರಾಶ್ರಿತರ ಪುನರ್ವಸತಿ ಕೇಂದ್ರದ ಆವರಣದಲ್ಲಿ ₹ 130 ಕೋಟಿ ವೆಚ್ಚದಲ್ಲಿ ಬಾಬು ಜಗಜೀವನ್‌ ರಾಂ ಭವನ ನಿರ್ಮಿಸಲಾಗುತ್ತಿದೆ. ಅಲ್ಲಿ ಕೂಡ ಜಗಜೀವನ್‌ ರಾಂ ಅವರಿಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯ ನಿರ್ಮಿಸಲಾಗುವುದು. ಅವರ ಜೀವನ, ಸಾಧನೆ ಮತ್ತು ಕೊಡುಗೆಗಳನ್ನು ಪರಿಚಯಿಸಲಾಗುವುದು ಎಂದು ತಿಳಿಸಿದರು.

ವಿಕಾಸಸೌಧದ ಪಕ್ಕದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಚಟುವಟಿಕೆಗಳಿಗಾಗಿ ‘ಸ್ಫೂರ್ತಿ ಭವನ’ ನಿರ್ಮಿಸುವ ಪ್ರಸ್ತಾವವಿದೆ ಎಂದು ಹೇಳಿದರು.

ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎನ್‌.ನಾಗಲಾಂಬಿಕಾ ದೇವಿ, ಸಲಹೆಗಾರ ಇ. ವೆಂಕಟಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.