ADVERTISEMENT

ಆ್ಯಂಬಿಡೆಂಟ್: ಆರೋಪಿಗಳ ಆಸ್ತಿ ಜಪ್ತಿಗೆ ಆದೇಶ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2019, 19:11 IST
Last Updated 12 ಫೆಬ್ರುವರಿ 2019, 19:11 IST

ಬೆಂಗಳೂರು: ‘ಆ್ಯಂಬಿಡೆಂಟ್’ ಕಂಪನಿ ವಂಚನೆ ಪ್ರಕರಣ ಸಂಬಂಧ ನ್ಯಾಯಾಲಯದ ನಿರ್ದೇಶನದ ಮೇರೆಗೆ ವಿಚಾರಣೆ ನಡೆಸಿದ್ದ ಉಪವಿಭಾಗಾಧಿಕಾರಿ, ಆರೋಪಿಗಳ ಆಸ್ತಿ ಜಪ್ತಿಗೆ ಆದೇಶ ಹೊರಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೇವರಜೀವನಹಳ್ಳಿಯಲ್ಲಿ ಆ್ಯಂಬಿಡೆಂಟ್ ಕಂಪನಿ ತೆರೆದಿದ್ದ ಪ್ರಮುಖ ಆರೋಪಿ ಫರೀದ್ ಹಾಗೂ ಅವರ ಮಗ, ‘ನಮ್ಮಲ್ಲಿ ಹಣ ಹೂಡಿದರೆ, ಶೇ 40ರಿಂದ ಶೇ 50ರಷ್ಟು ಬಡ್ಡಿಯ ಸಮೇತ ನಾಲ್ಕು ತಿಂಗಳಲ್ಲಿ ಹಣ ಮರಳಿಸುತ್ತೇವೆ’ ಎಂದು ನಂಬಿಸಿ 15 ಸಾವಿರಕ್ಕೂ ಹೆಚ್ಚು ಮಂದಿಯಿಂದ ₹ 600 ಕೋಟಿಯಷ್ಟು ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದರು. ಹಣ ಕಳೆದುಕೊಂಡಿದ್ದ ಸಾರ್ವಜನಿಕರು ಕಂಪನಿ ವಿರುದ್ಧ ದೂರು ನೀಡಿದ್ದರು.

ಪ್ರಕರಣದ ತನಿಖೆಯ ಜವಾಬ್ದಾರಿ ವಹಿಸಿಕೊಂಡಿದ್ದ ಸಿಸಿಬಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಸೇರಿದಂತೆ ಹಲವರನ್ನು ಬಂಧಿಸಿತ್ತು.

ADVERTISEMENT

ಆರೋಪಿಗಳ ವಂಚನೆಯಿಂದ ಹಣ ಕಳೆದುಕೊಂಡ ಸಾರ್ವಜನಿಕರು, ಹಣ ವಾಪಸ್‌ ಕೊಡಿಸುವಂತೆ ಒತ್ತಾಯಿಸುತ್ತಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಹಣ ಮರು ಪಾವತಿ ಬಗ್ಗೆ ತೀರ್ಮಾನಿಸುವುದಕ್ಕಾಗಿ ಉಪವಿಭಾಗಾಧಿಕಾರಿ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿತ್ತು.

ಸಿಸಿಬಿ ಪೊಲೀಸರು ಸಂಗ್ರಹಿಸಿದ್ದ ದಾಖಲೆಗಳು ಹಾಗೂ ಗ್ರಾಹಕರ ಅಹವಾಲುಗಳನ್ನು ಆಲಿಸಿದ ಉಪವಿಭಾಗಾಧಿಕಾರಿ, ಆರೋಪಿಗಳಾದ ಫರೀದ್, ಅಲಿಂಖಾನ್ ಹಾಗೂ ಜನಾರ್ದನ್ ರೆಡ್ಡಿ ಅವರ ಆಸ್ತಿಗಳ ಜಪ್ತಿಗೆ ಆದೇಶಿಸಿದ್ದಾರೆ ಎಂದು ಗೊತ್ತಾಗಿದೆ.

ವಿಶೇಷ ತಂಡ ರಚನೆ: ಆಸ್ತಿ ಜಪ್ತಿಗಾಗಿ ಸಿಸಿಬಿ ಪೊಲೀಸರ ವಿಶೇಷ ತಂಡಗಳನ್ನು ರಚಿಸಲಾಗಿದೆ. ತಂಡದ ಸದಸ್ಯರು ಆರೋಪಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.