ಪ್ರಾತಿನಿಧಿಕ ಚಿತ್ರ
ಕೃಪೆ: Gemini AI
ಬೆಂಗಳೂರು: ಎರಡು ಪಾಳಿಯಲ್ಲಿ ಕಾರ್ಯನಿರ್ವಹಣೆಗೆ ಅವಕಾಶ ನೀಡುವಂತೆ ಆಗ್ರಹಿಸಿರುವ ‘108-ಆರೋಗ್ಯ ಕವಚ’ ಯೋಜನೆಯ ಆಂಬುಲೆನ್ಸ್ ನೌಕರರು, ಬೇಡಿಕೆ ಈಡೇರಿಸದಿದ್ದರೆ ಆಗಸ್ಟ್ 1ರಿಂದ ಮುಷ್ಕರ ಕೈಗೊಳ್ಳುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುವರ್ಣ ಕರ್ನಾಟಕ ಆರೋಗ್ಯ ಕವಚ (108) ನೌಕರರ ಸಂಘದ ಉಪಾಧ್ಯಕ್ಷ ಪರಮಶಿವ, ‘ಯೋಜನೆಯಡಿ 3,500 ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಜನವರಿ 1ರಿಂದ ಸರ್ಕಾರದ ಆದೇಶಾನುಸಾರ ನೌಕರರು ಮೂರು ಪಾಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ 12 ಗಂಟೆಗಳ ಎರಡು ಪಾಳಿಯಿತ್ತು. ಈಗ 8 ಗಂಟೆಗಳ ಮೂರು ಪಾಳಿ ನಿಗದಿ ಮಾಡಿ, ವೇತನ ಕಡಿತ ಮಾಡಲಾಗಿದೆ. ಇದರಿಂದ ನೌಕರರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಬೆಳಿಗ್ಗೆ 6 ಗಂಟೆ ಮತ್ತು ರಾತ್ರಿ 10 ಗಂಟೆಯ ಪಾಳಿಗೆ ಹಾಜರಾಗುವ ನೌಕರರು ಸಾರಿಗೆ ವ್ಯವಸ್ಥೆಯಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಹೇಳಿದರು.
‘ಯೋಜನೆಯಡಿ ಶೇ 33ರಷ್ಟು ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಜತೆಗೆ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯೂ ಮೂರು ಪಾಳಿಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಾರಿಗೆ ವ್ಯವಸ್ಥೆ ಹಾಗೂ ಮೂಲಸೌಕರ್ಯವನ್ನು ಒದಗಿಸುವ ಜತೆಗೆ ವೇತನ ಹೆಚ್ಚಿಸಬೇಕು. ಅದು ಸಾಧ್ಯವಾಗದಿದ್ದಲ್ಲಿ ಈ ಮೊದಲಿನಂತೆ ಎರಡು ಪಾಳಿಯಲ್ಲಿ ಸಮಯ ನಿಗದಿ ಮಾಡಬೇಕು. ಈ ಬಗ್ಗೆ ಜುಲೈ 31ರೊಳಗೆ ನಿರ್ಧಾರ ತೆಗೆದುಕೊಳ್ಳದಿದ್ದರೆ, ಆ.1ರಿಂದ ಕರ್ತವ್ಯಕ್ಕೆ ಗೈರಾಗುವ ಮೂಲಕ ಮುಷ್ಕರ ಕೈಗೊಳ್ಳಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.