ADVERTISEMENT

ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯ್ದೆ ತಿದ್ದುಪಡಿ: ಮಸೂದೆ ಅಂಗೀಕಾರ

ಶಿಕ್ಷಕರ ವರ್ಗಾವಣೆ ಕಾಯ್ದೆ ತಿದ್ದುಪಡಿ: ಮಸೂದೆ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 22:13 IST
Last Updated 22 ಸೆಪ್ಟೆಂಬರ್ 2021, 22:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ‘ಕಲ್ಯಾಣ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಈ ಮಸೂದೆಯ ಲಾಭ ಪಡೆದುಕೊಂಡು ಮೈಸೂರು, ತುಮಕೂರಿಗೆ ವರ್ಗಾವಣೆ ಮಾಡಿಕೊಂಡರೆ ಗತಿಯೇನು. ನಮ್ಮ ಭಾಗದಲ್ಲಿ ಈಗಾಗಲೇ ಶಿಕ್ಷಕರ ಕೊರತೆ ಇದೆ. ವರ್ಗಾವಣೆ ಮಾಡಿಸಿಕೊಂಡರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ’ ಎಂದು ಆ ಭಾಗದ ಹಲವು ಶಾಸಕರು ಆತಂಕ ವ್ಯಕ್ತಪಡಿಸಿದರು.

2019–20ನೇ ಸಾಲಿನಲ್ಲಿ ಕಡ್ಡಾಯ ಮತ್ತು ಹೆಚ್ಚುವರಿ ವರ್ಗಾವಣೆಗೆ ಒಳಗಾದ ಶಿಕ್ಷಕರಿಗೆ ಮೊದಲು ಕೌನ್ಸೆಲಿಂಗ್‌ ನಡೆಸಿ ವರ್ಗಾವಣೆಯಲ್ಲಿ ಆದ್ಯತೆ ಕಲ್ಪಿಸಲು ‘ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ’ ತಿದ್ದುಪಡಿ ಮಸೂದೆಗೆ ವಿಧಾನಸಭೆಯಲ್ಲಿ ಬುಧವಾರ ಅಂಗೀಕಾರ ನೀಡಲಾಯಿತು. ಈ ವೇಳೆ ಚರ್ಚೆಯಲ್ಲಿ ಪಾಲ್ಗೊಂಡ ಹಲವು ಸದಸ್ಯರು ಈ ಆತಂಕ ಹೊರ ಹಾಕಿದರು.

ಜೆಡಿಎಸ್‌ನ ವೆಂಕಟರಾವ್‌ ನಾಡಗೌಡ, ‘ನಮ್ಮ ಭಾಗಕ್ಕೆ ಹಲವು ಶಿಕ್ಷಕರು ನೇಮಕಗೊಂಡಿದ್ದಾರೆ. ಈ ಮಸೂದೆ ಲಾಭ ಪಡೆದು ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಕ್ಕೆ ಹಾಕಿಸಿಕೊಳ್ಳುತ್ತಾರೆ. ನಮ್ಮ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಉಂಟಾಗಲಿದೆ’ ಎಂದರು. ಬಿಜೆಪಿಯ ಎ.ಎಸ್‌.ಪಾಟೀಲ ನಡಹಳ್ಳಿ, ಸೋಮಶೇಖರ ರೆಡ್ಡಿ ಧ್ವನಿಗೂಡಿದರು.

ADVERTISEMENT

ಕಾಂಗ್ರೆಸ್‌ನ ಅಮರೇಗೌಡ ಬಯ್ಯಾಪುರ, ‘ಇದೊಂದು ಅನಾಹುತಕಾರಿ ಮಸೂದೆ. ನಮ್ಮ ಶಾಲೆಗಳು ಖಾಲಿ ಆಗಲಿವೆ’ ಎಂದರು. ಕಾಂಗ್ರೆಸ್‌ನ ಮಹಾಂತೇಶ ಕೌಜಲಗಿ, ‘ಇದೊಂದು ಉತ್ತಮ ಮಸೂದೆ. ಮೂರು ವರ್ಷಗಳ ಹಿಂದೆ ವರ್ಗಾವಣೆಗೊಂಡು ಬೇರೆ ಕಡೆಗೆ ಹೋದವರಿಗೆ ಅನುಕೂಲ’ ಎಂದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ‘ಈ ತಿದ್ದುಪಡಿ ಮೂಲಕ, 2019–20ನೇ ಸಾಲಿನಲ್ಲಿ ನಡೆದ ವರ್ಗಾವಣೆ ವೇಳೆ ಪ್ರಾಥಮಿಕ ಶಾಲಾ ಶಿಕ್ಷಕನ ಸಂದರ್ಭದಲ್ಲಿ ತಾಲ್ಲೂಕಿನ ಹೊರಗೆ ಅಥವಾ ಪ್ರೌಢಶಾಲಾ ಶಿಕ್ಷಕನ ಸಂದರ್ಭದಲ್ಲಿ ಜಿಲ್ಲೆಯ ಹೊರಗೆ ವರ್ಗಾವಣೆಗೊಂಡ ಶಿಕ್ಷಕರಿಗೆ ಮುಂದಿನ ವರ್ಗಾವಣೆಯ ವೇ‌ಳೆ, ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ತಾಲ್ಲೂಕು ಅಥವಾ ಜಿಲ್ಲೆಯ ಒಳಗೆ ಸ್ಥಳ ನಿಯುಕ್ತಿಗೆ ಅನುಕೂಲ ಕಲ್ಪಿಸಲಾಗಿದೆ. ಅಲ್ಲದೆ, ಇತರ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯ ಮೊದಲೇ ಖಾಲಿ ಹುದ್ದೆಗಳ ಲಭ್ಯತೆಗೆ ಅನುಗುಣವಾಗಿ ಅವರು ಕಾರ್ಯನಿರ್ವಹಿಸುತ್ತಿರುವ ತಾಲ್ಲೂಕು ಅಥವಾ ಜಿಲ್ಲೆಯಲ್ಲಿ ಸ್ಥಳ ಆಯ್ಕೆಗೆ ಮಾಡಿಕೊಂಡು ಒಂದು ಬಾರಿ ವರ್ಗಾವಣೆಗೆ ಅವಕಾಶ ನೀಡಲಾಗುತ್ತದೆ’ ಎಂದರು.

ಖಾದಿ ಮಂಡಳಿ ನಿರ್ದೇಶಕರ ಸಂಖ್ಯೆ ಇಳಿಕೆ: ಕರ್ನಾಟಕ ಖಾದಿ ಹಾಗೂ ಗ್ರಾಮೋದ್ಯೋಗ ಮಂಡಳಿಯ ನಿರ್ದೇಶಕರ ಮಂಡಳಿಯಲ್ಲಿ ಸರ್ಕಾರೇತರ ಸದಸ್ಯರ ಸಂಖ್ಯೆಯನ್ನು 30ರಿಂದ 12ಕ್ಕೆ ಇಳಿಸುವ ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗಗಳ (ತಿದ್ದುಪಡಿ) ಮಸೂದೆಗೆ ಅಂಗೀಕಾರ ನೀಡಲಾಯಿತು.

ಕರ್ನಾಟಕ ಪೌರಸಭೆಗಳು ಮತ್ತು ಕೆಲವು ಇತರ ಕಾನೂನು (ಎರಡನೇ ತಿದ್ದುಪಡಿ) ಮಸೂದೆಗೂ ಒಪ್ಪಿಗೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.