ADVERTISEMENT

ಅಂದು ವಿದೇಶದಲ್ಲಿ ಎಂಜಿನಿಯರ್; ಈಗ ಗ್ರಾ.ಪಂ. ಅಧ್ಯಕ್ಷೆ

ಹಳ್ಳಿಗಾಡಿನ ಅಭಿವೃದ್ಧಿಯ ಕನಸು ಹೊತ್ತು ಅಮೆರಿಕ ತೊರೆದು ಬಂದ ಸ್ವಾತಿ ತಿಪ್ಪೇಸ್ವಾಮಿ

ಡಿ.ಶ್ರೀನಿವಾಸ
Published 11 ಫೆಬ್ರುವರಿ 2021, 19:05 IST
Last Updated 11 ಫೆಬ್ರುವರಿ 2021, 19:05 IST
ಸ್ವಾತಿ ತಿಪ್ಪೇಸ್ವಾಮಿ
ಸ್ವಾತಿ ತಿಪ್ಪೇಸ್ವಾಮಿ   

ಜಗಳೂರು: ಆಧುನಿಕ ಕಾಲಘಟ್ಟದಲ್ಲಿ ಉನ್ನತ ಶಿಕ್ಷಣ ಪಡೆದ ಯುವ ಸಮುದಾಯ ಉಜ್ವಲ ಭವಿಷ್ಯವನ್ನರಸಿ ದೇಶ ತೊರೆದು, ವಿದೇಶಗಳತ್ತ ಮುಖ ಮಾಡುವುದು ಸಾಮಾನ್ಯ ಸಂಗತಿ. ಆದರೆ, ಇದಕ್ಕೆ ಅಪವಾದ ಎನ್ನುವಂತೆ ವಿದೇಶದಲ್ಲಿನ ಪ್ರತಿಷ್ಠಿತ ಹುದ್ದೆ ತ್ಯಜಿಸಿ ಗ್ರಾಮೀಣ ಅಭಿವೃದ್ಧಿಯ ಕನಸು ಹೊತ್ತು ತನ್ನ ಪೂರ್ವಜರ ಹಳ್ಳಿಯತ್ತ ಧಾವಿಸಿರುವ ತಾಲ್ಲೂಕಿನ ಸೊಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ವಾತಿ ತಿಪ್ಪೇಸ್ವಾಮಿ ಅವರ ನಡೆ ಮಾದರಿಯಾಗಿದೆ.

ಮಾಹಿತಿ ತಂತ್ರಜ್ಞಾನದಲ್ಲಿ ಬಿ.ಇ. ಪದವೀಧರೆಯಾಗಿರುವ ಬೆಂಗಳೂರು ನಗರದ ನಿವಾಸಿ ಸ್ವಾತಿ ತಿಪ್ಪೇಸ್ವಾಮಿ, ಅಮೆರಿಕದಲ್ಲಿ ಐದು ವರ್ಷ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಸಮಾಜಸೇವೆ ಮಾಡುವ ತುಡಿತದೊಂದಿಗೆ ವಿದೇಶ
ದಲ್ಲಿನ ಲಾಭದಾಯಕ ಹುದ್ದೆ ತೊರೆದು ಪೂರ್ವಜರ ಸ್ವಗ್ರಾಮ ತಾಲ್ಲೂಕಿನ ಸೊಕ್ಕೆ ಗ್ರಾಮಕ್ಕೆ ಹಿಂದಿರುಗಿದ್ದರು.

ದೇಶದ ಮುಂದುವರಿದ ನಗರಗಳು ಹಾಗೂ ವಿದೇಶಗಳಲ್ಲಿ ಮೂಲಸೌಕರ್ಯಗಳನ್ನು ಕಂಡಿದ್ದ ಅವರು ಈಚೆಗೆ ತಮ್ಮ ತಂದೆಯ ಹುಟ್ಟೂರಿಗೆ ಬಂದಾಗ, ಹಳ್ಳಿಗಾಡಿನಲ್ಲಿ ಮೂಲ ಸೌಲಭ್ಯಗಳ ಕೊರತೆಯನ್ನು ಕಣ್ಣಾರೆ ಕಂಡಿದ್ದರು. ಹಳ್ಳಿಗಳಲ್ಲೂ ಕನಿಷ್ಠ ಪ್ರಾಥಮಿಕ ಸೌಕರ್ಯಗಳನ್ನು ಕಲ್ಪಿಸುವ, ಹಳ್ಳಿಗಾಡಿನ ಜನರ ಜೀವನಮಟ್ಟವನ್ನು ಎತ್ತರಿಸುವ ಕನಸು ಕಂಡಿದ್ದರು.

ADVERTISEMENT

ಇದೇ ಸಮಯದಲ್ಲಿ ಪಂಚಾಯಿತಿ ಚುನಾವಣೆ ಘೋಷಣೆಯಾಗಿ, ಚುನಾವಣೆಗೂ ಸ್ಪರ್ಧಿಸಿದರು. ಉನ್ನತ ಶಿಕ್ಷಣ ಪಡೆದ ಸ್ವಾತಿ ಅವರನ್ನು ತಾಲ್ಲೂಕಿನಲ್ಲೇ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಗ್ರಾಮಸ್ಥರು ಅದ್ದೂರಿ ಸ್ವಾಗತ ನೀಡಿದರು. ನಂತರ ಸೊಕ್ಕೆ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಯಿತು. ಪಂಚಾಯಿತಿ ವ್ಯಾಪ್ತಿಯ ನಾಲ್ಕು ಹಳ್ಳಿಗಳ ಜನ ಹಾಗೂ ಸ್ಥಳೀಯ ಶಾಸಕ ಎಸ್.ವಿ. ರಾಮಚಂದ್ರ ಅವರ ಸಹಕಾರದಿಂದ ಸ್ವಾತಿ ತಿಪ್ಪೇಸ್ವಾಮಿ ಅವರು ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

‘ದೇಶ, ವಿದೇಶಗಳಲ್ಲಿ ನಗರಳಲ್ಲಿನ ಮೂಲ ಸೌಲಭ್ಯಗಳನ್ನು ಕಂಡಿದ್ದ ನನಗೆ ಗ್ರಾಮೀಣ ಭಾಗದಲ್ಲೂ ಈ ಸವಲತ್ತುಗಳನ್ನು ಕಲ್ಪಿಸುವ ಉದ್ದೇಶ ಪಂಚಾಯಿತಿ ರಾಜಕೀಯಕ್ಕೆ ಧುಮುಕಲು ಪ್ರೇರೇಪಿಸಿತು. ಶಾಸಕ ರಾಮಚಂದ್ರ ಅವರ ಸಹಕಾರದೊಂದಿಗೆ ಸರ್ಕಾರದಿಂದ ಅಭಿವೃದ್ಧಿ ಯೋಜನೆ
ಗಳನ್ನು ಮಂಜೂರು ಮಾಡಿಸಿ, ಶುದ್ಧ ಕುಡಿಯುವ ನೀರು, ರಸ್ತೆ, ಒಳ ಚರಂಡಿ ಸಮಸ್ಯೆಗಳನ್ನು ಸರಿಪಡಿಸುವ ಮೂಲಕ ಮಾದರಿ ಪಂಚಾಯಿತಿಯನ್ನಾಗಿ ಅಭಿವೃದ್ಧಿ ಪಡಿಸುವ ಕನಸು ಇದೆ’ ಎಂದು ಅಧ್ಯಕ್ಷೆ ಸ್ವಾತಿ ‘ಪ್ರಜಾವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡರು.

ಸ್ವಾತಿ ಅವರ ತಂದೆ ತಿಪ್ಪೇಸ್ವಾಮಿ ರಾಜ್ಯದಲ್ಲಿ ಈ ಹಿಂದೆ ಸುಮಾರು 11 ಸಚಿವರಿಗೆ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಈಗ ಸ್ವಯಂ ನಿವೃತ್ತಿ ಪಡೆದಿದ್ದಾರೆ.

***

ಸ್ವಾತಿ ಅವರು ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದಾಗ ಸಂತಸವಾಯಿತು. ಉನ್ನತ ಶಿಕ್ಷಣ ಪಡೆದವರು ಜನರ ಸೇವೆ ಮಾಡಲು ಮುಂದೆ ಬಂದದ್ದು ಯುವ ಸಮುದಾಯಕ್ಕೆ ಮಾದರಿ
- ಎಸ್.ವಿ. ರಾಮಚಂದ್ರ, ಶಾಸಕ

ನಮ್ಮ ತಾತ ಹಾಗೂ ಕುಟುಂಬದವರು ಸೊಕ್ಕೆ ಪಂಚಾಯಿತಿಯಲ್ಲಿ ಛೇರ್ಮನ್ ಆಗಿ ಸೇವೆ ಸಲ್ಲಿಸಿದ ಇತಿಹಾಸ ಇದೆ. ಈಗ ಮಗಳೂ ಸ್ವ ಇಚ್ಛೆಯಿಂದ ಸಾರ್ವಜನಿಕ ಜೀವನಕ್ಕೆ ಬಂದಿದ್ದು ಖುಷಿ ತಂದಿದೆ ತಿಪ್ಪೇಸ್ವಾಮಿ,
- ಸ್ವಾತಿ ಅವರ ತಂದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.