ಹುಬ್ಬಳ್ಳಿ: ನೆರೆ ರಾಷ್ಟ್ರಗಳಿಂದ ವಲಸೆ ಬಂದವರಲ್ಲಿ ಶೇ70ರಷ್ಟು ಜನರು ದಲಿತರು. ಇವರಿಗೆ ಪೌರತ್ವ ನೀಡಬಾರದು ಎನ್ನುವವರು ದಲಿತ ವಿರೋಧಿಗಳಾಗಿದ್ದಾರೆ. ದಲಿತರನ್ನು ವಿರೋಧಿಸಿ ಏನು ಗಳಿಸಬಯಸುತ್ತೀರಿ? ಬುದ್ಧನ ಪ್ರತಿಮೆಯ ಮೇಲೆ ದಾಳಿ ಮಾಡಿದ ಲೆಕ್ಕವನ್ನು ಚುನಾವಣಾ ಸಂದರ್ಭದಲ್ಲಿ ದಲಿತರು ಕೇಳುತ್ತಾರೆ ಎಂಬುದನ್ನು ಮರೆಯಬೇಡಿ ಎಂದು ಗೃಹ ಸಚಿವ ಅಮಿತ್ ಶಾ ಎಚ್ಚರಿಸಿದರು.
ಇಲ್ಲಿನ ನೆಹರೂ ಮೈದಾನದಲ್ಲಿ ಶನಿವಾರ ಬಿಜೆಪಿ ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಮಹಾ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಧರ್ಮದ ಆಧಾರದ ಮೇಲೆ ದೇಶ ವಿಭಜಿಸಿತು. ವಲಸಿಗರಿಗೆ ಸುರಕ್ಷೆ ಒದಗಿಸುವುದಾಗಿ ನಿಮ್ಮ ಮುತ್ತಾತ ಜವಾಹರ ಲಾಲ್ ನೆಹರೂ ಭರವಸೆ ನೀಡಿದ್ದರು.ಅದನ್ನು ಭಾರತ ನಿಭಾಯಿಸುತ್ತಲೇ ಬಂದಿದೆ. ಆದರೆ, ಉಳಿದೆಡೆ ಏನಾಗಿದೆ? ಪಾಕಿಸ್ತಾನದಲ್ಲಿ ಶೇ 30 ರಷ್ಟಿದ್ದ ಹಿಂದೂಗಳ ಸಂಖ್ಯೆ ಶೇ 3ಕ್ಕೆ, ಬಾಂಗ್ಲಾ ದೇಶದಲ್ಲಿ ಶೇ 7ಕ್ಕೆ ಕುಸಿದಿದೆ. ಈ ಇಳಿತಕ್ಕೆ ಕಾರಣವೇನು? ಮತಾಂತರವೇ..? ಮಾರಣ ಹೋಮವೇ..? ನೆಲೆ ಅರಸಿ ಇಲ್ಲಿ ಬಂದವರಿಗೆ ಸುರಕ್ಷೆ ನೀಡುವುದು ತಪ್ಪೇ..?
ಪಾಕಿಸ್ತಾನ, ಅಫಘಾನಿಸ್ತಾನ, ಬಾಂಗ್ಲಾ ದೇಶದ ಅಲ್ಪಸಂಖ್ಯಾತರಿಗೆ ಶಿಕ್ಷಣ, ಆರೋಗ್ಯ ಸೇರಿದಂತೆ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಮತದಾನದ ಅಧಿಕಾರ ನೀಡಿಲ್ಲ. ನಿತ್ಯ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಮಾನವ ಹಕ್ಕುಗಳ ಚಾಂಪಿಯನ್‌ರೇ ನಿಮಗಿವು ಕಾಣುತ್ತಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.
ಪಾಕಿಸ್ತಾನ ಪ್ರಧಾನಿ ಇಮ್ರಾನ್‌ಖಾನ್ ಅವರು, 370ನೇ ವಿಧಿ ರದ್ದು, ಸಿಎಎ ವಿರೋಧಿಸುತ್ತಾರೆ. ರಾಹುಲ್ ಗಾಂಧಿಯೂ ವಿರೋಧಿಸುತ್ತಾರೆ. ಕಾಂಗ್ರೆಸ್ ಹಾಗೂ ಪಾಕ್ ನಡುವಿನ ಸಂಬಂಧವೇನು? ಇವರೆಲ್ಲ ನೀರಿಲ್ಲದ ಭಾವಿಗೆ ಬಿದ್ದು ಸಾಯಬೇಕು ಎಂದರು.
ಜೆಎನ್‌ಯುನಲ್ಲಿ ಭಾರತದ ನೂರು ತುಣುಕುಗಳಾಗಲಿ ಎಂದರು, ಇಂಥವರು ಕಂಬಿಗಳ ಹಿಂದಿರಬಾರದೆ? ಆದರೆ ರಾಹುಲ್ ಬಾಬಾಗೆ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹನನವೆನಿಸಿತು. ಬಿಜೆಪಿ ಹಾಗೂ ನಮ್ಮನ್ನು ಮನಬಂದಂತೆ ಟೀಕಿಸಿ. ನಿಮ್ಮ ವಾಕ್ ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಆದರೆ, ಭಾರತದ ಸಾರ್ವಭೌಮತ್ವದ ವಿರುದ್ಧ ಮಾತನಾಡುವವರ ಜಾಗ ಜೈಲುಗಳೇ ಆಗಿವೆ ಎಂದು ಪ್ರತಿಪಾದಿಸಿದರು.
ಪಶ್ಚಿಮ, ಪೂರ್ವ ಪಾಕಿಸ್ತಾನದಲ್ಲಿರುವ ಹಿಂದೂಗಳು ಯಾವಾಗ ಬೇಕಾದರೂ ಭಾರತಕ್ಕೆ ಬರಬಹುದು. ಅವರಿಗೆ ಉತ್ತಮ ಜೀವನ ಸಾಗಿಸುವ ಸೌಲಭ್ಯ ಒದಗಿಸಬೇಕು ಎಂದು ಮಹಾತ್ಮ ಗಾಂಧಿ ಅವರು ಹೇಳಿದ್ದರು. ರಾಹುಲ್ ನೀವು ಗಾಂಧೀಜಿ ಮಾತನ್ನೂ ಕೇಳುವುದಿಲ್ಲವೇ? ಇನ್ನು ಯಾರ ಮಾತು ಕೇಳುತ್ತೀರಿ? ಎಂದು ಪ್ರಶ್ನಿಸಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್, ರಾಜೇಂದ್ರ ಪ್ರಸಾದ್, ಮೌಲಾನಾ ಆಜಾದ್ ಮುಂತಾದ ಕಾಂಗ್ರೆಸ್ಸಿಗರೆಲ್ಲರೂ ವಲಸಿಗರಿಗೆ ಸೌಲಭ್ಯ ಕೊಡುವುದಾಗಿ ಭರವಸೆ ನೀಡಿದ್ದರು. ಇಷ್ಟು ವರ್ಷಗಳೂ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತ, ಭರವಸೆ ಈಡೇರಿಸಲಿಲ್ಲ. ಈಗ ನಾವು ಈಡೇರಿಸುತ್ತಿದ್ದೇವೆ ಎಂದರು.
ಪ್ರತಿಭಟನೆ ಬಿಡಿ; ಮುಕ್ತ ಚರ್ಚೆಗೆ ಬನ್ನಿ
ಇದು ಪೌರತ್ವ ನೀಡುವ ಕಾಯ್ದೆಯಾಗಿದೆಯೇ ಹೊರತು ಹಿಂದೆಗೆಯುವ ಯಾವ ಅವಕಾಶಗಳೂ ಇಲ್ಲಿಲ್ಲ. ರಾಹುಲ್ ಅವರೇ ಬೇಕಿದ್ದಲ್ಲಿ ದಿನಾಂಕ, ಸಮಯ ನಿಗದಿ ಪಡಿಸಿ. ನಮ್ಮ ಸಚಿವ ಪ್ರಹ್ಲಾದ ಜೋಶಿ ಮುಕ್ತ ಚರ್ಚೆಗೆ ಬರುತ್ತಾರೆ ಎಂದು ಸವಾಲೆಸೆದರು.
ಅಹುದಹುದು ಎನಿಸಿಕೊಂಡರು!
ಅಮಿತ್ ಶಾ ಪ್ರತಿ ಪ್ರಶ್ನೆಗೂ ‘ಹೇಳಿ ಹುಬ್ಬಳ್ಳಿಗರೇ’ ಎಂದು ಸಂಬೋಧಿಸಿದರು. ಜನಸ್ತೋಮದಿಂದ ಅಪೇಕ್ಷಿತ ಉತ್ತರಗಳನ್ನೇ ಪಡೆದರು.
*ಪುಲ್ವಾಮಾ, ಉರಿ ದಾಳಿಗಳಾದಾಗ ಭಾರತ ಸುಮ್ನೆ ಕೂರಬೇಕಿತ್ತೆ?
*ಜೆಎನ್‌ಯು ವಿದ್ಯಾರ್ಥಿಗಳು ದೇಶ ಒಡೆಯುವ ಘೋಷಣೆ ಕೂಗುವಾಗ ಶಿಕ್ಷಿಸಬಾರದಿತ್ತೆ?
*ರಾಮಜನ್ಮಭೂಮಿಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಬಾರದೆ?
*ದೈನೇಸಿ ಸ್ಥಿತಿಯಲ್ಲಿ ವಲಸಿಗರ ಕ್ಯಾಂಪಿನಲ್ಲಿ ಬದುಕುತ್ತಿರುವ ದಲಿತರಿಗೆ ಪೌರತ್ವ ನೀಡಬಾರದೇ?
*ಕಾಶ್ಮೀರ ಅಖಂಡ ಭಾರತದ ಭಾಗವಾಗಿರಲಿ ಎಂದು ಬಯಸಬಾರದೇ?
*ಕೈ ಎತ್ತಿ ಕಂಕಣ ಬದ್ಧರಾಗಿ, ದೇಶದ ಸುರಕ್ಷೆಗೆ ಎಂದು ಜಯಘೋಷ ಹಾಕಿಸಿದರು.
**
ಹುಬ್ಬಳ್ಳಿ ಸಮಾವೇಶಕ್ಕೆ ಪ್ರತಿಭಟನೆಯ ಬಿಸಿ
ಪೌರತ್ವ (ತಿದ್ದುಪಡಿ) ಕಾಯ್ದೆಯ ಬಗ್ಗೆ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ನಗರಕ್ಕೆ ಆಗಮಿಸುವುದಕ್ಕೂ ಮುನ್ನವೇ ‘ಗೋ ಬ್ಯಾಕ್ ಅಮಿತ್ ಶಾ’ ಎನ್ನುವ ಘೋಷಣೆಯೊಂದಿಗೆ ವಿವಿಧ ಸಂಘಟನೆಗಳಿಂದ ಶನಿವಾರ ಸರಣಿ ಪ್ರತಿಭಟನೆ ನಡೆಯಿತು.
ಕಾಂಗ್ರೆಸ್ ಕಾರ್ಯಕರ್ತರು, ಕಾಂಗ್ರೆಸ್ ಮಹಿಳಾ ಘಟಕ, ಸಂವಿಧಾನ ರಕ್ಷಿಸಿ ಸಮಿತಿ, ದಲಿತ ಹಾಗೂ ಎಡಪಂಥೀಯ ಸಂಘಟನೆಗಳ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿ, ನರೇಂದ್ರ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದರು.
ಕಾಂಗ್ರೆಸ್ ಕಾರ್ಯಕರ್ತರು ತಂಡತಂಡವಾಗಿ ಬಂದು ನಗರದ ಹಲವೆಡೆ ಪ್ರತಿಭಟಿಸಿದರೆ, ಮಹಿಳಾ ಘಟಕದ ಸದಸ್ಯರು ಕಪ್ಪು ಬಟ್ಟೆ ಧರಿಸಿ, ಕಪ್ಪು ಶಾಲು ಬೀಸುತ್ತ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಮಹದಾಯಿ ವಿವಾದವನ್ನು ಇತ್ಯರ್ಥಪಡಿಸದ ಅಮಿತ್ ಶಾ ಅವರಿಗೆ ಹುಬ್ಬಳ್ಳಿಗೆ ಬರುವ ಹಕ್ಕಿಲ್ಲ’ ಎಂದು ಘೋಷಣೆ ಕೂಗಿದರು. ಚನ್ನಮ್ಮ ಸರ್ಕಲ್ ಬಳಿ ಕಪ್ಪುಬಾವುಟ ಪ್ರದರ್ಶಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.
ಕಾಂಗ್ರೆಸ್ ಕಾರ್ಯಕರ್ತರು ಸರಣಿ ಪ್ರತಿಭಟನೆ ನಡೆಸಿ, ‘ನೋ ಎನ್‌ಆರ್‌ಸಿ’ ಎಂದು ಘೋಷಣೆ ಕೂಗುತ್ತಿದ್ದರೆ, ಸಮಾವೇಶಕ್ಕೆ ಹಾಜರಾಗಲು ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರು ಪ್ರತಿಯಾಗಿ ‘ಎನ್‌ಆರ್‌ಸಿ ಬೇಕೆ ಬೇಕು’ ಎಂದು ಕೂಗಿದರು.
ಮಧ್ಯಾಹ್ನ 2 ಗಂಟೆಗೆ ಆರಂಭವಾದ ಪ್ರತಿಭಟನೆ ಕಾವು ಸಮಾವೇಶ ಮುಗಿಯುವವರೆಗೂ ಮುಂದುವರಿಯಿತು. ಸಮಾವೇಶ ಆರಂಭಕ್ಕೂ ಮುನ್ನ ಕಪ್ಪು ಬಣ್ಣದ ಬಲೂನ್‌ಗಳನ್ನು ಹಾರಿ ಬಿಟ್ಟು ಅಮಿತ್ ಶಾ ಆಗಮನಕ್ಕೆ ವಿರೋಧ ವ್ಯಕ್ತಪಡಿಸಿದರು. ನೆಹರೂ ಮೈದಾನದ ಹೊರಗೆ ಮುಸ್ಲಿಂ ಸಂಘಟನೆಯವರು ಪ್ರತಿಭಟಿಸಿದರು.ಎಲ್ಲೆಡೆ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.