
ಬೆಂಗಳೂರು: ‘ಸ್ವತಂತ್ರ ಭಾರತದಲ್ಲಿ ಅತ್ಯಂತ ದುರ್ಬಲ ಗೃಹ ಸಚಿವರು ಇದ್ದರೆ, ಅದು ಅಮಿತ್ ಶಾ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಪುಲ್ವಾಮಾ ದಾಳಿ, ಮಣಿಪುರದಲ್ಲಿ ನಿರಂತರ ಹಿಂಸಾಚಾರ ಮತ್ತು ಇದೀಗ ದೆಹಲಿ ಸ್ಫೋಟದಂತಹ ಘಟನೆಗಳು ಪದೇ ಪದೇ ನಡೆಯುತ್ತಿವೆ. ಬೇರೆ ಯಾವುದೇ ದೇಶದಲ್ಲಿ ಇಂತಹ ಘಟನೆ ನಡೆದಿದ್ದರೆ, ಇಷ್ಟೊತ್ತಿಗೆ ಗೃಹ ಸಚಿವರು ರಾಜೀನಾಮೆ ನೀಡುತ್ತಿದ್ದರು’ ಎಂದರು.
‘ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ. ಗೃಹ ಸಚಿವ ಅಮಿತ್ ಶಾ ಅವರು ಚುನಾವಣೆ ವೇದಿಕೆಗಳಲ್ಲಿ ಬಾಂಗ್ಲಾದೇಶಿಯರ ನುಸುಳುವಿಕೆ ಬಗ್ಗೆ ಮಾತನಾಡುತ್ತಾರೆ. ಅವರು ಹೇಗೆ ಬರುತ್ತಿದ್ದಾರೆ? ಯಾರು ಒಳಗೆ ಬಿಡುತ್ತಿದ್ದಾರೆ? ಇದಕ್ಕೆ ವಿರೋಧ ಪಕ್ಷದವರೇ ಹೊಣೆಗಾರರೇ’ ಎಂದು ಪ್ರಶ್ನಿಸಿದರು.
‘ಪ್ರಧಾನಿ ನರೇಂದ್ರ ಮೋದಿಯವರು ಅಮಿತ್ ಶಾ ಅವರಿಗೆ ಏಕೆ ಹೆದರುತ್ತಾರೆ? ತಮ್ಮ ಗುಟ್ಟುಗಳು ಹೊರಬರುತ್ತವೆ ಎಂಬ ಭಯವೇ? ಪ್ರಧಾನಿಯವರು ಹೇಳಿಕೊಳ್ಳುವ ‘ಐವತ್ತಾರು ಇಂಚಿನ ಎದೆ’ ಎಲ್ಲಿಗೆ ಹೋಯಿತು’ ಎಂದೂ ಕೇಳಿದರು.
ಕೇಂದ್ರದ ಭದ್ರತಾ ವೈಫಲ್ಯ: ‘ದೆಹಲಿಯಲ್ಲಿ ನಡೆದ ಸ್ಫೋಟಕ್ಕೆ ಪ್ರಧಾನಿ ಮೋದಿಯೇ ನೇರ ಹೊಣೆ ಹೊರಬೇಕು. ಇದು ಕೇಂದ್ರದ ಭದ್ರತಾ ವೈಫಲ್ಯ’ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ದೂರಿದರು.
‘ಪುಲ್ವಾಮಾ, ಪಹಲ್ಗಾಮ್‌ನಂಥ ಘಟನೆಗಳು ನಡೆದಾಗಲೂ ಭದ್ರತಾ ವೈಫಲ್ಯವಾಗಿತ್ತು. ಈಗ ದೆಹಲಿಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ನ್ಯೂನತೆ ಯಾರದ್ದೇ ಇರಲಿ, ಅದನ್ನು ಒಪ್ಪಿಕೊಳ್ಳುವ ಧೈರ್ಯ ಬೇಕು’ ಎಂದರು.
‘ಬಿಹಾರ ಚುನಾವಣೆಯ ಸಂದರ್ಭದಲ್ಲಿಯೇ ದೆಹಲಿಯಲ್ಲಿ ಸ್ಫೋಟ ನಡೆದಿದ್ದು, ಇದು ಯಾವ ರೀತಿಯ ಸಂದೇಶ ನೀಡಲಿದೆ’ ಎಂದು ಪ್ರಶ್ನಿಸಿದ ಮಧು ಬಂಗಾರಪ್ಪ, ‘ಪುಲ್ವಾಮಾ ಘಟನೆಯ ನಂತರ ಯಾರೂ ಜವಾಬ್ದಾರಿ ತೆಗೆದುಕೊಳ್ಳಲಿಲ್ಲ? ಈಗಲೂ ಪ್ರಧಾನಿ ಯಾಕೆ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ? ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಬಂದವರು ಯಾರು?’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.