ADVERTISEMENT

ಪ್ರದೇಶಕ್ಕೆ ತಕ್ಕ ಕಾರ್ಯತಂತ್ರ ಹೆಣೆಯಲಿರುವ ಅಮಿತ್‌ ಶಾ

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 22:24 IST
Last Updated 4 ಜನವರಿ 2023, 22:24 IST
ಅಮಿತ್ ಶಾ
ಅಮಿತ್ ಶಾ   

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ತಮ್ಮ ಇತ್ತೀಚಿನ ಎರಡು ದಿನಗಳ ಭೇಟಿಯಲ್ಲಿ ಪಕ್ಷದೊಳಗಿನ ವಿದ್ಯಮಾನ, ರಾಜ್ಯದಲ್ಲಿ ವಿವಿಧ ಭಾಗಗಳಲ್ಲಿ ಪಕ್ಷದ ಸ್ಥಿತಿಗತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದು, ಅದಕ್ಕೆ ಪೂರಕವಾಗಿ ವಿವಿಧ ಪ್ರದೇಶಗಳಿಗೆ ತಕ್ಕಂತೆ ಚುನಾವಣಾ ಕಾರ್ಯತಂತ್ರ ಹೆಣೆಯಲಿದ್ದಾರೆ.

‘ಕಳೆದ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಪೂರ್ಣ ಬಹುಮತಗಳಿಸದೇ ಯಡವಟ್ಟು ಮಾಡಿಕೊಂಡಿರುವುದನ್ನು ಪಾಠವಾಗಿ ತೆಗೆದುಕೊಂಡಿರುವ ಅವರು ಈ ಬಾರಿ ಯಾವುದೇ ಕಾರಣಕ್ಕೂ ತಪ್ಪುಗಳನ್ನು ಮಾಡಬಾರದು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಹೀಗಾಗಿ ಎಲ್ಲೆಲ್ಲಿ ಲೋಪಗಳಿವೆ, ಅವುಗಳನ್ನು ಹೇಗೆ ಸರಿಪಡಿಸಬೇಕು ಎಂಬ ಬಗ್ಗೆ ಕೆಲವು ಹಿರಿಯ ನಾಯಕರಿಂದ ವೈಯಕ್ತಿಕವಾಗಿ ಮಾಹಿತಿಯನ್ನು ಪಡೆದಿದ್ದಾರೆ’ ಎಂದು ಪಕ್ಷದ ಮೂಲಗಳು ಹೇಳಿವೆ.

ಇಷ್ಟು ವರ್ಷ ಚುನಾವಣೆಗಳಲ್ಲಿ ಹಳೇ ಮೈಸೂರು ಭಾಗದ ಜಿಲ್ಲೆಗಳು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಗಂಭೀರ ಸ್ಪರ್ಧೆ ನೀಡದೇ ಇರುವ ಕಾರಣ ಬಹುಮತದ ಗೆರೆ ದಾಟಲು ಅಡ್ಡಿಯಾಗಿತ್ತು. ಈ ಬಾರಿ ಈ ಪ್ರದೇಶದಲ್ಲಿ ಯಾವುದೇ ಪಕ್ಷಗಳ ಜತೆ ಒಳ ಒಪ್ಪಂದ ಮಾಡಿಕೊಳ್ಳದೇ ಕಠಿಣ ಸ್ಪರ್ಧೆಯನ್ನು ಒಡ್ಡುವುದು ಮಾತ್ರವಲ್ಲದೇ, ಹೆಚ್ಚಿನ ಸ್ಥಾನಗಳನ್ನು ಗೆಲ್ಲಲೇಬೇಕು ಎಂದು ನಾಯಕರಿಗೆ ಕಟ್ಟುನಿಟ್ಟಿನ ಗುರಿ ನಿಗದಿ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

ADVERTISEMENT

224 ಕ್ಷೇತ್ರಗಳಲ್ಲೂ ಏಕ ಪ್ರಕಾರವಾಗಿ ಕಠಿಣ ಪ್ರಯತ್ನ ಹಾಕಲೇಬೇಕು. ಆಯಾ ಭಾಗದ ಜಿಲ್ಲೆಗಳಿಗೆ ತಕ್ಕಂತೆ ಕಾರ್ಯತಂತ್ರ ರೂಪಿಸಬೇಕು. ಗೆಲ್ಲಬಹುದಾದ ಅಭ್ಯರ್ಥಿಗಳಿಗೆ ಆದ್ಯತೆ ನೀಡಬೇಕು. ಸಚಿವರು ತಮ್ಮ ತಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ ಕನಿಷ್ಠ 3 ರಿಂದ 4 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲಿಸಲು ಏನೇನು ಮಾಡಬೇಕು ಎಂಬ ಬಗ್ಗೆ ತೀರ್ಮಾನಿಸಿ ಮಾಹಿತಿ ನೀಡಬೇಕು ಎಂದು ಸೂಚಿಸಿದ್ದಾರೆ.

‘ಬಿಜೆಪಿಗೆ ಹಳೇ ಮೈಸೂರು ಪ್ರದೇಶದಲ್ಲಿ ನೆಲೆ ಇಲ್ಲ ಎಂಬ ವಾದದಲ್ಲಿ ಹುರುಳಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಶೇ 52 ರಷ್ಟು ಮತಗಳಿಸಿದೆ. ಬಿಜೆಪಿ ಗೆಲ್ಲದೇ ಇರುವ ಕ್ಷೇತ್ರಗಳಲ್ಲೂ ಪ್ರತಿಸ್ಪರ್ಧಿ ಪಕ್ಷಗಳಿಗಿಂತಲೂ ಹೆಚ್ಚು ಮತಗಳನ್ನು ಗಳಿಸಿರುವಾಗ, ನೆಲೆ ಇಲ್ಲ ಎಂದು ಯಾವ ಆಧಾರದಲ್ಲಿ ಹೇಳುತ್ತೀರಿ. ಪ್ರಾಮಾಣಿಕ ಪ್ರಯತ್ನ ಹಾಕಬೇಕು’ ಎಂದು ತಾಕೀತು ಮಾಡಿದ್ದಾರೆ.

‘2014 ಮತ್ತು 2019ರ ಲೋಕಸಭೆ ಚುನಾವಣೆ, ಆ ಬಳಿಕ ನಡೆದ ವಿಧಾನಸಭಾ ಚುನಾವಣಾ ಸಂದರ್ಭಗಳಲ್ಲಿ ಬಿಜೆಪಿ ಗೆಲ್ಲುವುದಿಲ್ಲ, ಪಕ್ಷಕ್ಕೆ ನೆಲೆಯೇ ಇಲ್ಲ ಎಂದು ಲೇವಡಿ ಮಾಡುತ್ತಿದ್ದರು. ಆದರೆ, ನಮ್ಮ ಪರಿಶ್ರಮ ಈ ವ್ಯಾಖ್ಯಾನಕಾರರ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿತು. ಜನರಿಗೆ ನಮ್ಮ ಕೆಲಸಗಳು ಮತ್ತು ಅಭಿವೃದ್ಧಿಯ ವಿಚಾರವನ್ನು ಸಮರ್ಥವಾಗಿ ತಲುಪಿಸಿದೆವು. ಕಾರ್ಯಕರ್ತರು ಹಗಲಿರುಳೆನ್ನದೇ ಕೆಲಸ ಮಾಡಿದ್ದರಿಂದ ಯಶಸ್ಸು ಸಿಕ್ಕಿತು. ಉತ್ತರ
ಪ್ರದೇಶ, ಗುಜರಾತ್‌, ಗೋವಾ, ಉತ್ತರಾಖಂಡ್‌ನಲ್ಲೂ ಇದೇ ರೀತಿ ಯಶಸ್ಸು ಸಿಕ್ಕಿದೆ. ಆದ್ದರಿಂದ ಪ್ರತಿಕೂಲ ಸ್ಥಿತಿಯನ್ನು ಅನುಕೂಲಕರವಾಗಿ ಪರಿವರ್ತಿಸಿಕೊಂಡು ಯಶಸ್ಸಿನತ್ತ ಮುನ್ನಡೆಸಬೇಕಾಗಿದೆ’ ಎಂದು ನಾಯಕರಿಗೆ ಶಾ ಅವರು ಮನವರಿಕೆ ಮಾಡಿದರು’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.