ADVERTISEMENT

ಅಮೂಲ್ಯ ಪ್ರಕರಣ: ಎನ್‌ಐಎಗೆ ವಹಿಸಲು ಕೋರಿ ರಿಟ್

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 22:04 IST
Last Updated 19 ಜೂನ್ 2020, 22:04 IST
ಅಮೂಲ್ಯಳನ್ನು ಕರೆದೊಯ್ಯುತ್ತಿರುವ ಮಹಿಳಾ ಸಿಬ್ಬಂದಿ
ಅಮೂಲ್ಯಳನ್ನು ಕರೆದೊಯ್ಯುತ್ತಿರುವ ಮಹಿಳಾ ಸಿಬ್ಬಂದಿ   

ಬೆಂಗಳೂರು: ‘ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿ ದೇಶದ್ರೋಹ ಆರೋಪ ಎದುರಿಸುತ್ತಿರುವ ಅಮೂಲ್ಯ ಲಿಯೋನಾ ನರೋನಾ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ವಹಿಸಬೇಕು’ ಎಂದು ಕೋರಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಲಾಗಿದೆ.

ಮಂಡ್ಯದ ವಕೀಲ ಎಚ್. ಎಲ್. ವಿಶಾಲ ರಘು ಸಲ್ಲಿಸಿರುವ ಈ ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

‘ಪ್ರಕರಣ ದಾಖಲಿಸಿರುವ ಉಪ್ಪಾರಪೇಟೆ ಪೊಲೀಸರು ಮತ್ತು ತನಿಖಾಧಿಕಾರಿ ನಿಗದಿತ ಅವಧಿಯಲ್ಲಿ ತನಿಖಾ ವರದಿ ಹಾಗೂ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಇದರಿಂದಾಗಿಯೇ ಕಾನೂನಿನಡಿಯ ಅವಕಾಶ ಬಳಸಿಕೊಂಡು ಅಮೂಲ್ಯ ಜಾಮೀನು ಪಡೆದಿದ್ದಾರೆ. ಆದ್ದರಿಂದ, ತನಿಖಾಧಿಕಾರಿ ಅಮಾನತು ಮಾಡಲು ಮತ್ತು ಅಮೂಲ್ಯ ಜಾಮೀನು ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು' ಎಂದು ಅರ್ಜಿದಾರರು ಕೋರಿದ್ದಾರೆ.

ADVERTISEMENT

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ: ಅಮೂಲ್ಯ ಲಿಯೋನ್ ವಿರುದ್ಧ ದಾಖಲಾಗಿರುವ ದೇಶದ್ರೋಹ ಪ್ರಕರಣದಲ್ಲಿ ಸರ್ಕಾರದ ಪರ ವಾದಿಸಲು ಐ.ಎಸ್.ಪ್ರಮೋದ್ ಚಂದ್ರ ಅವರನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ ನೇಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.