ADVERTISEMENT

ಒಳಮೀಸಲಿಗೆ ಅಲೆಮಾರಿಗಳ ಪರಿಗಣಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2025, 15:37 IST
Last Updated 16 ಜನವರಿ 2025, 15:37 IST
ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ನೇತೃತ್ವದಲ್ಲಿ 49 ಅಲೆಮಾರಿ ಬುಡಕಟ್ಟು ಸಮುದಾಯಗಳ ಪ್ರತಿನಿಧಿಗಳು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್.ನಾಗಮೋಹನ್‌ ದಾಸ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು
ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ನೇತೃತ್ವದಲ್ಲಿ 49 ಅಲೆಮಾರಿ ಬುಡಕಟ್ಟು ಸಮುದಾಯಗಳ ಪ್ರತಿನಿಧಿಗಳು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್.ನಾಗಮೋಹನ್‌ ದಾಸ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು   

ಬೆಂಗಳೂರು: ‘ಪರಿಶಿಷ್ಟ ಜಾತಿಗಳಲ್ಲಿನ ಒಳಮೀಸಲಾತಿ ಸಂಬಂಧ ಸರ್ಕಾರಕ್ಕೆ ಸಲಹೆ ನೀಡುವಾಗ ರಾಜ್ಯದಲ್ಲಿನ 49 ಅಲೆಮಾರಿ ಸಮುದಾಯಗಳನ್ನೂ ಪರಿಗಣಿಸಬೇಕು’ ಎಂದು ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾವು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ ದಾಸ್‌ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ.

ಮಹಾಸಭಾದ ರಾಜ್ಯಾಧ್ಯಕ್ಷ ಬಿ.ಎಲ್‌.ಹನುಮಂತಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ನಾಗರಾಜ್‌ ಎಚ್‌.ಸಿ ನೇತೃತ್ವದಲ್ಲಿ 49 ಅಲೆಮಾರಿ ಸಮುದಾಯಗಳ ಪ್ರತಿನಿಧಿಗಳು ನಾಗಮೋಹನ್‌ ದಾಸ್‌ ಅವರನ್ನು ಗುರುವಾರ ಭೇಟಿ ಮಾಡಿ, ಮನವಿ ಪತ್ರ ಸಲ್ಲಿಸಿದರು. 

‘ಪರಿಶಿಷ್ಟ ಜಾತಿಯಲ್ಲಿರುವ ನೂರೊಂದು ಸಮುದಾಯಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ‘ಜಾತಿವಾರು ಸಮೀಕ್ಷೆ’ಯ ವರದಿಗಳನ್ನು ಸರ್ಕಾರ ಪ್ರಕಟಿಸಿಲ್ಲ. ಅಲೆಮಾರಿ ಸಮುದಾಯಗಳಿಗೆ ಸಂಬಂಧಿಸಿದ ದತ್ತಾಂಶಗಳು ಲಭ್ಯವಿಲ್ಲ’ ಎಂದು ಮನವಿಯಲ್ಲಿ ವಿವರಿಸಿದೆ.

ADVERTISEMENT

‘ರಾಜ್ಯದಲ್ಲಿ ಎಲ್ಲಾ ಹಂತ ಮತ್ತು ಕ್ಷೇತ್ರದಲ್ಲೂ ಅತ್ಯಂತ ಹಿಂದುಳಿದವರು ಅಲೆಮಾರಿ ಸಮುದಾಯದವರೇ ಆಗಿದ್ದಾರೆ. ನೀವು ಈ ಸಮುದಾಯಗಳ ಸಮೀಕ್ಷೆ ನಡೆಸಿ, ಆ ದತ್ತಾಂಶದ ಆಧಾರದ ಮೇಲೆ ಸರ್ಕಾರಕ್ಕೆ ಸಲಹೆ ನೀಡಬೇಕು. ಒಳಮೀಸಲಾತಿಗೆ ಶಿಫಾರಸು ಮಾಡುವಾಗ ಅಲೆಮಾರಿ ಸಮುದಾಯಗಳನ್ನೂ ಪರಿಗಣಿಸಬೇಕು’ ಎಂದು ಕೋರಿದೆ.

‘ಅಲೆಮಾರಿ ಸಮುದಾಯಗಳ ಅಧ್ಯಯನಕ್ಕೆ ಎಂದು 2008ರಲ್ಲಿ ಕೇಂದ್ರ ಸರ್ಕಾರ ರಚಿಸಿದ್ದ ಬಾಲಕೃಷ್ಣ ರೇಣುಕೆ ರಾಷ್ಟ್ರೀಯ ಆಯೋಗ ಮತ್ತು 2015ರ ಬಿಕ್ಕುರಾಮ್‌ ಜೀ ಇದಾತೆ ಆಯೋಗದ ವರದಿಗಳ ಪ್ರಕಾರ, ಈ ಸಮುದಾಯಗಳ ಜನಸಂಖ್ಯಾ ಪ್ರಮಾಣ ಶೇ 10ರಷ್ಟಿದೆ. ಇದರ ಆಧಾರದಲ್ಲಿ ಶೇ 7ರಷ್ಟು ಮೀಸಲಾತಿ ಕೇಳಿ ಸರ್ಕಾರಕ್ಕೂ ಪತ್ರ ಬರೆಯಲಾಗಿದೆ. ಸರ್ಕಾರಕ್ಕೆ ಶಿಫಾರಸು ಮಾಡುವಲ್ಲಿ ಈ ದತ್ತಾಂಶಗಳನ್ನು ಬಳಸಿಕೊಳ್ಳಬಹುದು ಎಂದು ಪತ್ರದಲ್ಲಿ ವಿವರಿಸಲಾಗಿದೆ’ ಎಂದು ಮಹಾಸಭಾದ ಗೌರವಾಧ್ಯಕ್ಷ ಸಿ.ಎಸ್‌.ದ್ವಾರಕನಾಥ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.