ADVERTISEMENT

ಕೊರೊನಾ ಸೋಂಕಿತನಿಗೆ ಕಲ್ಲೇಟು: ಎಚ್.ಡಿ.ಕೋಟೆಯ ಕಾರಾಪುರದಲ್ಲಿ ಅಮಾನವೀಯ ವರ್ತನೆ

​ಪ್ರಜಾವಾಣಿ ವಾರ್ತೆ
Published 14 ಮೇ 2021, 19:31 IST
Last Updated 14 ಮೇ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಎಚ್.ಡಿ.ಕೋಟೆ: ತಾಲ್ಲೂಕಿನ ಕಾರಾಪುರ ಗ್ರಾಮದಲ್ಲಿ ಕೊರೊನಾ ಸೋಂಕಿತರೊಬ್ಬರನ್ನು ಊರಿನಿಂದ ಆಚೆ ಹೋಗುವಂತೆ ಬಲವಂತ ಮಾಡಿದ್ದಲ್ಲದೇ, ಅವರ ಮೇಲೆ ಬುಧವಾರ ಕಲ್ಲಿನಿಂದ ಹಲ್ಲೆ ನಡೆಸಲಾಗಿದೆ.

ಆರೋಪಿಗಳಾದ, ಕಾರಾಪುರದ ದಾಸೇಗೌಡ ಮತ್ತು ಬಲರಾಮ ಪರಾರಿಯಾಗಿದ್ದು, ಅವರ ವಿರುದ್ಧ ಬೀಚನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪಿಎಸ್‌ಐ ಜಯಪ್ರಕಾಶ್‌ ತಿಳಿಸಿದರು.

ಸೋಂಕಿತ ವ್ಯಕ್ತಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಆ ಬಳಿಕ ಎಚ್.ಡಿ.ಕೋಟೆ ತಾಲ್ಲೂಕಿನ ಏಕಲವ್ಯ ವಸತಿ ಶಾಲೆಯ ಕೊವೀಡ್ ಆರೈಕೆ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಟಿ.ರವಿಕುಮಾರ್ ಮಾಹಿತಿ ನೀಡಿದರು.

ADVERTISEMENT

‘ಅವರ ಕುಟುಂಬಕ್ಕೂ ರಕ್ಷಣೆ ಒದಗಿಸಲಾಗಿದೆ. ಅವರಿಗೆ ಆಹಾರದ ಕಿಟ್ ವಿತರಿಸಿ, ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಎನ್.ಬೆಳತ್ತೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ವಾಮಿ ತಿಳಿಸಿದರು.

ಈ ಬಗ್ಗೆ ದೂರವಾಣಿಯಲ್ಲಿ ‘ಪ್ರಜಾವಾಣಿ’ ಜೊತೆ ಮಾತನಾಡಿದ ಸೋಂಕಿತ, ‘ನನಗೆ ಸೋಂಕು ಇರುವುದು ಬುಧವಾರ ಮಧ್ಯಾಹ್ನ ತಿಳಿಯಿತು. ಆಂಬುಲೆನ್ಸ್‌ಗೆ ಕಾಯುತ್ತಾ ಒಬ್ಬನೇ ಕುಳಿತಿದ್ದೆ. ಆಗ ಊರಿನಿಂದ ಹೊರಹೋಗುವಂತೆ ಹೇಳಿ, ಕಲ್ಲಿನಿಂದ ಹೊಡೆದರು. ರಕ್ಷಣೆಗೆ ಬಂದ ತಂದೆ–ತಾಯಿ ಮೇಲೂ ಹಲ್ಲೆ ಮಾಡಿ, ಮನೆಗೂ ಕಲ್ಲು ಎಸೆದರು’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.