ADVERTISEMENT

ರಾಜ್ಯದ ಅಗತ್ಯ ಪೂರೈಸಲು ದೆಹಲಿಯಲ್ಲಿ ಅಧಿಕಾರಿ ನೇಮಕ: ಸದಾನಂದ ಗೌಡ

1,400 ಟನ್‌ ಆಮ್ಲಜನಕ ಪೂರೈಕೆಗೆ ಭರವಸೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2021, 21:46 IST
Last Updated 25 ಏಪ್ರಿಲ್ 2021, 21:46 IST
ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ
ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ   

ಬೆಂಗಳೂರು: ರಾಜ್ಯಕ್ಕೆ 1,400 ಟನ್‌ ವೈದ್ಯಕೀಯ ಆಮ್ಲಜನಕ ನೀಡಲು ಕೇಂದ್ರ ಸಿದ್ಧವಿದ್ದು, ಕೋವಿಡ್‌ಗೆ ಸಂಬಂಧಿಸಿದಂತೆ ರಾಜ್ಯ ಎಲ್ಲ ಅಗತ್ಯಗಳನ್ನು ಪೂರೈಸಲು ದೆಹಲಿಯಲ್ಲಿ ಹಿರಿಯ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.

ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಕುರಿತು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌, ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮತ್ತು ಹಿರಿಯ ಅಧಿಕಾರಿಗಳ ಜೊತೆ ವಿಧಾನ ಸೌಧದಲ್ಲಿ ಭಾನುವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಕೋವಿಡ್‌ ನಿಯಂತ್ರಿಸಲು ಅಗತ್ಯವಾದ ನೆರವಿನ ಬಗ್ಗೆ ಒಂದು ವಾರ ಮೊದಲೇ ತಿಳಿಸಿದರೆ, ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಸಚಿವರು ಒಂದಾಗಿ, ಬೇಡಿಕೆ ಈಡೇರಿಸಲು ಶ್ರಮಿಸುತ್ತೇವೆ’ ಎಂದರು.

ADVERTISEMENT

‘ಮೇ ತಿಂಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದ್ದು, 1,400 ಟನ್ ಆಕ್ಸಿಜನ್, ರೆಮ್‌ಡಿಸಿವಿರ್ ಚುಚ್ಚುಮದ್ದು ಸೇರಿದಂತೆ ಹೆಚ್ಚುವರಿ ಸೌಲಭ್ಯಗಳನ್ನು ನೀಡಬೇಕು’ ಎಂದು ಸುಧಾಕರ್ ಸಭೆಯಲ್ಲಿ ಪ್ರಸ್ತಾಪಿಸಿದರು.

ಅದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಸದಾನಂದಗೌಡ, ‘ರಾಜ್ಯಕ್ಕೆ ಅಗತ್ಯ ನೆರವು ಒದಗಿಸಲು ದೆಹಲಿಯ ಕಚೇರಿಯಲ್ಲಿ ಹಿರಿಯ ಅಧಿಕಾರಿಯೊಬ್ಬರನ್ನು ನಿಯೋಜಿಸಿದ್ದೇನೆ’ ಎಂದರು.

‘ಇದೇ 30ರವರೆಗಿನ ಬಳಕೆಗಾಗಿ ರಾಜ್ಯಕ್ಕೆ 1 ಲಕ್ಷ ರೆಮ್‌ಡಿಸಿವಿರ್‌ ವೈಯಲ್ಸ್ ಬೇಕು ಎಂದು ರಾಜ್ಯ ಸರ್ಕಾರ ಬೇಡಿಕೆ ಇಟ್ಟಿತ್ತು. ಈಗ 1.22 ಲಕ್ಷ ವೈಯಲ್ಸ್ ಹಂಚಿಕೆ ಮಾಡಲಾಗಿದೆ. ಆಮ್ಲಜನಕ ಬಳಕೆ ಪ್ರಮಾಣ ಮೇಲೆ ರೆಮ್‌ಡಿಸಿವಿರ್‌ ಪ್ರಮಾಣ ನಿಗದಿ ಮಾಡುವುದು ಸರಿಯಲ್ಲ. ಕೊರೊನಾ ಸೋಂಕಿತರ ಸಂಖ್ಯೆ ಆಧರಿಸಿ ಹಂಚಿಕೆಯಾಗಬೇಕು ಎಂಬುದು ರಾಜ್ಯಗಳ ಮತ್ತು ನಮ್ಮೆಲ್ಲರ ಅಭಿಪ್ರಾಯವಾಗಿತ್ತು. ಅದರಂತೆ, ರೆಮ್‌ಡಿಸಿವರ್ ಮರುಹಂಚಿಕೆ ಮಾಡಲಾಗಿದೆ. ಅದೇ ರೀತಿ 800 ಮೆಟ್ರಿಕ್ ಟನ್ ಆಮ್ಲಜನಕ ಹಂಚಿಕೆ ಮಾಡಲಾಗಿದೆ’ ಎಂದರು.

‘ಲಸಿಕಾ ಅಭಿಯಾನಕ್ಕೆ ವೇಗ ನೀಡಲು ರಾಜ್ಯವು ಹೆಚ್ಚಿನ ಲಸಿಕೆ ಪೂರೈಕೆಗೆ ಬೇಡಿಕೆ ಇಟ್ಟಿದೆ. ಈ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ಪ್ರಸ್ತಾವಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.