ADVERTISEMENT

ಇಚ್ಛಾಮರಣದ ವರ ಪಡೆದ ರಾಜ್ಯ ಸಮ್ಮಿಶ್ರ ಸರ್ಕಾರ: ಸಚಿವ ಹೆಗಡೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 11:16 IST
Last Updated 7 ಫೆಬ್ರುವರಿ 2019, 11:16 IST
ಗುರುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮಾತನಾಡಿದರು.
ಗುರುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮಾತನಾಡಿದರು.   

ಮುಂಡಗೋಡ (ಉತ್ತರ ಕನ್ನಡ): ‘ರಾಜ್ಯ ಸಮ್ಮಿಶ್ರ ಸರ್ಕಾರ ಇಚ್ಛಾಮರಣದ ವರವನ್ನು ಪಡೆದಿದೆ. ಇವತ್ತು ಹಾವು, ಏಣಿ ಆಟ ಮುಂದುವರಿದಿದೆ. ಕಾಂಗ್ರೆಸ್‌ನವರು ತುಳಸಿ ನೀರು ಬಿಡುತ್ತೇವೆ ಎನ್ನುತ್ತಿದ್ದಾರೆ. ಕುಮಾರಸ್ವಾಮಿ ಇರಲೋ ಬೇಡವೋ ಎಂದು ಚಿಂತಿಸುತ್ತಿದ್ದಾರೆ’ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವ್ಯಂಗ್ಯವಾಡಿದರು.

ತಾಲ್ಲೂಕಿನ ಮಳಗಿಯಲ್ಲಿ ಗುರುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಕುಮಾರಸ್ವಾಮಿ ಸರ್ಕಾರ ಒಂಥರಾ ನೂಲಲ್ಯಾಕ ಚೆನ್ನಿ, ನೂಲಲ್ಯಾಕ ಚೆನ್ನಿ ಎನ್ನುವಂತಿದೆ. ರಾಟಿ ಇದ್ದರೆ, ನೂಲು ಇಲ್ಲ. ನೂಲು ಇದ್ದರೆ ಸೂಜಿ ಇಲ್ಲ ಎನ್ನುತ್ತ ನೆಪಗಳನ್ನು ಹೇಳುತ್ತಿದೆ. ರಾಜ್ಯ ಸರ್ಕಾರವನ್ನು ಕೆಡವಲು ಬಿಜೆಪಿಯವರು ಏನೂ ಮಾಡುತ್ತಿಲ್ಲ. ಕುದುರೆ ವ್ಯಾಪಾರ ಮತ್ತೊಂದು ಏನೂ ಇಲ್ಲ. ಯಡಿಯೂರಪ್ಪ ನಿದ್ದೆಯಲ್ಲಿ ಗೊರಕೆ ಹೊಡೆದ್ರೂ ರಾಜ್ಯ ಸರ್ಕಾರ ಅಲುಗಾಡುತ್ತಿದೆ. ಇನ್ನು ಎದ್ದು ನಿಂತರೆ ಉಳಿದೀತೇ’ಎಂದು ಪ್ರಶ್ನಿಸಿದರು.

ADVERTISEMENT

‘ಸದ್ಯದ ಭವಿಷ್ಯದಲ್ಲಿ ಇಚ್ಛಾಮರಣದ ಸರ್ಕಾರ ಏನಾಗುತ್ತದೆ ಕಾದು ನೋಡಿ. ಹೆಚ್ಚಿನದನ್ನು ಹೇಳುವುದಿಲ್ಲ’ಎಂದರು.

‘ಮಂಗನಿಂದ ಮಾನವ ಹೇಗಾದ ಎಂಬುದಕ್ಕೆ ಡಾರ್ವಿನ್ ಸಿದ್ಧಾಂತವಿದೆ. ಆದರೆ, ರಾಹುಲ್ ಮಾತ್ರ ಗಾಂಧಿ ಹೆಂಗಾದ ಎನ್ನುವುದು ತಿಳಿಯುತ್ತಿಲ್ಲ. ಒಂಥರಾ ಮೆಣಸಿನಕಾಯಿ ಗಿಡದಲ್ಲಿ ಟೊಮೆಟೊ ಬೆಳೆದಂತೆ. ಕಳೆದ 70 ವರ್ಷಗಳಿಂದ ಗರೀಬಿ ಹಠಾವೋ ಎನ್ನುತ್ತಿದ್ದವರು ಈಗ ಮೋದಿ ಹಠಾವೋ ಎನ್ನುತ್ತಿದ್ದಾರೆ. ನೀರಲ್ಲಿ ಬಿದ್ದವನನ್ನು ಮೇಲೆತ್ತಲು ಒಬ್ಬರಿಗೊಬ್ಬರು ಕೈ ಹಿಡಿದಿದ್ದಾರೆ. ಮಹಾಘಟಬಂಧನ ಸಾಮೂಹಿಕ ಆತ್ಮಹತ್ಯೆ ಇದ್ದಂತೆ. ಮೂರು ತಿಂಗಳಲ್ಲಿ ಸಾಮೂಹಿಕ ಘಟ ಶ್ರದ್ಧಾ ನಡೆಯಲಿದೆ. ಅಂದು ಭಗವಂತ ದೇಶ ಲೂಟಿ ಮಾಡಿದವರಿಗೆ ಪ್ರಾಯಶ್ಚಿತ ನೀಡಲಿದ್ದಾನೆ’ಎಂದು ಕುಟುಕಿದರು.

‘ವಿಷ ಕುಡಿದೇ ಬದುಕಿದವರು ನಾವು, ಅಮೃತ ಕೊಟ್ಟರೆ ಬದುಕುವುದಿಲ್ಲ. ಮಾಧ್ಯಮಗಳು ಏನು ಬೇಕಾದರೂ ಬರೆಯಲಿ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅನಂತಕುಮಾರ ಏನೂ ಹೇಳಿದರೂ ವಿವಾದಾತ್ಮಕ ಎಂದೇ ಬಿಂಬಿಸುತ್ತಿದ್ದಾರೆ’ಎಂದರು.

'ಈ ಕ್ಷೇತ್ರದಲ್ಲಿ (ಉತ್ತರ ಕನ್ನಡ) ಬೇಕಾದರೆ ರಾಹುಲ್, ಪ್ರಿಯಾಂಕಾ ಯಾರೇ ಸ್ಪರ್ಧಿಸಲಿ' ಎಂದು ಸವಾಲೆಸೆದ ಅವರು, 'ಬಿಜೆಪಿ ಕಾರ್ಯಕರ್ತರು ಕಾಲಿಟ್ಟರೆ ಜಗತ್ತು ಅಲುಗಾಡಬೇಕು. ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸು ಎಂದರೂ ಆಗ ಗೆಲ್ಲುವ ತಾಕತ್ತು ನನಗಿರಲಿಕ್ಕಿಲ್ಲ. ಆದರೆ, ಐದು ಸಲ ಎಂಪಿ ಮಾಡಿದ್ದು ಕಾರ್ಯಕರ್ತರ ಶ್ರಮ ಹಾಗೂ ಸಂಘಟನೆಯಿಂದ ಮಾತ್ರ. ಇದಕ್ಕಾಗಿ ಕಾರ್ಯಕರ್ತರ ಕಾಲು ಮುಟ್ಟಿ ನಮಸ್ಕರಿಸುವೆ' ಎಂದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.