ADVERTISEMENT

ಕಾಂಗ್ರೆಸ್ ಮನೆಯ ಒಳಹೊಕ್ಕಿ ಹೊಡೆಯಬೇಕು: ಅನಂತಕುಮಾರ್ ಹೆಗಡೆ

ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 12:16 IST
Last Updated 18 ನವೆಂಬರ್ 2019, 12:16 IST
   

ಶಿರಸಿ: ‘ಒಬ್ಬೊಬ್ಬರಾಗಿಯೇ ಬಿಜೆಪಿ ಬರುತ್ತಿದ್ದಾರೆ. ಸಿದ್ರಾಮಣ್ಣ ಅವರೂ ಲೈನ್ ಹಚ್ಚಿ ನಿಂತಿದ್ದಾರೆ’ ಎನ್ನುವ ಮೂಲಕ ಸಂಸದ ಅನಂತಕುಮಾರ್ ಹೆಗಡೆ ಅಚ್ಚರಿ ಮೂಡಿಸಿದರು.

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶಿವರಾಮ ಹೆಬ್ಬಾರ್ ನಾಮಪತ್ರ ಸಲ್ಲಿಸುವ ಪ್ರಯುಕ್ತ ಯಲ್ಲಾಪುರದಲ್ಲಿ ಸೋಮವಾರ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು. ‘ರಾಮ ಜನ್ಮಭೂಮಿ ವಿಚಾರವಾಗಿ ಸುಪ್ರೀಂ ಕೋರ್ಟ್ ತೀರ್ಪು ಬಂದಾಗ ಮುಸ್ಲಿಮರು ವಿರೋಧ ಮಾಡಿಲ್ಲ. ಆದರೆ, ಕುರ್ಚಿಗೆ ಬೆಂಕಿ ಬಿದ್ದವರ ಹಾಗೆ ಮಾಡಿದವರು ಕಾಂಗ್ರೆಸ್‌ನವರು. ಇದಕ್ಕಾಗಿಯೇ ಕಾಂಗ್ರೆಸ್ ಅನ್ನು ಈ ದೇಶದಲ್ಲಿ ಉಳಿಸಬಾರದು. ಕಾಂಗ್ರೆಸ್ ಮನೆಯ ಒಳಹೊಕ್ಕಿ ಹೊಡೆಯಬೇಕು. ಕಾಂಗ್ರೆಸ್‌ ಅನ್ನು ಒಮ್ಮೆ ಈ ದೇಶದ ಗಡಿಯಿಂದ ಹೊರ ಹಾಕಬೇಕು. ಅದು ಬೇಕಿದ್ದರೆ ಪಾಕಿಸ್ತಾನಕ್ಕೆ ಹೋಗಲಿ. ಕಾಂಗ್ರೆಸ್‌ನವರನ್ನು ಕಂಡರೆ ಇಮ್ರಾನ್‌ ಖಾನ್‌ಗೆ ಬಹಳ ಪ್ರೀತಿ. ಮಾತೆತ್ತಿದರೆ ಕಾಂಗ್ರೆಸ್‌ನವರೆಲ್ಲ ನನ್ನ ಜೊತೆಗಿದ್ದಾರೆ ಎನ್ನುತ್ತಾರೆ ಇಮ್ರಾನ್ ಖಾನ್ ಹಾಗೂ ಅಲ್ಲಿನ ರಾಜಕಾರಣಿಗಳು’ ಎಂದು ಲೇವಡಿ ಮಾಡಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಮಾತನಾಡಿ, ‘ಬಿಜೆಪಿಯಲ್ಲಿದ್ದು ಕಾಂಗ್ರೆಸ್‌ಗೆ ಹೋಗಿದ್ದ ಶಿವರಾಮ ಹೆಬ್ಬಾರ್, ತಿರುಗಿ ಬರುವಾಗು 17 ಶಾಸಕರು, ಸಾವಿರಾರು ಕಾರ್ಯಕರ್ತರನ್ನು ಕರೆತಂದಿದ್ದಾರೆ. ಕಾಂಗ್ರೆಸ್‌ನ ಹತ್ತಾರು ಶಾಸಕರ ಅರ್ಜಿಗಳು ನಮ್ಮ ಕಿಸೆಗೆ ಬಂದಿವೆ. ಈ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ ಕಾರ್ಯಾಲಯದಲ್ಲಿ ಇಬ್ಬರು ಮಾತ್ರ ಇರುತ್ತಾರೆ ಒಬ್ಬರು ಸಿದ್ದರಾಮಯ್ಯ ಇನ್ನೊಬ್ಬರು ದಿನೇಶ ಗುಂಡೂರಾವ್’ ಎಂದರು.

ADVERTISEMENT

ಅಸಮಾಧಾನ ಸಹಜ: ‘ಟಿಕೆಟ್ ವಂಚಿತರಲ್ಲಿ ಅಸಮಾಧಾನ ಸಹಜ. ಬರುವ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಲಾಗುವುದು. ಶಾಸಕರು ಅವರಾಗಿ ಪಕ್ಷದಿಂದ ಹೊರಬಂದಿದ್ದೇ ವಿನಾ ನಾವು ಹೇಳಿಲ್ಲ. ಈಗ ನಮ್ಮ ಪಕ್ಷಕ್ಕೆ ಬಂದಿದ್ದಾರೆ, ಅವರಿಗೆ ಟಿಕೆಟ್ ನೀಡಿದ್ದೇವೆ’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ನಳಿನ್‌ಕುಮಾರ್ ಹೇಳಿದರು. 'ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಿಲ್ಲ. ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ, ಮುಖ್ಯಮಂತ್ರಿಯನ್ನಾಗಿ ಪಕ್ಷ ಮಾಡಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.