ADVERTISEMENT

ಜೆಡಿಎಸ್‌ ಪ್ರಬಲ ರಾಜಕೀಯ ಶಕ್ತಿ ಎಂದ ಅನಂತಕುಮಾರ್‌ ಪುತ್ರಿ: ಎಚ್‌ಡಿಕೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 14:30 IST
Last Updated 29 ಜುಲೈ 2021, 14:30 IST
ಅನಂತಕುಮಾರ್‌ ಪುತ್ರಿ ವಿಜೇತಾ (ಟ್ವಿಟರ್‌ ಚಿತ್ರ: @vijeta_at)
ಅನಂತಕುಮಾರ್‌ ಪುತ್ರಿ ವಿಜೇತಾ (ಟ್ವಿಟರ್‌ ಚಿತ್ರ: @vijeta_at)   

ಬೆಂಗಳೂರು: ಕೇಂದ್ರದ ಮಾಜಿ ಸಚಿವ, ದಿವಂಗತ ಅನಂತಕುಮಾರ್‌ ಅವರ ಪುತ್ರಿ ವಿಜೇತಾ ಅನಂತಕುಮಾರ್‌ ಅವರು ಜೆಡಿಎಸ್‌ ಕುರಿತು ಮಾಡಿರುವ ಟ್ವೀಟ್‌ವೊಂದು ಭಾರಿ ಸಂಚಲನ ಸೃಷ್ಟಿ ಮಾಡಿದೆ.

‘ಕರ್ನಾಟಕ ರಾಜಕೀಯ ನಿಜಕ್ಕೂ ಏಕೆ ಆಸಕ್ತಿದಾಯಕವಾಗಿದೆ?‘ ಎಂದು ಪ್ರಶ್ನೆ ಕೇಳಿರುವ ಅವರು, ‘ಜೆಡಿಎಸ್ ಇನ್ನೂ ಪ್ರಬಲ ರಾಜಕೀಯ ಶಕ್ತಿಯಾಗಿ ಉಳಿದಿದೆ,’ ಎಂದು ಅದೇ ಟ್ವೀಟ್‌ನಲ್ಲಿ ಉತ್ತರವನ್ನೂ ಕೊಟ್ಟಿದ್ದಾರೆ.

ವಿಜೇತ ಅವರ ಈ ಟ್ವೀಟ್‌ಗೆ ಭಾರಿ ಪ್ರತಿಕ್ರಿಯೆ ಸಿಕ್ಕಿದ್ದು, ಹಲವರು ಭಿನ್ನ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ADVERTISEMENT

ಇನ್ನು ಈ ಕುರಿತು ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ, ‘ಅನಂತಕುಮಾರ್‌ ಅವರು ನನ್ನ ಸ್ನೇಹಿತರಾಗಿದ್ದವರು. ಜೆಡಿಎಸ್‌ ಎಲ್ಲಿದೆ ಎಂಬ ಪ್ರಶ್ನೆಗಳಿಗೆ ಅನಂತಕುಮಾರ್‌ ಅವರ ಪುತ್ರಿ ಸೂಕ್ತ ರೀತಿಯ ಉತ್ತರ ನೀಡಿದ್ದಾರೆ. ಅವರನ್ನು ನಾನು ಅಭಿನಂದಿಸುತ್ತೇನೆ,‘ ಎಂದು ಹೇಳಿದ್ದಾರೆ.

ಅನಂತಕುಮಾರ್‌ ನೆನೆದ ಪ್ರಜ್ವಲ್‌

‘ಜೆಡಿಎಸ್‌ ಕರ್ನಾಟಕದಲ್ಲಿ ಪ್ರಬಲ ರಾಜಕೀಯ ಶಕ್ತಿಯಾಗಿ ಉಳಿದಿದೆ’ ಎಂಬ ವಿಜೇತಾ ಅವರ ಟ್ವೀಟ್‌ಗೆ ಪ್ರತಿಯಾಗಿ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೆ, ದಿವಂಗತ ಅನಂತಕುಮಾರ್‌ ಅವರನ್ನು ಹೊಗಳಿದ್ದಾರೆ.

‘ಅನಂತ್ ಕುಮಾರ್ ಅವರು ರಾಜ್ಯವನ್ನು ಪ್ರತಿನಿಧಿಸುವಾಗ ಅವರು ಯಾವಾಗಲೂ ರಾಜ್ಯದ ಹಿತಾಸಕ್ತಿ ಪರವಾಗಿ ನಿಲ್ಲುತ್ತಿದ್ದರು. ಆದರೆ, ಇಂದು ಬಿಜೆಪಿ 25 ಸಂಸದರನ್ನು ಹೊಂದಿದ್ದರೂ ಯಾರೂ ರಾಜ್ಯಕ್ಕಾಗಿ ಧ್ವನಿ ಎತ್ತುತ್ತಿಲ್ಲ. ರಾಜ್ಯಕ್ಕಾಗಿ ಅನಂತಕುಮಾರ್‌ ನೀಡಿದ ಕೊಡುಗೆಗಾಗಿ ನಾವು ಯಾವಾಗಲೂ ಅವರಿಗೆ ಕೃತಜ್ಞರಾಗಿರುತ್ತೇವೆ,‘ ಎಂದು ಟ್ವೀಟ್‌ ಮಾಡಿದ್ದಾರೆ.

‘ಪ್ರಾದೇಶಿಕ ಪಕ್ಷ ಬಲಪಡಿಸಲು ಕೈಜೋಡಿಸಿ’

ವಿಜೇತಾ ಅವರ ಟ್ವೀಟ್‌ ಅನ್ನು ತಮ್ಮ ಅಭಿಪ್ರಾಯದೊಂದಿಗೆ ರೀಟ್ವೀಟ್‌ ಮಾಡಿರುವ ಜೆಡಿಎಸ್‌ ಸಾಮಾಜಿಕ ತಾಣ ವಿಭಾಗದ ಮುಖ್ಯಸ್ಥ ಪ್ರತಾಪ್‌ ಕಣಗಾಲ್‌, ‘ ಪ್ರಾದೇಶಿಕ ಪಕ್ಷ ಬಲಪಡಿಸಲು ಕೈಜೋಡಿಸಿ’ ಎಂದು ಕೋರಿದ್ದಾರೆ.

‘ನಿಮ್ಮ ಅಭಿಪ್ರಾಯ ವಾಸ್ತವ. ಜೆಡಿಎಸ್ ಕರ್ನಾಟಕದಲ್ಲಿ ಅತ್ಯಂತ ಪ್ರಬಲ ರಾಜಕೀಯ ಶಕ್ತಿಯಾಗಿದೆ. ಅದನ್ನು ಅನುಮೋದಿಸಿದ್ದಕ್ಕಾಗಿ ಧನ್ಯವಾದಗಳು. ಅನಂತ್ ಕುಮಾರ್ ಯಾವಾಗಲೂ ನಮ್ಮ ರಾಜ್ಯದ ಹಿತಾಸಕ್ತಿ ಪರವಾಗಿರುತ್ತಿದ್ದರು. ನಿಮ್ಮಂಥವರು ಪ್ರಾದೇಶಿಕ ಪಕ್ಷ ಜನತಾದಳವನ್ನು ಬಲಪಡಿಸಲು ಕೈಜೋಡಿಸಬೇಕು,‘ ಎಂದು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.