ADVERTISEMENT

ಶಕ್ತಿ ಯೋಜನೆಯ ಅಧ್ಯಯನಕ್ಕಾಗಿ ಆಂಧ್ರದ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2025, 16:15 IST
Last Updated 3 ಜನವರಿ 2025, 16:15 IST
ರಾಜ್ಯ ‘ಶಕ್ತಿ’ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಆಂಧ್ರಪ್ರದೇಶದ ಸಚಿವರು ಮತ್ತು ಅಧಿಕಾರಿಗಳ ತಂಡ ಶುಕ್ರವಾರ ಕೆಎಸ್‌ಆರ್‌ಟಿಸಿಗೆ ಭೇಟಿ ನೀಡಿ ಚರ್ಚಿಸಿತು
ರಾಜ್ಯ ‘ಶಕ್ತಿ’ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಆಂಧ್ರಪ್ರದೇಶದ ಸಚಿವರು ಮತ್ತು ಅಧಿಕಾರಿಗಳ ತಂಡ ಶುಕ್ರವಾರ ಕೆಎಸ್‌ಆರ್‌ಟಿಸಿಗೆ ಭೇಟಿ ನೀಡಿ ಚರ್ಚಿಸಿತು   

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ಶಕ್ತಿ’ ಮಹಿಳೆಯರ ಉಚಿತ ಪ್ರಯಾಣ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಆಂಧ್ರಪ್ರದೇಶದ ಸಚಿವರು ಮತ್ತು ಅಧಿಕಾರಿಗಳ ತಂಡ ಶುಕ್ರವಾರ ಕೆಎಸ್‌ಆರ್‌ಟಿಸಿಗೆ ಭೇಟಿ ನೀಡಿತು.

ಆಂಧ್ರದ ಸಾರಿಗೆ ಸಚಿವ ರಾಮಪ್ರಸಾದ್‌ ರೆಡ್ಡಿ, ಗೃಹ ಸಚಿವೆ ಅನಿತಾ ವಂಗಲಪುಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಗುಮ್ಮಿಡಿ ಸಂಧ್ಯಾರಾಣಿ, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆರ್ಥಿಕ ಇಲಾಖೆಯ ಕಾರ್ಯದರ್ಶಿ ಮತ್ತು ಅಧಿಕಾರಿಗಳು ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಗೆ ಭೇಟಿ ನೀಡಿ ಚರ್ಚಿಸಿದರು.

ಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಾರಿಗೆ ಇಲಾಖೆ ಕಾರ್ಯದರ್ಶಿ, ನಿಗಮದ ವ್ಯವಸ್ಥಾಪಕರು ಮಾಹಿತಿ ನೀಡಿದರು.

ADVERTISEMENT

ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-2ಕ್ಕೆ ಭೇಟಿ ನೀಡಿದ ತಂಡವು ಐರಾವತ ಕ್ಲಬ್ ಕಾಸ್ 2.0, ಐರಾವತ ಕ್ಲಬ್ ಕಾಸ್, ಅಂಬಾರಿ ಡ್ರೀಮ್ ಕ್ಲಾಸ್, ಪಲ್ಲಕ್ಕಿ, ಅಂಬಾರಿ ಉತ್ಸವ, ಫ್ಲೈ ಬಸ್, ನಗರ ಸಾರಿಗೆ, ರಾಜಹಂಸ ಹಾಗೂ ಅಶ್ವಮೇಧ ವಾಹನಗಳನ್ನು ವೀಕ್ಷಿಸಿತು.

ಘಟಕಗಳ ನಿರ್ವಹಣೆ, ವಾಹನಗಳಿಗೆ ನೀಡಿರುವ ಬ್ರ್ಯಾಂಡಿಗ್ ಹಾಗೂ ವಾಹನಗಳ ಪುನಶ್ಚೇತನದ ಬಗ್ಗೆ ಮಾಹಿತಿ ಪಡೆದರು. ಶಾಂತಿನಗರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಶಕ್ತಿ ಯೋಜನೆಯ ಫಲಾನುಭವಿಗಳಾದ ಮಹಿಳಾ ಪ್ರಯಾಣಿಕರ ಅನುಭವ ತಿಳಿದುಕೊಂಡರು.

ವಿಧಾನಸೌಧದ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಗ್ಯಾರಂಟಿ ಯೋಜನೆಗಳ ಆರ್ಥಿಕತೆ, ಸಾಧನೆಗಳ ಕುರಿತು ಚರ್ಚಿಸಿತು. ಶಕ್ತಿ ಯೋಜನೆಯ ಯಶಸ್ಸಿನಿಂದ ಆರ್ಥಿಕತೆಗೆ ಸಿಕ್ಕಿರುವ ಚೈತನ್ಯ ಮತ್ತು ಮಹಿಳಾ ಸಬಲೀಕರಣದ ದೃಷ್ಟಿಯಿಂದ ಆಗಿರುವ ಬದಲಾವಣೆಗಳ ಕುರಿತಂತೆ ಚರ್ಚಿಸಿ ಸಮಗ್ರ ಮಾಹಿತಿ ಪಡೆದುಕೊಂಡರು.

ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು, ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.