ADVERTISEMENT

ಅಂಗನವಾಡಿ ನೌಕರರ ಗೌರವಧನ ಹೆಚ್ಚಿಸಿ: ಲೋಕಸಭೆಯಲ್ಲಿ ಸಂಸದ ಸುಧಾಕರ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 14:34 IST
Last Updated 4 ಡಿಸೆಂಬರ್ 2025, 14:34 IST
ಡಾ.ಕೆ.ಸುಧಾಕರ್‌ 
ಡಾ.ಕೆ.ಸುಧಾಕರ್‌    

ನವದೆಹಲಿ: ಅಂಗನವಾಡಿ ನೌಕರರು ಹಾಗೂ ಬಿಸಿಯೂಟ ಸಿಬ್ಬಂದಿಯ ಗೌರವಧನ ಹೆಚ್ಚಳ ಮತ್ತು ಸಾಮಾಜಿಕ ಭದ್ರತೆಯ ಬಗ್ಗೆ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್‌ ಅವರು ಕೇಂದ್ರ ಸರ್ಕಾರದ ಗಮನ ಸೆಳೆದರು. 

ಲೋಕಸಭೆಯಲ್ಲಿ ಗುರುವಾರ ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ‘ಅಂಗನವಾಡಿ ನೌಕರರು ಹಾಗೂ ಬಿಸಿಯೂಟ ಸಿಬ್ಬಂದಿಯಲ್ಲಿ ಬಹುತೇಕ ಬಡ ಕುಟುಂಬದ ಮಹಿಳೆಯರೇ ಆಗಿದ್ದಾರೆ. ಶಾಲಾ ಮಕ್ಕಳಿಗೆ ಬಿಸಿಯೂಟ ಪೂರೈಕೆ, ಅಪೌಷ್ಟಿಕತೆ ನಿವಾರಣೆ, ಗರ್ಭಿಣಿಯರು ಹಾಗೂ ತಾಯಂದಿರಿಗೆ ಸರ್ಕಾರಿ ಯೋಜನೆಗಳ ನೆರವು ಸೇರಿದಂತೆ ಹಲವಾರು ವಿಧದಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮಹಿಳೆಯರು ಅತಿ ಕಡಿಮೆ ಗೌರವಧನ ಪಡೆಯುತ್ತಿದ್ದು, ಆರ್ಥಿಕವಾಗಿ ತೀರಾ ದುರ್ಬಲರಾಗಿದ್ದಾರೆ. ಸೌಲಭ್ಯಕ್ಕಾಗಿ ಹೋರಾಟ ಮಾಡುತ್ತಿರುವ ಮಹಿಳೆಯರ ಅಹವಾಲುಗಳನ್ನು ಕೇಂದ್ರ ಸರ್ಕಾರ ಆಲಿಸಬೇಕು‘ ಎಂದು ಮನವಿ ಮಾಡಿದರು. 

ಬೆಲೆ ಏರಿಕೆ ಗಮನದಲ್ಲಿರಿಸಿಕೊಂಡು ಗೌರವಧನದ ಪರಿಷ್ಕರಣೆ ಮಾಡಬೇಕು. ಪಿಂಚಣಿ, ವಿಮೆ ಸೇರಿದಂತೆ ಸಾಮಾಜಿಕ ಭದ್ರತೆ ಕಲ್ಪಿಸಬೇಕು. ಕಾರ್ಯಕರ್ತೆಯರ ಕೆಲಸವನ್ನು ʼಅಗತ್ಯ ಸೇವೆಗಳುʼ ಎಂದು ಅಧಿಕೃತವಾಗಿ ಗುರುತಿಸಬೇಕು. ದೇಶದಾದ್ಯಂತ ಕಾರ್ಯಕರ್ತೆಯರಿಗೆ ಏಕರೂಪದ ಸೌಲಭ್ಯಗಳನ್ನು ನೀಡಲು ರಾಜ್ಯ ಸರ್ಕಾರಗಳೊಂದಿಗೆ ಮಾತುಕತೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು. 

ADVERTISEMENT

ದೇಶದ ಅಪೌಷ್ಟಿಕತೆ ನಿವಾರಣೆ ಕಾರ್ಯಕ್ರಮಕ್ಕಾಗಿ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಅಂಗನವಾಡಿ ನೌಕರರಿಗೆ ಹಾಗೂ ಬಿಸಿಯೂಟ ಸಿಬ್ಬಂದಿಗೆ ಸೂಕ್ತವಾದ ಗೌರವ ನೀಡುವುದು ಅವಶ್ಯಕ. ನಮ್ಮ ಮಕ್ಕಳು ಹಾಗೂ ತಾಯಂದಿರ ಆರೋಗ್ಯ ಕಾಪಾಡುವ ಈ ಸಿಬ್ಬಂದಿಗೆ ಭದ್ರತೆ, ಘನತೆ ಹಾಗೂ ಗೌರವ ನೀಡುವುದು ಅಗತ್ಯ ಎಂದು ಅವರು ಒತ್ತಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.