ADVERTISEMENT

ಸಮಿತಿ ರಚನೆಯ ದಿನಾಂಕ ಘೋಷಿಸಿ: ಬಸವಜಯ ಮೃತ್ಯುಂಜಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 8:54 IST
Last Updated 22 ಫೆಬ್ರುವರಿ 2021, 8:54 IST
ಬಸವಜಯ ಮೃತ್ಯುಂಜಯ ಸ್ವಾಮೀಜಿ
ಬಸವಜಯ ಮೃತ್ಯುಂಜಯ ಸ್ವಾಮೀಜಿ   

ಬೆಂಗಳೂರು: 'ಮೀಸಲಾತಿ ಬೇಡಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ, ಈ ಸಮಿತಿಯನ್ನು ರಚಿಸುವ ದಿನಾಂಕ ಈಗಲೇ ಘೋಷಿಸಬೇಕು. ಎಷ್ಟು ದಿನದಲ್ಲಿ ಸಮಿತಿಯು ವರದಿ ನೀಡಲಿದೆ ಎಂಬುದನ್ನೂ ಸ್ಪಷ್ಟಪಡಿಸಬೇಕು' ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ದಿನಾಂಕ ಘೋಷಿಸಿದ ನಂತರವೇ ಚರ್ಚೆಗೆ ಬರುತ್ತೇನೆ. ಮಾತುಕತೆಗೆ ನಾನು ವಿಧಾನಸೌಧ ಅಥವಾ ಕೃಷ್ಣಾಗೆ ತೆರಳುವುದಿಲ್ಲ. ಸರ್ಕಾರದ ಪ್ರತಿನಿಧಿಯೇ ಧರಣಿ ಸ್ಥಳಕ್ಕೆ ಬರಬೇಕು' ಎಂದರು.

'ಬಸನಗೌಡ ಪಾಟೀಲ ಯತ್ನಾಳ, ವಿಜಯಾನಂದ ಕಾಶಪ್ಪನವರ ಬಗ್ಗೆ ಸಚಿವರು ಈಗ ಮಾತನಾಡುತ್ತಿದ್ದಾರೆ. ಪ್ರತಿಭಟನೆ, ಪಾದಯಾತ್ರೆ ನಡೆಸಿ ಹಲವು ಬಾರಿ ಗಡುವು ನೀಡಿದರೂ ಸರ್ಕಾರ‌ ಸ್ಪಂದಿಸಲಿಲ್ಲ. ಇಂತಹ ಸಂದರ್ಭದಲ್ಲಿ ಈ ನಾಯಕರು ಸಮುದಾಯಕ್ಕೆ ನ್ಯಾಯ ಒದಗಿಸಲು ಹೋರಾಡುತ್ತಿದ್ದಾರೆ' ಎಂದರು.

'ನನ್ನನ್ನು ಯಾರೂ ದಾರಿ ತಪ್ಪಿಸಲು ಸಾಧ್ಯವಿಲ್ಲ. ನಾನು ಚನ್ನಮ್ಮ, ಬಸವ ಮಾರ್ಗದಲ್ಲಿ ನಡೆಯುತ್ತಿದ್ದೇನೆ. ಅದೇ ಮಾರ್ಗದಲ್ಲಿ ಎಲ್ಲರನ್ನೂ ಕರೆದೊಯ್ಯುತ್ತಿದ್ದೇನೆ' ಎಂದರು.

'ನಾನು ಜನಪ್ರತಿನಿಧಿಗಳ ಮಾತು ಕೇಳುವ ಸ್ವಾಮೀಜಿಯಲ್ಲ.‌ಜನರ ಮಾತು ಕೇಳುವ ಸ್ವಾಮೀಜಿ. ಹೋರಾಟದ ಬಗ್ಗೆ ಜನರು ತಪ್ಪು ತಿಳಿದುಕೊಂಡರೆ ಅದನ್ನು ಸರಿ ಪಡಿಸಲು ಸಾಧ್ಯವಿಲ್ಲ. ಸಮುದಾಯದ ಜನರ ಬೇಡಿಕೆಯಂತೆಯೇ ಹೋರಾಟ ನಡೆಸುತ್ತಿದ್ದೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.