ADVERTISEMENT

ಜೊಯಿಡಾ: ಕೆಸರಿನಲ್ಲಿ ಸಿಲುಕಿದ್ದ ಕಾಡುಕೋಣ ಸಾವು

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 13:07 IST
Last Updated 6 ಜೂನ್ 2019, 13:07 IST
ಜೊಯಿಡಾ ತಾಲ್ಲೂಕಿನ ಕುಂಬಾರವಾಡಾ ವನ್ಯಜೀವಿ ವಲಯದ ಮಾತ್ಕರ್ಣಿಯ ಸಣ್ಣ ಕೆರೆಯ ಕೆಸರಿನಲ್ಲಿ ಕಾಡುಕೋಣ ಸಿಲುಕಿತ್ತು
ಜೊಯಿಡಾ ತಾಲ್ಲೂಕಿನ ಕುಂಬಾರವಾಡಾ ವನ್ಯಜೀವಿ ವಲಯದ ಮಾತ್ಕರ್ಣಿಯ ಸಣ್ಣ ಕೆರೆಯ ಕೆಸರಿನಲ್ಲಿ ಕಾಡುಕೋಣ ಸಿಲುಕಿತ್ತು   

ಜೊಯಿಡಾ (ಉತ್ತರ ಕನ್ನಡ): ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕುಂಬಾರವಾಡಾ ವನ್ಯಜೀವಿ ವಲಯದ ಮಾತ್ಕರ್ಣಿಯಲ್ಲಿಸಣ್ಣ ಕೆರೆಯ ಕೆಸರಿನಲ್ಲಿ ಸಿಲುಕಿದ್ದ 3–4 ವರ್ಷದ ಕಾಡುಕೋಣ ಗುರುವಾರ ಮೃತಪಟ್ಟಿದೆ.

ಇಲ್ಲಿ ಅರಣ್ಯ ಇಲಾಖೆ ನಿರ್ಮಿಸಿರುವ ಕೆರೆಗೆ ಬುಧವಾರ ನೀರು ಕುಡಿಯಲು ಅದು ಬಂದಿತ್ತು. ಕೆಸರಿನಲ್ಲಿ ಸಿಲುಕಿ ಜೀವನ್ಮರಣದ ನಡುವೆ ಹೋರಾಟ ನಡೆಸಿತ್ತು. ಇದೇ ಕೆರೆಯಿಂದ ನೀರು ತರಲೆಂದು ಹೋಗಿದ್ದ ಸ್ಥಳೀಯರು ಅದನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಅರಣ್ಯ ಅಧಿಕಾರಿಗಳು ಜೆ.ಸಿ.ಬಿ. ಯಂತ್ರವನ್ನು ಬಳಸಿ ಕಾಡುಕೋಣವನ್ನು ಕೆಸರಿನಿಂದ ಹೊರಗೆ ತೆಗೆದರು. ಬಳಿಕಜೊಯಿಡಾ ಪಶು ವೈದ್ಯಾಧಿಕಾರಿ ದೇವೇಂದ್ರ ಲಮಾಣಿ ಚಿಕಿತ್ಸೆ ನೀಡಿದ್ದರು. ಕೋಣಕ್ಕೆಸ್ಥಳೀಯರು ಭತ್ತದ ಹುಲ್ಲು, ಕಾಡಿನ ಬಿದಿರು ಮತ್ತು ಇತರ ಸೊಪ್ಪನ್ನು ಆಹಾರವಾಗಿ ನೀಡಿ ಅದನ್ನು ಕಾಡಿಗೆ ಬಿಟ್ಟಿದ್ದರು. ಆದರೆ,ಚಿಕಿತ್ಸೆಗೆ ಸ್ಪಂದಿಸದ ಕಾಡುಕೋಣ ಬುಧವಾರ ರಾತ್ರಿ ಮೃತಪಟ್ಟಿದೆ.

ADVERTISEMENT

‘ಕಾಡುಕೋಣದ ನಾಲ್ಕೂ ಕಾಲುಗಳು ಕೆಸರಿನಲ್ಲಿ ಸಿಲುಕಿದ್ದವು.ಮೇಲೆಬರಲು ಹಲವು ಬಾರಿ ಪ್ರಯತ್ನಿಸಿದ್ದರಿಂದಆಯಾಸಗೊಂಡು ನಿತ್ರಾಣ ಸ್ಥಿತಿಗೆ ಹೋಗಿತ್ತು. ಜೊಯಿಡಾ ಪಶು ವೈದ್ಯಾಧಿಕಾರಿಯಿಂದ ಚಿಕಿತ್ಸೆ ನೀಡಲಾಗಿತ್ತು. ಕಾಡುಕೋಣ ಸಾವಿಗೆ ನೀರಿನ ಸಮಸ್ಯೆ, ಆಹಾರದ ಕೊರತೆ ಅಥವಾ ಸಾಂಕ್ರಾಮಿಕ ರೋಗ ಕಾರಣವಲ್ಲ’ ಎಂದು ಸಹಾಯಕ ಅರಣ್ಯ ಸರಂಕ್ಷಣಾಧಿಕಾರಿ ಶಿವಾನಂದ ತೋಡಕರ ತಿಳಿಸಿದರು.

ಮಾತ್ಕರ್ಣಿಯಲ್ಲಿ ಮೃತಪಟ್ಟ ಕಾಡುಕೋಣದ ಅಂತ್ಯಕ್ರಿಯೆಯನ್ನು ಗುರುವಾರ ಬೆಳಿಗ್ಗೆ ಮಾಡಲಾಯಿತು. ಈ ಸಂಧರ್ಭದಲ್ಲಿ ಕುಂಬಾರವಾಡಾ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ತೋಡಕರ, ವಲಯ ಅರಣ್ಯಾಧಿಕಾರಿ ಪ್ರಭುರಾಜ ಪಾಟೀಕ,ಉಪವಲಯ ಅರಣ್ಯಾಧಿಕಾರಿ ಸಿ.ಎ.ಪಾಗದ, ಅರಣ್ಯ ರಕ್ಷಕ ಶಿವಾನಂದ.ಟಿ, ಕುಂಬಾರವಾಡಾ ಭಾಗದ ವನಪಾಲಕರು, ಅರಣ್ಯ ರಕ್ಷಕರು, ಅರಣ್ಯ ಕಾವಲುಗಾರರು ಇದ್ದರು.

ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡುಕೋಣಗಳು ಸಾವನ್ನಪ್ಪುತ್ತಿರುವ ಪ್ರಕರಣಗಳು ವಾರದಿಂದ ವಾರಕ್ಕೆ ಹೆಚ್ಚುತ್ತಿವೆ. ಇದರ ಬಗ್ಗೆ ಪ್ರಾಣಿಪ್ರಿಯರುಆತಂಕವ್ಯಕ್ತಪಡಿಸಿದ್ದು, ತಜ್ಞರು ನಿರ್ದಿಷ್ಟ ಕಾರಣ ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.