ADVERTISEMENT

ನಾಡಗೀತೆಗೆ ಧಾಟಿಯ ಜಿಜ್ಞಾಸೆ: ಸಂಗೀತ ಕಛೇರಿಯಾದ ಹೈಕೋರ್ಟ್ ಕಲಾಪ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2023, 14:16 IST
Last Updated 17 ಆಗಸ್ಟ್ 2023, 14:16 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಹೈಕೋರ್ಟ್‌ ಹಾಲ್‌ ಸಂಖ್ಯೆ 7ರಲ್ಲಿ ಗುರುವಾರ ಶ್ರಾವಣದ ಮೊದಲ ಮಧ್ಯಾಹ್ನವು ಸಂಗೀತ ನಾದದ ಹೊನಲಿನಲ್ಲಿ ಮುಳುಗೇಳಿತು. ಹಾಜರಿದ್ದ ಸುಗಮ ಸಂಗೀತ ಲೋಕದ ಆದ್ಯ ಗಾಯಕರು ನಾಡಗೀತೆ ‘ಜಯಭಾರತ ಜನನಿಯ ತನುಜಾತೆ...’ ಹಾಡಿಗಿರುವ ಭಿನ್ನ ಧಾಟಿಯ ವ್ಯತ್ಯಾಸಗಳನ್ನು ಮುಕ್ತವಾಗಿ ಹಾಡಿ ತೋರಿಸುತ್ತಿದ್ದಂತೆ ಕೇಳುಗರ ಮೈಯ ರೋಮಗಳು ನಿಮಿರಿ ನಿಂತಿದ್ದವು!. ಇಡೀ ಕೋರ್ಟ್ ಹಾಲ್‌ ಕೆಲ ಗಂಟೆಗಳ ಕಾಲ ಸಂಗೀತ ಕಛೇರಿಯ ವೇದಿಕೆಯಾಗಿ ಪರಿವರ್ತನೆಗೊಂಡು ನೆರೆದಿದ್ದವರನ್ನು ನವಿರೇಳಿಸಿತು...!!

‘ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿಯೇ ನಾಡಗೀತೆಯನ್ನು 2 ನಿಮಿಷ 30 ಸೆಕೆಂಡ್‌ಗಳಲ್ಲಿ ಹಾಡಬೇಕು‘ ಎಂಬುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ 2022ರ ಸೆಪ್ಟೆಂಬರ್‌ 25ರಂದು ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಸುಗಮ ಸಂಗೀತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

‘ಅರ್ಜಿಯಲ್ಲಿ ನಮ್ಮನ್ನೂ ಮಧ್ಯಂತರ ಪ್ರತಿವಾದಿಗಳನ್ನಾಗಿ ಸೇರ್ಪಡೆ ಮಾಡಿಕೊಳ್ಳಬೇಕು‘ ಎಂದು ‘ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟ‘ದ ಅಧ್ಯಕ್ಷ ಮೃತ್ಯುಂಜಯ ದೊಡ್ಡವಾಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ವಿಚಾರಣೆಗೆ ಅಂಗೀಕರಿಸಿತು. 

ADVERTISEMENT

ಮಧ್ಯಂತರ ಅರ್ಜಿದಾರರ ಪರ ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ವಾದ ಮಂಡಿಸಿ, ‘ರಾಜ್ಯ ಸರ್ಕಾರ ಈಗಾಗಲೇ ತನ್ನೆಲ್ಲಾ ಅಧಿಕೃತ ಕಾರ್ಯಕ್ರಮಗಳಲ್ಲಿ ಮೈಸೂರು ಅನಂತಸ್ವಾಮಿಯವರ ಧಾಟಿಯಲ್ಲೇ ಹಾಡುವುದೇ ಸೂಕ್ತ ಎಂಬುದನ್ನು ತೀರ್ಮಾನಿಸಿ ಆದೇಶ ಹೊರಡಿಸಿದೆ. ಈ ಆದೇಶ ಹೊರಡಿಸುವ ಮುನ್ನ ಅರ್ಜಿದಾರರು ಈಗ ಎತ್ತಿರುವ ಎಲ್ಲ ತಕರಾರುಗಳನ್ನು ಕೂಲಂಕಷವಾಗಿ ಆಲಿಸಿ, ಚರ್ಚಿಸಿ, ನಿಕಶಕ್ಕೆ ಒಳಪಡಿಸಿ ಆಖೈರುಗೊಳಿಸಿದೆ. ಅಷ್ಟೇ ಅಲ್ಲ ಸ್ವತಃ ಕುವೆಂಪು ಮತ್ತು ಜಿ.ಎಸ್.ಶಿವರುದ್ರಪ್ಪ ಅವರು ಮೈಸೂರು ಅನಂತಸ್ವಾಮಿಯವರ ಧಾಟಿಗೆ ಅನುಮೋದಿಸಿದ್ದರು‘ ಎಂದು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಇದೇ ಧಾಟಿಯಲ್ಲಿ ಇರಬೇಕು ಎಂಬುದಕ್ಕೆ ನಿಮ್ಮ ಬಳಿ ಇರುವ ಕಾನೂನಿನ ಬಲವನ್ನು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಡಿ, ಸರ್ಕಾರದ ಆದೇಶವನ್ನು ಪುರಸ್ಕರಿಸುವ ಕಾನೂನು ಅಂಶಗಳು ಮತ್ತು ವ್ಯಾಖ್ಯಾನಗಳೇನಿವೆ ಎಂಬುದನ್ನು ಸಾದರಪಡಿಸಿ‘ ಎಂದು ಸೂಚಿಸಿತು. ಸರ್ಕಾರದ ಪರ ಹಾಜರಿದ್ದ ವಕೀಲೆ ನವ್ಯಾ ಶೇಖರ್‌ ಅವರಿಗೆ, ‘ಮಧ್ಯಂತರ ಅರ್ಜಿದಾರರ ಮನವಿಯನ್ನು ಪುರಸ್ಕರಿಸಲು ನಿಮ್ಮ ಬಳಿ ಇರುವ ಪೂರಕ ಅಂಶಗಳೇನು ಎಂಬುದನ್ನೂ ವಿವರಿಸಿ‘ ಎಂದು ನಿರ್ದೇಶಿಸಿ ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಿತು. ಮಧ್ಯಂತರ ಅರ್ಜಿದಾರರ ಪರ ವಕೀಲ ಎಚ್‌.ಸುನಿಲ್‌ ಕುಮಾರ್‌ ವಕಾಲತ್ತು ವಹಿಸಿದ್ದಾರೆ. 

ಇದಕ್ಕೂ ಮುನ್ನ ಅರ್ಜಿದಾರ ಕಿಕ್ಕೇರಿ ಕೃಷ್ಣಮೂರ್ತಿ ಪರ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ ಹಾರನಹಳ್ಳಿ,. ‘ಅಶ್ವತ್ಥ್‌ ಅವರು ಹಾಡಿದ ಧಾಟಿಯಲ್ಲಿ ಹಾಡಲು ಶಾಲೆಗಳಲ್ಲಿ ಅವಕಾಶ ನೀಡುತ್ತಿಲ್ಲ. ನಾಡಗೀತೆಯನ್ನು ಇದೇ ಧಾಟಿಯಲ್ಲಿ ಹಾಡಬೇಕು, ಇಷ್ಟೇ ನಿಮಿಷ ಹಾಡಬೇಕೆಂಬ ಅಧಿಕೃತ ಕಾನೂನೇನೂ ಇಲ್ಲ‌. ಆದರೆ, ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಮೈಸೂರು ಅನಂತಸ್ವಾಮಿ ಅವರ ಧಾಟಿಯಲ್ಲೇ ಹಾಡಬೇಕು ಎಂದು ನಿರ್ಬಂಧ ಹೇರಿರುವುದು ನಮ್ಮ ಗಾಯನದ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡಿದೆ‘ ಎಂದರು.

ಕಲಾಪದ ವೇಳೆ ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ಮೃತ್ಯುಂಜಯ ದೊಡ್ಡವಾಡ;  ಜಯ ಭಾರತ ಜನನೀಯ ತನುಜಾತೆ..., ಕಟ್ಟುವೆವು ನಾವು ಹೊಸ ನಾಡೊಂದನ್ನು..., ಎದೆ ತುಂಬಿ ಹಾಡಿದೆನು‌....ಹೀಗೆ ಕೆಲವು ಗೀತೆಗಳನ್ನು ಹಾಡಿ ಅವುಗಳ ಧಾಟಿಯನ್ನು ನ್ಯಾಯಪೀಠಕ್ಕೆ ವಿವರಿಸಿದರು.

ಬಿ.ಕೆ.ಸುಮಿತ್ರಾಗೆ ಧನ್ಯವಾದ: ಮಧ್ಯಂತರ ಅರ್ಜಿದಾರರ ಪರವಾಗಿ 82 ವರ್ಷದ ಗಾಯಕಿ ಬಿ.ಕೆ.ಸುಮಿತ್ರಾ ಖುದ್ದು ಹಾಜರಾಗಿ ಮೈಸೂರು ಅನಂತಸ್ವಾಮಿ ಮತ್ತು ಸಿ.ಅಶ್ವತ್ಥ್‌ ಅವರ ಧಾಟಿಗಳ ಕುರಿತಾದ ವ್ಯತ್ಯಾಸವನ್ನು ನ್ಯಾಯಪೀಠಕ್ಕೆ ಅರುಹಿದರು. ‘ಎಸ್‌.ಆರ್.ಲೀಲಾವತಿ ಅಧ್ಯಕ್ಷತೆಯಲ್ಲಿ 17 ಜನರ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿ ಸರ್ವಾನುಮತದಿಂದ ಮೈಸೂರು ಅನಂತಸ್ವಾಮಿ ಅವರ ಧಾಟಿಯನ್ನೇ ಅಳವಡಿಸಿಕೊಂಡು ನಾಡಗೀತೆಯ ಪೂರ್ಣಪಾಠ ಬಳಸಬೇಕೆಂದು ಒಪ್ಪಿಕೊಳ್ಳಲಾಯಿತು. ಆದರೆ ಈಗ ನಾಡಗೀತೆ ವಿಚಾರದಲ್ಲಿ ಎದ್ದಿರುವ ಗೊಂದಲ ವೈಯಕ್ತಿಕವಾಗಿ ನನಗೆ ಬೇಸರ ತರಿಸಿದೆ. ಸುಗಮ ಸಂಗೀತ ಕ್ಷೇತ್ರದಲ್ಲಿ ಈ ರೀತಿ ಎದ್ದಿರುವ ವಿವಾದ ಆದಷ್ಟು ಶೀಘ್ರ ಮುಕ್ತಾಯವಾಗಲಿ‘ ಎಂದು ಆಶಿಸಿದರು.

ಅವರು ತಮ್ಮ ಹೇಳಿಕೆಯನ್ನು ಲಿಖಿತವಾಗಿ ಹಾಳೆಯಲ್ಲಿ ಬರೆದುಕೊಂಡು ಬಂದಿದ್ದರು ಮತ್ತು ಆ ಅಂಶಗಳನ್ನು ನ್ಯಾಯಪೀಠಕ್ಕೆ ವಿವರಿಸಿದರು. ಅದನ್ನು ಸ್ವೀಕರಿಸಿದ ನ್ಯಾಯಪೀಠ, ‘ನಾಡು, ನುಡಿಯ ಬಗ್ಗೆಗಿನ ಕಾಳಜಿಗೆ ನಿಮ್ಮಂಥವರ ಹಾಜರಿಯಿಂದ ಕೋರ್ಟ್‌ ಘನತೆ ಇಂದು ಹೆಚ್ಚಿದೆ. ನಾವೆಲ್ಲಾ ಚಿಕ್ಕಂದಿನಿಂದಲೂ ನಿಮ್ಮ ಹಾಡು ಕೇಳಿ ಬೆಳೆದಿದ್ದೇವೆ. ಒಂದು ವೇಳೆ ನಿಮ್ಮ ಹಾಡನ್ನು ಯಾರಾದರೂ ಕೇಳಿಲ್ಲ ಎಂದಾದರೆ ಅದು ಯಾರು ಇನ್ನೂ ಹುಟ್ಟಿಲ್ಲವೋ ಅವರು ಮಾತ್ರ‘ ಎಂದು ಬಣ್ಣಿಸಿತು.

ಪ್ರಣಯ ಕವಿಯ ವಿವರಣೆ: ಕಿಕ್ಕೇರಿ ಕೃಷ್ಣಮೂರ್ತಿ ಪರವಾಗಿ ಹಾಜರಾಗಿದ್ದ ನಾಡಿನ ಪ್ರಖ್ಯಾತ ಪ್ರಣಯ ಕವಿ ಎಂದೇ ಹೆಸರಾದ ಬಿ.ಆರ್.ಲಕ್ಷ್ಮಣ ರಾವ್‌, ’ಅಶ್ವತ್ಥ್‌ ಅವರ ಧಾಟಿಯು ವೃಂದಗಾನಕ್ಕೆ ಹೇಳಿ ಮಾಡಿಸಿದಂತಿದ್ದು, ಅವರ ಧಾಟಿಯನ್ನೇ ಮುಂದುವರಿಸುವುದು ಸೂಕ್ತ‘ ಎಂಬ ಅಭಿಪ್ರಾಯ ಮಂಡಿಸಿದರು.

ಮತ್ತೋರ್ವ ಸುಗುಮ ಸಂಗೀತ ಹಾಡುಗಾರ ವೈ.ಕೆ.ಮುದ್ದುಕೃಷ್ಣ ಅವರು, ‘ಸಿ.ಅಶ್ವತ್ಥ್‌ 1993ರಲ್ಲೇ, ಜಯ ಭಾರತ ಜನನಿಯ ತನುಜಾತೆಯ ಹಾಡಿನ ಎಲ್ಲ ಚರಣಗಳಿಗೆ ರಾಗ ಸಂಯೋಜಿಸಿದ್ದಾರೆ. ಮೈಸೂರು ಅನಂತಸ್ವಾಮಿ ಕೇವಲ ಮೂರು ಚರಣಗಳಿಗೆ ಮಾತ್ರ ರಾಗ ಸಂಯೋಜಿಸಿದ್ದಾರೆ. ಹೀಗಾಗಿ ಅಶ್ವತ್ಥ್‌ ಅವರ ರಾಗದಲ್ಲೇ ಹಾಡುವುದು ಸೂಕ್ತ‘ ಎಂದರು.

ಯುದ್ಧೋನ್ಮಾದ ಸಲ್ಲ: ಇದೇ ವೇಳೆ ಮೃತ್ಯುಂಜಯ ದೊಡ್ಡವಾಡ ಅವರೂ, ‘ಅನಂತಸ್ವಾಮಿಯವರ ಧಾಟಿಯಲ್ಲಿ ಶಾಂತಭಾವ ಅಡಗಿದೆ. ನಾಡಗೀತೆಯನ್ನು ಯುದ್ಧೋನ್ಮಾದದಲ್ಲಿ ಹಾಡುವುದು ಸಲ್ಲದು. ರಾಗ ಸಂಯೋಜನೆ‌ ಎಂದರೆ ನಮ್ಮಲ್ಲಿ ತ್ಯಾಗರಾಜರು, ಪುರಂದರದಾಸರಂತಹ ದಿಗ್ಗಜರುಗಳು ನಮಗೆ ಅಡಿಪಾಯ ಹಾಕಿಕೊಟ್ಟಿದ್ದಾರೆ. ಆದರೆ ಸುಗಮ ಸಂಗೀತದಲ್ಲಿ ರಾಗ ಸಂಯೋಜನೆ ಎಂಬುದು ಕಲ್ಪನೆ ಅಷ್ಟೇ. ನಾಡಗೀತೆ ವಿಚಾರದಲ್ಲಿ ಸಾಹಿತ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು. ಇದರಲ್ಲಿ ರಾಗ ಸಂಯೋಜನೆ ಸಂಪೂರ್ಣ ಗೌಣ‘ ಎಂದು ಪ್ರತಿಪಾದಿಸಿದರು.

ಎಲ್ಲರ ಅಭಿಪ್ರಾಯ ಆಲಿಸಿದ ನ್ಯಾಯಪೀಠ, ‘ಅನಂತಸ್ವಾಮಿ ಮತ್ತು ಅಶ್ವತ್ಥ್‌ ಇಬ್ಬರೂ ದಿಗ್ಗಜರೇ, ಅತಿರಥ ಮಹಾರಥರೇ‘ ಎಂದು ಪ್ರಶಂಸಿಸಿತಲ್ಲದೆ, ‘ಸಂಗೀತ ಎಂಬುದು ಅತಿದೊಡ್ಡ ಶಾಸ್ತ್ರ ಮತ್ತು ಅಧ್ಯಯನದ ವಿಷಯ‘ ಎಂಬುದನ್ನು ಪುನುರಚ್ಚರಿಸಿತು.

‘ಈ ರಾಷ್ಟ್ರದಲ್ಲಿ ರಾಗಕ್ಕೆ‌ ಪ್ರಧಾನವಾದ ಸ್ಥಾನ ಇದೆ. ರಾಗ ಸರಳವಾಗಿದೆ ಎಂದು ಪ್ರೇಮದ ರಾಗವನ್ನು ಯುದ್ಧ ರಂಗದಲ್ಲಿ ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿತು. ಮೇಘ ಮಲ್ಹಾರ, ನಟ ಮಲ್ಹಾರ, ಝಿಂಜೋಟಿ, ಮಿಯಾ ತೋಡಿ... ಹೀಗೆ ಹತ್ತು ಹಲವು ರಾಗಗಳ ಹೆಸರುಗಳನ್ನು ಉದ್ಧರಿಸಿ, ‘ಮೇಲಿರುವ ರಸಋಷಿ ತನ್ನದೊಂದು ಕವಿತೆಗೆ ಕಲಾತಪಸ್ವಿಗಳು ಇಷ್ಟೊಂದು ಜಿಜ್ಞಾಸೆ ವ್ಯಕ್ತಪಡಿಸಿ ಈ ರೀತಿ ಕೋರ್ಟ್‌ ಮೆಟ್ಟಿಲೇರಿರುವುದನ್ನು ಕಂಡು ಏನೆಂದುಕೊಳ್ಳುತ್ತಾರೆಯೋ ಏನೋ‘ ಎಂದು ಚಟಾಕಿ ಹಾರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.