ADVERTISEMENT

ಅನುಭವ ಮಂಟಪ: 2 ವರ್ಷದಲ್ಲಿ ಪೂರ್ಣ

₹ 500 ಕೋಟಿ ಮೊತ್ತದ ಯೋಜನೆ l ಕಾಮಗಾರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 20:35 IST
Last Updated 6 ಜನವರಿ 2021, 20:35 IST
ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೂಮಿ ಪೂಜೆ ನೆರವೇರಿಸಿದರು. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ಪ್ರಭು ಚವಾಣ್, ಡಾ.ಸುಧಾಕರ್, ಸಂಸದ ಭಗವಂತ ಖೂಬಾ ಇದ್ದಾರೆ
ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೂಮಿ ಪೂಜೆ ನೆರವೇರಿಸಿದರು. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ಪ್ರಭು ಚವಾಣ್, ಡಾ.ಸುಧಾಕರ್, ಸಂಸದ ಭಗವಂತ ಖೂಬಾ ಇದ್ದಾರೆ   

ಬೀದರ್‌: ಬಸವಕಲ್ಯಾಣದಲ್ಲಿ ₹ 500 ಕೋಟಿ ವೆಚ್ಚದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹಲವು ಮಠಾಧೀಶರ ಸಮ್ಮುಖದಲ್ಲಿ ಬುಧವಾರ ಭೂಮಿಪೂಜೆ ನೆರವೇರಿಸಿದರು.

‘ನೂತನ ಅನುಭವ ಮಂಟಪಕ್ಕೆ ₹ 100 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ವಾರದಲ್ಲಿ ಮತ್ತೆ₹ 100 ಕೋಟಿ ನೀಡಲಾಗು ವುದು.ಟೆಂಡರ್ ಕರೆದು ಶೀಘ್ರ ಕಾಮಗಾರಿ ಆರಂಭಿಸಿ, ಎರಡು ವರ್ಷಗಳಲ್ಲಿಪೂರ್ಣಗೊಳಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟಿಸಲಾಗುವುದು’ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದರು.

‘ನಾಡಿನ ಮಠಾಧೀಶರು ಹಾಗೂ ಬಸವ ಭಕ್ತರ ಆಶಯದಂತೆ ನಿಗದಿತ ಅವಧಿಯಲ್ಲಿ ಅನುಭವ ಮಂಟಪದ ಕಾಮಗಾರಿ ಪೂರ್ಣಗೊಳಿಸಲಾಗುವುದು. ಅಗತ್ಯ ಬಿದ್ದರೆ ನಿಗದಿತ ₹ 500 ಕೋಟಿ ಜೊತೆಗೆ ಹೆಚ್ಚುವರಿಯಾಗಿ ₹ 100 ಕೋಟಿ ಅನುದಾನ ಕೊಡಲಾಗುವುದು’ ಎಂದರು.

ADVERTISEMENT

‘ಬಸವಾದಿ ಶರಣರ ಬಗ್ಗೆ ಪ್ರಧಾನಿ ಮೋದಿ ಅವರಿಗೂ ಗೌರವ ಇದೆ. ಸಂಸತ್ ಭವನದ ಭೂಮಿ ಪೂಜೆ ಸೇರಿ ದಂತೆ ಅನೇಕ ಕಡೆ ಕಲ್ಯಾಣ ನಾಡಿನ ಹೆಸರು ಪ್ರಸ್ತಾಪಿಸಿದ್ದಾರೆ. ಇಂತಹ ಪುಣ್ಯ ಭೂಮಿ ಬಹಳ ಎತ್ತರಕ್ಕೆ ಬೆಳೆಯಬೇಕು’ ಎಂದು ಆಶಿಸಿದರು.

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ‘ಅಯೋಧ್ಯೆಯಲ್ಲಿ ಐತಿಹಾಸಿಕ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಮಂತ್ರಿ ಮೋದಿ ಅವರು ಚಾಲನೆ ನೀಡಿದಂತೆ, ಅನುಭವ ಮಂಟಪ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭೂಮಿಪೂಜೆ ನೆರವೇರಿಸಿದ್ದು ಕೂಡ ಐತಿಹಾಸಿಕ ಕ್ಷಣ’ ಎಂದು ಬಣ್ಣಿಸಿದರು.

ಭೂಮಿಪೂಜೆ ಕಾರ್ಯಕ್ರಮದಲ್ಲಿ ವಿಶ್ವ ಬಸವ ಧರ್ಮ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಸವ ಭಕ್ತರು ಪಾಲ್ಗೊಂಡಿದ್ದರು.

‘ಸನಾತನ’ ಶಬ್ದಕ್ಕೆ ಗೊ.ರು. ಚನ್ನಬಸಪ್ಪ ಆಕ್ಷೇಪ

ರಾಜ್ಯ ಸರ್ಕಾರ ಪತ್ರಿಕೆಗಳಿಗೆ ನೀಡಿರುವ ಜಾಹೀರಾತಿನಲ್ಲಿ ‘ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ ನೂತನ ಅನುಭವ ಮಂಟಪ ನಿರ್ಮಾಣ’ ಎಂದು ನಮೂದಿಸಿದ್ದಕ್ಕೆ ನೂತನ ಅನುಭವ ಮಂಟಪ ರೂಪರೇಷೆ ತಯಾರಿಕೆ ತಜ್ಞರ ಸಲಹಾ ಸಮಿತಿಯ ಅಧ್ಯಕ್ಷರಾಗಿದ್ದ ಗೊ.ರು.ಚನ್ನಬಸಪ್ಪ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಮ್ಮುಖದಲ್ಲೇ ನಯವಾಗಿ ಆಕ್ಷೇಪ ವ್ಯಕ್ತಪಡಿಸಿದರು.

‘ಇದು ಸನಾತನ ಅಲ್ಲ, ಶರಣರ ಪ್ರಗತಿಪರ ಚಿಂತನೆಯ ಮರುಸೃಷ್ಟಿಯ ಅನುಭವ ಮಂಟಪ ನಿರ್ಮಾಣವಾಗುತ್ತಿದೆ ಎಂದು ಮುದ್ರಿತವಾಗಬೇಕಿತ್ತು’ ಎಂದು ಹೇಳಿದರು. ಆದರೆ, ಮುಖ್ಯಮಂತ್ರಿ ಅವರು ತಮ್ಮ ಭಾಷಣದಲ್ಲಿ ಇದಕ್ಕೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ.

ಸನಾತನ ಶಬ್ದ ಬಳಸಿದ್ದಕ್ಕೆ ಬಸವಣ್ಣವರ ಅನುಯಾಯಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.‌

ಶರಣರ ವಿಚಾರಕ್ಕೆ ಚ್ಯುತಿಯುಂಟು ಮಾಡಬೇಡಿ: ಸಾಣೇಹಳ್ಳಿ ಶ್ರೀ

ಚಿತ್ರದುರ್ಗ: ಬಸವಕಲ್ಯಾಣದಲ್ಲಿ ನಿರ್ಮಿಸುತ್ತಿರುವ ಅನುಭವ ಮಂಟಪದ ಭೂಮಿಪೂಜೆ ಕಾರ್ಯಕ್ರಮದ ಜಾಹೀರಾತಿನಲ್ಲಿ ಉಲ್ಲೇಖವಾಗಿರುವ ‘ಸನಾತನ’ ಪದಕ್ಕೆ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಅನುಭವ ಮಂಟಪ ಸನಾತನಿಗಳ ಆಡಳಿತಕ್ಕೆ ಸಿಕ್ಕರೆ ಬಸವಾದಿ ಶಿವಶರಣರ ಸಮಾಜೋಧಾರ್ಮಿಕ ಚಿಂತನೆಯನ್ನು ಹಿಸುಕಿ ಮತ್ತೆ ಪುರೋಹಿತ ಪರಂಪರೆಯನ್ನು ಬೆಳೆಸಿದಂತೆ ಆಗುತ್ತದೆ. ಇಂತಹ ದೋಷಗಳು ಮುಂದೆ ಆಗದಂತೆ ಬಸವಾನುಯಾಯಿಗಳು ಜಾಗರೂಕರಾಗಿರಬೇಕಾಗಿದೆ. ಸರ್ಕಾರ ಸಹ ಶರಣರ ಆಚಾರ ವಿಚಾರಗಳಿಗೆ ಚ್ಯುತಿ ಬಾರದಂತೆ ಎಚ್ಚರವಹಿಸ
ಬೇಕು’ ಎಂದು ಆಗ್ರಹಿಸಿದ್ದಾರೆ.

‘ಅನುಭವ ಮಂಟಪ ನಿರ್ಮಾಣದ ಭೂಮಿಪೂಜೆಯನ್ನು ಮುಖ್ಯಮಂತ್ರಿ ನೆರವೇರಿಸುವ ಜಾಹೀರಾತು ನೋಡಿ ಸಂತಸವಾಯಿತು. ಆದರೆ, ಆರಂಭದಲ್ಲೇ ಎದ್ದುಕಾಣುವ ‘ಸನಾತನ’ ಎಂಬ ಪದಬಳಕೆ ಗಮನಿಸಿದಾಗ ಮೊಸರಲ್ಲಿ ಕಲ್ಲು ಸಿಕ್ಕಂತಾಯಿತು. ಸನಾತನ ಮತ್ತು ಪ್ರಗತಿಪರ ಶಬ್ದಗಳು ಪರಸ್ಪರ ವಿರುದ್ಧವಾದವು’ ಎಂದು ಪ್ರಕಟಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

‘ಶರಣರದು ನಡೆ, ನುಡಿ ಒಂದಾದ ಪ್ರಾಯೋಗಿಕ ಮತ್ತು ವೈಚಾರಿಕ ಧರ್ಮ. ಅವರ ಹೋರಾಟ ಸನಾತನ ಗೊಡ್ಡು ಪರಂಪರೆಗಳ ವಿರುದ್ಧ ನಡೆದಿದೆ. ವೇದ, ಶಾಸ್ತ್ರ, ಪುರಾಣ, ಆಗಮಗಳ ವಿರುದ್ಧ ಧ್ವನಿ ಎತ್ತಿದ್ದನ್ನು ವಚನಗಳಲ್ಲಿ ಕಾಣಬಹುದು. ಈ ಸನಾತನ ಪರಂಪರೆಯವರೇ ಕಲ್ಯಾಣದಲ್ಲಿ ರಕ್ತಕ್ರಾಂತಿಯ ಬೀಜ ಬಿತ್ತಿ ವಚನ ಸಾಹಿತ್ಯವನ್ನು ಭಸ್ಮ ಮಾಡಲು ಮುಂದಾಗಿದ್ದು. ಅದರ ಪಳೆಯುಳಿಕೆಗಳು ಇಂದಿಗೂ ಜೀವಂತವಾಗಿವೆ’ ಎಂದು ಕಿಡಿ ಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.