ADVERTISEMENT

ನನ್ನ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡರೂ ಸ್ವಾಗತ: ಎಸ್‌.ಟಿ. ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2025, 15:48 IST
Last Updated 26 ಮಾರ್ಚ್ 2025, 15:48 IST
ಎಸ್‌.ಟಿ.ಸೋಮಶೇಖರ್‌
ಎಸ್‌.ಟಿ.ಸೋಮಶೇಖರ್‌   

ಬೆಂಗಳೂರು: ‘ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದೇನೆ ಎನ್ನುವುದಾದರೆ 2028ರ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ ಆಗುವುದಕ್ಕೂ ಮೊದಲು ಕ್ರಮ ತೆಗೆದುಕೊಳ್ಳಲಿ. ಇಲ್ಲವಾದರೆ ನಾನೇ ಮುಂದಿನ ತೀರ್ಮಾನ ಮಾಡುತ್ತೇನೆ’ ಎಂದು ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಹೇಳಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆ ಆರೋಪದ ಕಾರಣ ತಮಗೆ ನೀಡಿರುವ ನೋಟಿಸಿನ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ‘ನಾನು ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಸಕಾರಾತ್ಮಕ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಹೀಗಾಗಿ ಯಾವುದೇ ಕ್ರಮ ತೆಗೆದುಕೊಂಡರೂ ಸ್ವಾಗತಿಸುತ್ತೇನೆ. ಆದಷ್ಟು ಬೇಗ ಕ್ರಮ ತೆಗೆದುಕೊಳ್ಳಲಿ’ ಎಂದರು.

‘ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರ ಜತೆ ಹೋದರೆ ಅಪರಾಧವೇ? ಕ್ಷೇತ್ರದ ವಿಚಾರವಾಗಿ ಅವರ ಬಳಿ ಹೋಗುತ್ತೇನೆ. ನನಗೆ ಪಕ್ಷಕ್ಕಿಂತ ಕ್ಷೇತ್ರ ಮುಖ್ಯ. ಹೀಗಾಗಿ ಅವರ ಬಳಿ ಹೋಗುತ್ತೇನೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರನ್ನು ರಾತ್ರಿ 9 ಗಂಟೆಯ ಬಳಿಕ ಭೇಟಿ ಮಾಡುವವರೂ ಇದ್ದಾರೆ. ನಾನು ರಾತ್ರಿ ಹೊತ್ತು ಭೇಟಿ ಮಾಡಿಲ್ಲ. ಸರ್ಕಾರದ ಕಾರ್ಯಕ್ರಮಗಳಲ್ಲಿ ಭಾಗಿಯಾವುದು ಪಕ್ಷ ವಿರೋಧಿ ಚಟುವಟಿಕೆ ಅಲ್ಲ’ ಎಂದು ಹೇಳಿದರು.

ADVERTISEMENT

‘ಕಾಂಗ್ರೆಸ್  ಸೇರುವ ಉದ್ದೇಶವಿಲ್ಲ. ಸಾಕಷ್ಟು ಬಹುಮತ ಹೊಂದಿರುವ ಆ ಪಕ್ಷಕ್ಕೆ ನಮ್ಮ ಅಗತ್ಯವೂ ಇಲ್ಲ. 2028ಕ್ಕೆ ವಿಧಾನಸಭೆ ಚುನಾವಣೆ ನಡೆಯಲಿದೆ. ಆಗ ಸ್ಪರ್ಧೆ ಮಾಡಬೇಕೇ? ಮಾಡುವುದಾದರೆ ಎಲ್ಲಿಂದ ಸ್ಪರ್ಧಿಸಬೇಕು ಎಂಬುದನ್ನು ಕಾರ್ಯಕರ್ತರ ಜತೆ ಚರ್ಚಿಸಿ ತೀರ್ಮಾನಿಸುತ್ತೇನೆ’ ಎಂದು ಅವರು ಹೇಳಿದರು.

‘ಪಕ್ಷದ ಯಾವುದೇ ಸಭೆಗೂ ನನ್ನನ್ನು ಆಹ್ವಾನಿಸುತ್ತಿಲ್ಲ. ಶಾಸಕಾಂಗ ಪಕ್ಷದ ಸಭೆ ಮತ್ತು ಬೆಂಗಳೂರು ಅಭಿವೃದ್ದಿ ಕುರಿತ ಸಭೆಗೂ ಕರೆದಿಲ್ಲ. ಲೋಕಸಭಾ ಚುನಾವಣೆ, ವಿಧಾನಪರಿಷತ್ ಚುನಾವಣೆ ವೇಳೆ ಪ್ರಚಾರಕ್ಕೆ ನನ್ನನ್ನು ಕರೆಯದೇ ನಿರ್ಲಕ್ಷಿಸಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಪೋಸ್ಟರ್‌ಗಳಲ್ಲಿ ನನ್ನ ಚಿತ್ರಗಳನ್ನು ಹಾಕಿರಲಿಲ್ಲ’ ಎಂದು ಸೋಮಶೇಖರ್‌ ದೂರಿದರು.

‘ವಿಧಾನಸಭೆ ಅಧಿವೇಶನದ ವೇಳೆ ಪಕ್ಷದಲ್ಲಿ ಸಮನ್ವಯ ಇರಲಿಲ್ಲ. ಯಾವುದೋ ವಿಷಯದ ಮೇಲೆ ಇನ್ಯಾರೋ ಮಾತನಾಡುತ್ತಿದ್ದರು. ಕಲಾಪವನ್ನು ಬಹಿಷ್ಕಾರ ಹಾಕಿದರೆ ಪ್ರಯೋಜನವೇನು? ಸರ್ಕಾರದ ವಿರುದ್ಧ ಸಂಘಟಿತ ಹೋರಾಟ ಮಾಡಿ ಕಟ್ಟಿ ಹಾಕುವ ಕೆಲಸ ಮಾಡಬೇಕಿತ್ತು. ಸಭಾಧ್ಯಕ್ಷರ ಪೀಠದ ಬಳಿ ಏರಿ ಪ್ರತಿಭಟನೆ ನಡೆಸುವ ಅಗತ್ಯ ಇರಲಿಲ್ಲ. ಬಡಪಾಯಿಗಳನ್ನು ಮೇಲೆ ಹತ್ತಿಸಿ, ಪ್ರಭಾವಿಗಳು ಮಾತ್ರ ದೂರ ಉಳಿದರು’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.