ADVERTISEMENT

ಮೂಡದ ಒಮ್ಮತ: ಅಪೆಕ್ಸ್‌ ಬ್ಯಾಂಕ್‌ ಚುನಾವಣೆ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 15:38 IST
Last Updated 29 ಜನವರಿ 2026, 15:38 IST
   

ಬೆಂಗಳೂರು: ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ಜ.29ರಂದು ನಡೆಯಬೇಕಿದ್ದ ಚುನಾವಣೆಯನ್ನು ಕೊನೆಯ ಕ್ಷಣದಲ್ಲಿ ಮುಂದೂಡಲಾಗಿದೆ. 

ಬೆಳಿಗ್ಗೆ 11 ಗಂಟೆಗೆ ನಾಮಪತ್ರ ಪ್ರಕ್ರಿಯೆ ಆರಂಭವಾದಾಗ ಮಾಜಿ ಶಾಸಕ ಬಿಜೆಪಿಯ ಬೆಳ್ಳಿ ಪ್ರಕಾಶ್‌ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದರು. ಅಪೆಕ್ಸ್‌ ಬ್ಯಾಂಕ್‌ನ 18 ನಿರ್ದೇಶಕರಲ್ಲಿ 15 ಮಂದಿ ಕಾಂಗ್ರೆಸ್‌ ಬೆಂಬಲಿಗರಾಗಿದ್ದು, ಇಬ್ಬರು ಬಿಜೆಪಿ (ಕೊಡಗು– ಕೊಡಂದೇರ ಪಿ. ಗಣಪತಿ ಮತ್ತು ಚಿಕ್ಕಮಗಳೂರು– ಬೆಳ್ಳಿಪ್ರಕಾಶ್) ಮತ್ತು ಒಬ್ಬ ಜೆಡಿಎಸ್‌ (ಹಾಸನ– ಆರ್‌. ಸೂರಜ್‌) ಬೆಂಬಲಿತರಿದ್ದಾರೆ.

ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಆಯ್ಕೆಯಲ್ಲಿ ಕಾಂಗ್ರೆಸ್‌ ಬೆಂಗಲಿತರ ಮಧ್ಯೆ ಒಮ್ಮತ ಮೂಡದ ಕಾರಣ ಯಾರೂ ಅರ್ಜಿ ಸಲ್ಲಿಸಲಿಲ್ಲ. ಕೊನೆಗೆ ಒಮ್ಮತದ ಅಭ್ಯರ್ಥಿಯ ಆಯ್ಕೆಗೆ ಸಹರಿಸಲು ಬೆಳ್ಳಿ ಪ್ರಕಾಶ್‌ ಸಮ್ಮತಿಸಿ, ನಾಮಪತ್ರ ವಾಪಸ್‌ ಪಡೆದರು. ಹಾಗಾಗಿ, ಚುನಾವಣೆಯನ್ನು ಮುಂದೂಡಲಾಯಿತು.

ADVERTISEMENT

ಒಟ್ಟು 21 ನಿರ್ದೇಶಕರ ಪೈಕಿ, ಮೈಸೂರು–ಚಾಮರಾಜನಗರ, ಬಾಗಲಕೋಟೆ ಮತ್ತು ಕೋಲಾರ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕುಗಳನ್ನು ಹೊರತುಪಡಿಸಿ, ಉಳಿದ 18 ‌ಡಿಸಿಸಿ ‌ಬ್ಯಾಂಕುಗಳು‌ ನಾಮನಿರ್ದೇಶಿತರನ್ನು ನಿಯೋಜಿಸಿವೆ.

ಅಧ್ಯಕ್ಷ ಸ್ಥಾನದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿರುವ ಮಾಜಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೋದರ ಸಂಬಂಧಿ, ವಿಧಾನ ಪರಿಷತ್‌ ಸದಸ್ಯ ಎಸ್.ರವಿ ಹಾಗೂ ಬಿಜೆಪಿಯ ಉಚ್ಚಾಟಿತ ಶಾಸಕ ಶಿವರಾಮ ಹೆಬ್ಬಾರ್ ಅವರು ಕಣ್ಣಿಟ್ಟಿದ್ದಾರೆ. ಬ್ಯಾಂಕಿಗೆ ನೂತನವಾಗಿ ಆಯ್ಕೆಯಾಗಿರುವ ನಿರ್ದೇಶಕರಿಗೆ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಮೂರು ದಿನಗಳ ಹಿಂದೆ ಚಹಾ ಕೂಟ ಏರ್ಪಡಿಸಿದ್ದರು. ಈ ವೇಳೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಒಮ್ಮತದಿಂದ ಆಯ್ಕೆ ಪ್ರಕ್ರಿಯೆ ನಡೆಸುವ ಬಗ್ಗೆ ಚರ್ಚೆ ನಡೆದಿತ್ತು.  

ವಿಧಾನಪರಿಷತ್‌ನ ಕಾಂಗ್ರೆಸ್‌ ಸದಸ್ಯ ಶರಣಗೌಡ ಬಯ್ಯಾಪುರ ಅವರು ಉ‍ಪಾಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರವನ್ನು ಕೊನೆಯ ಕ್ಷಣದಲ್ಲಿ ಹಿಂಪಡೆದರು. ಯಾರೂ ನಾಮಪತ್ರ ಸಲ್ಲಿಸಿದ ಕಾರಣ ಆಯ್ಕೆ ನಡೆಯಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.