ADVERTISEMENT

ಎಪಿಎಂಸಿ ಕಾಯ್ದೆ ವಿವಾದ | ಮೊಸಳೆ ಕಣ್ಣೀರು ಬಿಡಿ, ನಿಜ ಕಳಕಳಿ ತೋರಿ: ರೈತ ಮುಖಂಡ

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ: ರೈತ ಮುಖಂಡ ಭಾಸ್ಕರ ರಾವ್ ಮೂಡಬೂಳ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಮೇ 2020, 19:45 IST
Last Updated 14 ಮೇ 2020, 19:45 IST
ಹಿರಿಯ ರೈತ ಮುಖಂಡ ಭಾಸ್ಕರ ರಾವ್ ಮೂಡಬೂಳ
ಹಿರಿಯ ರೈತ ಮುಖಂಡ ಭಾಸ್ಕರ ರಾವ್ ಮೂಡಬೂಳ    

ಯಾದಗಿರಿ: ‘ಎಪಿಎಂಸಿ ಅಧ್ಯಕ್ಷರಿಗೆ, ವರ್ತಕರಿಗೆ, ರೈತ ಸಂಘದ ಮುಖಂಡರಿಗೆ ರೈತರ ಬಗ್ಗೆ ಈಗ ನೆನಪಾಗಿದೆ. ಇಲ್ಲಿಯವರೆಗೆ ರೈತರಿಗೆ ತೂಕದಲ್ಲಿ, ದರದಲ್ಲಿ ಮೋಸಮಾಡಿದ್ದು ಮರೆತು ಹೋಗಿದೆ’ ಎಂದು ಹಿರಿಯ ರೈತ ಮುಖಂಡ ಭಾಸ್ಕರ ರಾವ್ ಮೂಡಬೂಳ ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು,‘ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಲು ಹೊರಟಿರುವ ಸರ್ಕಾರದ ಕ್ರಮವನ್ನು ವಿರೋಧ ಪಕ್ಷದವರುಈಗ ವಿರೋಧಿಸುತ್ತಿದ್ದಾರೆ. ತಿದ್ದುಪಡಿ ಕಾಯ್ದೆ ಜಾರಿಗೆ ಬಂದರೆ ಕಾರ್ಪೊರೇಟ್‌‌ ಕಂಪನಿಗಳಿಗೆ ಲಾಭವಾಗುತ್ತಿದೆ ಎನ್ನುತ್ತಾರೆ. ಇದೆಲ್ಲ ಮೊಸಳೆ ಕಣ್ಣೀರಾಗಿದೆ’ ಎಂದು ದೂರಿದರು.

‘ರೈತರಿಗೆ ತಮ್ಮ ಉತ್ಪನ್ನಗಳಿಗೆ ತಾವೇ ದರ ನಿಗದಿ ಮಾಡುವ ಅಧಿಕಾರ ಇಲ್ಲ. ಕೃಷಿ ಉತ್ಪನ್ನಗಳಿಗೆ ಸರಿಯಾದ ದರ ಸಿಗದ ಕಾರಣ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈಗ ವಿರೋಧ ಪಕ್ಷದವರು, ಆಡಳಿತ ಪಕ್ಷದವರು ರೈತರ ಪರ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ, ಇದು ತೋರಿಕೆಯ ನಾಟಕವಾಗಿದೆ. ರೈತರು ಬೆಳೆದ ಫಸಲು ಮೊದಲು ಖರೀದಿ ಮಾಡಲಿ. ಆಗ ಮಾತ್ರ ಅವರು ರೈತರ ನೆರವಿಗೆ ಬಂದಂತೆ ಆಗುತ್ತದೆ’ ಎಂದರು.

ADVERTISEMENT

‘ಬಿಜೆಪಿಯವರು 2014ರಲ್ಲಿ ಚುನಾವಣೆಗೆ ಮುನ್ನ ಡಾ.ಸ್ವಾಮಿನಾಥನ್‌ ವರದಿ ಜಾರಿಗೆ ತರುತ್ತೇವೆ ಎಂಬ ಭರವಸೆ ನೀಡಿ ಗೆದ್ದು ಬಂದರು. ವರದಿ ಜಾರಿಗೆ ತರುವುದಿಲ್ಲ ಎಂದು2015ರಲ್ಲಿ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದರು. ಇದು ರೈತರ ಪರವಾಗಿರುವ ಸರ್ಕಾರವೇ’ಎಂದು ಅವರು ಪ್ರಶ್ನಿಸಿದರು.

‘ರೈತ ಕೃಷಿಗೆ ₹ 100 ಖರ್ಚು ಮಾಡಿದರೆ ₹ 60 ಮಾತ್ರ ವಾಪಸ್‌ ಬರುತ್ತದೆ. ಇನ್ನುಳಿದ ₹ 40 ನಷ್ಟವಾದರೂ ಕೃಷಿ ಮಾತ್ರ ಬಿಟ್ಟಿಲ್ಲ. ಲಾಭದಾಯಕ ಬೆಲೆ ನೀಡಿದರಷ್ಟೇ ಎಪಿಎಂಸಿಯವರಿಗೆ ರೈತರ ಬಗ್ಗೆ ಮಾತನಾಡಲು ನೈತಿಕತೆ ಬರುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.