ADVERTISEMENT

ಖಾಸಗಿ ಕಂಪನಿಗಳಿಗೆ ಜುಟ್ಟು ಬಿಟ್ಟುಕೊಡುವುದಿಲ್ಲ: ಸಚಿವ ಎಸ್‌.ಟಿ. ಸೋಮಶೇಖರ್‌

ಎಪಿಎಂಸಿ ಬಳಿಯೇ ಧಾರಣೆ ನಿಗದಿ ಅಧಿಕಾರ

ಪ್ರವೀಣ ಕುಮಾರ್ ಪಿ.ವಿ.
Published 17 ಮೇ 2020, 20:15 IST
Last Updated 17 ಮೇ 2020, 20:15 IST
ಸಹಕಾರ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಎಸ್‌.ಟಿ. ಸೋಮಶೇಖರ್‌
ಸಹಕಾರ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಎಸ್‌.ಟಿ. ಸೋಮಶೇಖರ್‌   

ರಾಜ್ಯ ಸರ್ಕಾರವು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ 1966ಕ್ಕೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಲು ಹೊರಟಿದೆ. ಈ ತಿದ್ದುಪಡಿ ಏಕೆ ಅಗತ್ಯ, ಇದರಿಂದಾಗುವ ಅನುಕೂಲಗಳೇನು ಎಂದು ಸಹಕಾರ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಎಸ್‌.ಟಿ. ಸೋಮಶೇಖರ್‌ ‘ಪ್ರಜಾವಾಣಿ’ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

*ಕೊರೊನಾ ಸೋಂಕು ಹರಡುತ್ತಿರುವ ಬಿಕ್ಕಟಿನ ನಡುವೆಯೂ ಎಪಿಎಂಸಿ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರುವ ಅಗತ್ಯವೇನಿತ್ತು?

ಕೃಷಿಕರು ಬೆಳೆಯುವ ಉತ್ಪನ್ನಗಳಿಗೆ ಉತ್ತಮ ಧಾರಣೆ ಸಿಗಬೇಕು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಮೇ 5ರ ಒಳಗೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿತು. ಕೊರೊನಾ ಬಿಕ್ಕಟ್ಟಿನಿಂದಾಗಿ ಸದ್ಯ ವಿಧಾನಮಂಡಲದ ಅಧಿವೇಶನ ನಡೆಸುವುದು ಕಷ್ಟಸಾಧ್ಯ. ಹಾಗಾಗಿ ಸುಗ್ರೀವಾಜ್ಞೆ ಮೊರೆ ಹೋಗಬೇಕಾಯಿತು.

ADVERTISEMENT

*ಇಂತಹ ತಿದ್ದುಪಡಿಗೆ ಒತ್ತಾಯಿಸಿರಲಿಲ್ಲ ಎಂದು ರೈತ ಮುಖಂಡರು ಹೇಳುತ್ತಿದ್ದಾರಲ್ಲ?

ಸಚಿವನಾದ ಬಳಿಕ ಅನೇಕ ಎಪಿಎಂಸಿಗಳಿಗೆ ಭೇಟಿ ನೀಡಿದ್ದೇನೆ. ಹೋದಲ್ಲೆಲ್ಲ ರೈತರು ತಮ್ಮ ಉತ್ಪನ್ನಗಳಿಗೆ ಸರಿಯಾದ ದರ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದರು. ಅವರ ಒತ್ತಾಯವೂ ಈ ತಿದ್ದುಪಡಿಗೆ ಕಾರಣ.

*ಈಗಿರುವ ಮಾರುಕಟ್ಟೆ ವ್ಯವಸ್ಥೆಯನ್ನು ಈ ತಿದ್ದುಪಡಿ ಕುಲಗೆಡಿಸುವುದಿಲ್ಲವೇ?

ಹಾಗೇನಿಲ್ಲ. ಇದುವರೆಗೆ ಎಪಿಎಂಸಿ ಮೂಲಕವೇ ರೈತರ ಉತ್ಪನ್ನಗಳ ವಹಿವಾಟು ನಡೆಸುವುದು ಕಡ್ಡಾಯವಾಗಿತ್ತು. ಇನ್ನು ಖಾಸಗಿಯವರು ರೈತರ ಹೊಲದಿಂದಲೇ ನೇರವಾಗಿ ಕೃಷಿ ಉತ್ಪನ್ನ ಖರೀದಿಸಲು ಅವಕಾಶ ಸಿಗಲಿದೆ. ಬೆಳೆಯನ್ನು ಮಾರುಕಟ್ಟೆವರೆಗೆ ಸಾಗಿಸುವ ವೆಚ್ಚವೂ ರೈತರಿಗೆ ಉಳಿತಾಯವಾಗಲಿದೆ. ಜತೆಗೆ ಎಪಿಎಂಸಿಗಳೂ ಹಿಂದಿನಂತೆಯೇ ಕಾರ್ಯನಿರ್ವಹಿಸಲಿವೆ. ಪೈಪೋಟಿ ಹೆಚ್ಚಿ, ರೈತರಿಗೆ ಉತ್ತಮ ಧಾರಣೆ ಸಿಗಲಿದೆ.

*ಬಹುರಾಷ್ಟ್ರೀಯ ಕಂಪನಿಗಳು ಮಾರುಕಟ್ಟೆ ಮೇಲೆ ಏಕಸ್ವಾಮ್ಯ ಸಾಧಿಸಿ, ರೈತರ ಶೋಷಣೆಗೆ ಮುಂದಾಗುವುದಿಲ್ಲ ಎಂಬುದಕ್ಕೆ ಏನು ಖಾತರಿ?

ಸರ್ಕಾರ ಯಾವುದೇ ಕಾರಣಕ್ಕೂ ಖಾಸಗಿ ಕಂಪನಿಗಳ ಕೈಗೆ ಜುಟ್ಟು ಬಿಟ್ಟುಕೊಡುವುದಿಲ್ಲ. ಖಾಸಗಿ ವ್ಯಕ್ತಿ ಇರಲಿ ಅಥವಾ ಬಹುರಾಷ್ಟ್ರೀಯ ಕಂಪನಿಯೇ ಇರಲಿ, ರೈತರಿಂದ ನೇರ ಖರೀದಿ ನಡೆಸಲು ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಪರವಾನಗಿ ಪಡೆಯಲೇಬೇಕು. ರೈತರಿಗೆ ನಷ್ಟವಾಗದಂತೆ ಕೃಷಿ ಉತ್ಪನ್ನಗಳಿಗೆ ಧಾರಣೆ ನಿಗದಿಪಡಿಸುವ ಅಧಿಕಾರ ಇನ್ನು ಮುಂದೆಯೂ ಎಪಿಎಂಸಿಗೆ ಇದ್ದೇ ಇರುತ್ತದೆ. ಅದಕ್ಕಿಂತ ಕಡಿಮೆ ಧಾರಣೆಗೆ ಖಾಸಗಿಯವರೂ ಕೃಷಿಕರಿಂದ ಉತ್ಪನ್ನ ಖರೀದಿಸುವಂತಿಲ್ಲ.

*ಸಾಕಷ್ಟು ನಿಯಂತ್ರಣ ವ್ಯವಸ್ಥೆಯಿದ್ದರೂ ಎಪಿಎಂಸಿಗಳಲ್ಲಿ ಅವ್ಯವಹಾರ ನಡೆಯುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳನ್ನು ನಿಯಂತ್ರಿಸುವುದು ಕನಸಿನ ಮಾತಲ್ಲವೇ?

ಖಾಸಗಿ ಸಂಸ್ಥೆಗಳು ಷರತ್ತುಗಳಿಗೆ ವಿರುದ್ಧವಾಗಿ ನಡೆದುಕೊಂಡರೆ ಅವುಗಳ ಪರವಾನಗಿ ರದ್ದುಪಡಿಸಲಾಗುತ್ತದೆ. ಪ್ರಸ್ತುತ ಎಪಿಎಂಸಿಯಲ್ಲಿ ದಲ್ಲಾಳಿ ಹಾವಳಿಯಿಂದ ನಿರೀಕ್ಷಿತ ಬೆಲೆ ಸಿಗದಿದ್ದರೂ ಬೇರೆಯವರಿಗೆ ತಮ್ಮ ಉತ್ಪನ್ನ ಮಾರಲು ರೈತರಿಗೆ ಅವಕಾಶವಿಲ್ಲ. ತಮ್ಮ ಉತ್ಪನ್ನವನ್ನು ಯಾರಿಗೆ ಬೇಕಾದರೂ ಮಾರುವ ಸ್ವಾತಂತ್ರ್ಯ ಅವರಿಗೆ ಸಿಗಲಿದೆ. ಅವರ ಬೆಳೆ ಅವರ ಹಕ್ಕು.

*ಈ ತಿದ್ದುಪಡಿಗೆ ವಿರೋಧ ಪಕ್ಷಗಳು ಹಾಗೂ ರೈತ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆಯಲ್ಲಾ?

ಎಪಿಎಂಸಿಗಳಲ್ಲಿ ದಲ್ಲಾಳಿಗಳಿಂದಾಗಿ ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ನಮ್ಮ ನಾಯಕ ಬಿ.ಎಸ್‌.ಯಡಿಯೂರಪ್ಪ ಸಾಕಷ್ಟು ಹಿಂದೆಯೇ ಹೋರಾಟ ನಡೆಸಿದ್ದರು. ಈ ತಿದ್ದುಪಡಿಯಿಂದ ಏನೇನು ಅನುಕೂಲ ಆಗಲಿವೆ ಎಂಬ ಬಗ್ಗೆ ವಿರೋಧ ಪಕ್ಷಗಳ ನಾಯಕರು ಹಾಗೂ ರೈತ ಸಂಘಟನೆಗಳ ಮುಖಂಡರಿಗೂ ತಿಳಿ ಹೇಳಿ, ಅವರ ಮನವೊಲಿಸುತ್ತಾರೆ ಎಂಬ ವಿಶ್ವಾಸವಿದೆ.

*ರೈತರೆಲ್ಲ ಖಾಸಗಿ ಖರೀದಿದಾರರತ್ತ ವಾಲಿದರೆ ಎಪಿಎಂಸಿಗಳಿಗೆ ನಷ್ಟ ಉಂಟಾಗಿ ಅವುಗಳ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುವುದಿಲ್ಲವೇ?

ನಮಗೆ ಎಪಿಎಂಸಿಗಳಿಗಿಂತಲೂ ರೈತರ ಉತ್ಪನ್ನಗಳಿಗೆ ಉತ್ತಮ ಧಾರಣೆ ಸಿಗುವುದು ಮುಖ್ಯ. ರಿಲಯನ್ಸ್‌ ಫ್ರೆಷ್‌ನಂತಹ ಮಳಿಗೆಗಳಿಗೆ ಅವಕಾಶ ಕಲ್ಪಿಸಿದಾಗಲೂ ಇಂತಹದ್ದೇ ಆತಂಕ ವ್ಯಕ್ತವಾಯಿತು. ಅದರಿಂದ ರೈತರಿಗೆ ಅನುಕೂಲವಾಯಿತೇ ಹೊರತು ನಷ್ಟ ಆಗಲಿಲ್ಲ. ಈ ತಿದ್ದುಪಡಿ ರೈತರ ಆದಾಯ ದ್ವಿಗುಣಗೊಳಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.