ADVERTISEMENT

ರೈತರಿಗಷ್ಟೇ ಅಲ್ಲ, ಗ್ರಾಹಕರಿಗೂ ಬರೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ

ವೈ.ಗ.ಜಗದೀಶ್‌
Published 19 ಮೇ 2020, 7:10 IST
Last Updated 19 ಮೇ 2020, 7:10 IST
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ   

‘ಎಪಿಎಂಸಿ ಕಾಯ್ದೆಗೆ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಯು ಅನ್ನದಾತರ ಹೆಗಲೇರಿ ಶೋಷಣೆ ಮಾಡುವ ಅವಕಾಶವನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಕಲ್ಪಿಸಲಿದೆ. ಕೃಷಿ ಮಾರುಕಟ್ಟೆ ಮೇಲೆ ಹಿಡಿತ ಸಾಧಿಸುವ ಕಂಪನಿಗಳಿಗೆ ಆಹಾರಧಾನ್ಯಗಳ ಕೃತಕ ಅಭಾವ ಸೃಷ್ಟಿಸುವ ಅವಕಾಶವೂ ಸಿಗಲಿದೆ. ಇದರಿಂದಾಗಿ ಗ್ರಾಹಕರಿಗೆ ಬೆಲೆ ಏರಿಕೆ ಬರೆ ಬೀಳುವುದು ಖಚಿತ’ ಎಂಬುದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಅಭಿಪ್ರಾಯ.

ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿ ಕುರಿತು ‘ಪ್ರಜಾವಾಣಿ’ಗೆ ಅವರು ನೀಡಿರುವ ಸಂದರ್ಶನ ಇಲ್ಲಿದೆ

*ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ನಿಮ್ಮ ವಿರೋಧ ಏಕೆ?

ADVERTISEMENT

ಸಿದ್ದರಾಮಯ್ಯ: ವರ್ತಕರು ಮತ್ತು ಮಧ್ಯವರ್ತಿಗಳು ರೈತರ ಶೋಷಣೆ ಮಾಡಬಾರದು, ರೈತರ ಬೆಳೆಗೆ ನ್ಯಾಯಯುತ ಬೆಲೆ ಸಿಗಬೇಕು ಎಂಬ ಕಾರಣಕ್ಕೆ ಎಪಿಎಂಸಿ ವ್ಯವಸ್ಥೆ ಜಾರಿಗೆ ತರಲಾಗಿದೆ. ಎಲ್ಲ ಎಪಿಎಂಸಿಗಳಲ್ಲಿ ರೈತರನ್ನು ಪ್ರತಿನಿಧಿಸುವಚುನಾಯಿತ ಆಡಳಿತ ಮಂಡಳಿ ಇದ್ದು ನಿಯಂತ್ರಿತ ಮಾರುಕಟ್ಟೆ ಹೊಂದಿದೆ.ನಾನು ಮುಖ್ಯಮಂತ್ರಿಯಾಗಿದ್ದಾಗ ಆನ್‌ಲೈನ್ ಮಾರುಕಟ್ಟೆಗೆ ಅವಕಾಶ ಕಲ್ಪಿಸಲಾಗಿತ್ತು. ಅದರಿಂದಾಗಿ ಸ್ಪರ್ಧಾತ್ಮಕ ದರ ರೈತರಿಗೆ ಸಿಗುತ್ತಿದೆ. ಆನ್‌ಲೈನ್‌ನಲ್ಲಿ ಹರಾಜು ಆದ ಮೇಲೆ, ತನ್ನ ಉತ್ಪನ್ನಕ್ಕೆ ನ್ಯಾಯೋಚಿತ ಬೆಲೆ ಸಿಕ್ಕಿಲ್ಲವೆಂದಾದರೆ ತಾನು ಮಾರಾಟ ಮಾಡುವುದಿಲ್ಲ ಎಂದು ಹೇಳಲು ಅವಕಾಶ ಇದೆ. ರೈತರು ತಮ್ಮ ಉತ್ಪನ್ನಗಳನ್ನು ಮನೆಗೆ ಕೊಂಡೊಯ್ಯಬಹುದು ಅಥವಾ ಅಲ್ಲೇ ಗೋಡೌನ್‌ನಲ್ಲಿ ಇಡಬಹುದು. ತುರ್ತುಹಣ ಬೇಕಾಗಿದ್ದರೆ ಅಡಮಾನ ಇಟ್ಟು ಸಾಲ ಪಡೆಯುವ ಅವಕಾಶ ಇದೆ. ರೈತ ಉಳಿದುಕೊಳ್ಳಲು ರೈತ ಭವನ, ಕ್ಯಾಂಟೀನ್‌, ಉತ್ಪನ್ನಗಳ ಗ್ರೇಡಿಂಗ್ ಮಾಡುವ ವ್ಯವಸ್ಥೆಯೂ ಇದೆ. ಹೊಸ ತಿದ್ದುಪಡಿ ಅನ್ವಯ ಖಾಸಗಿ ಮಾರುಕಟ್ಟೆ ಸ್ಥಾಪನೆಯಾದರೆ ಈ ಯಾವ ಸೌಲಭ್ಯಗಳೂ ಇರುವುದಿಲ್ಲ.

*ನಿಮ್ಮ ಸರ್ಕಾರದ ಅವಧಿಯಲ್ಲಿ ಆನ್‌ಲೈನ್ ಮಾರುಕಟ್ಟೆಗೆ ಅವಕಾಶ ಕಲ್ಪಿಸಿದ್ದರೂ ಮಧ್ಯವರ್ತಿ ಹಾವಳಿ ಇನ್ನೂ ಇದೆಯಲ್ಲವೇ?

ಸಿದ್ದರಾಮಯ್ಯ: ಆನ್‌ಲೈನ್‌ ಮಾರುಕಟ್ಟೆ ಪದ್ಧತಿ ಉತ್ತಮ ವ್ಯವಸ್ಥೆ ಎಂದು ಬಜೆಟ್ ಹಾಗೂ ಆರ್ಥಿಕ ಸಮೀಕ್ಷೆಗಳಲ್ಲಿ ಕೇಂದ್ರ ಸರ್ಕಾರವೇ ಹೇಳಿತ್ತು. 2016ರಲ್ಲಿ ಕೇಂದ್ರ ಕೃಷಿ ಸಚಿವರು ಎಲ್ಲ ರಾಜ್ಯಗಳ ಕೃಷಿ ಸಚಿವರ ಸಭೆಯನ್ನು ಧಾರವಾಡದಲ್ಲಿ ನಡೆಸಿ, ಈ ಬಗ್ಗೆ ಚರ್ಚೆ ಮಾಡಿದ್ದರು. ವೈಜ್ಞಾನಿಕ ಹಾಗೂ ಸ್ಪರ್ಧಾತ್ಮಕ ಬೆಲೆ ಇದರಿಂದ ಸಿಗಲಿದೆ ಎಂದು ಪ್ರತಿಪಾದಿಸಿದ್ದ ಕೇಂದ್ರ ಸರ್ಕಾರ, ಎಲ್ಲ ರಾಜ್ಯಗಳಲ್ಲೂ ಇದನ್ನೂ ಆರಂಭಿಸುವಂತೆ ನಿರ್ದೇಶನ ನೀಡಿತ್ತು. ಈಗ ಏಕಾಏಕಿ ಆ ದಾರಿ ಬಿಟ್ಟು, ಬಂಡವಾಳಶಾಹಿಗಳು, ಬಹುರಾಷ್ಟ್ರೀಯ ಕಂಪನಿಗಳಿಗೆ ಲಾಭ ಮಾಡಿಕೊಡಲು ಮುಂದಾಗಿದೆ. ಹೊಸ ವ್ಯವಸ್ಥೆಯಿಂದ ಆರಂಭದಲ್ಲಿ ರೈತರಿಗೆ ಒಂದಿಷ್ಟು ಅನುಕೂಲ ಆದೀತು. ಆದರೆ, ಬಹುರಾಷ್ಟ್ರೀಯ ಕಂಪನಿಗಳ ಏಕಸ್ವಾಮ್ಯದ ಬಳಿಕ, ಅವರು ಹೇಳಿದ ಬೆಲೆಗೆ ರೈತರು ಮಾರುವ ಪರಿಸ್ಥಿತಿ ಬರಲಿದೆ. ಒಪ್ಪಂದದ ಕೃಷಿ, ಗುತ್ತಿಗೆ ಕೃಷಿಗೆ ಹೆಚ್ಚಿನ ಅವಕಾಶ ಸಿಕ್ಕಿ, ರೈತರು ತಮ್ಮ ಉತ್ಪನ್ನ ಹಾಗೂ ಭೂಮಿಯ ಮೇಲಿನ ಹಿಡಿತ ಕಳೆದುಕೊಂಡು ಭಿಕಾರಿಗಳಾಗಬೇಕಾಗುತ್ತದೆ. ರಿಲಯನ್ಸ್, ಡಿ–ಮಾರ್ಟ್‌ನಂಥವರಿಗೆ ಅನುಕೂಲ ಆಗುತ್ತದೆ. ಅವರದ್ದೇ ಸಾಮ್ರಾಜ್ಯ ಆಗುತ್ತದೆ. ಕಂಪನಿಗಳ ಮರ್ಜಿಯಲ್ಲಿ ರೈತರು ಬದುಕಬೇಕಾಗುತ್ತದೆ.

*ರಿಲಯನ್ಸ್ ಕಂಪನಿ ಈಗ ವಹಿವಾಟು ನಡೆಸುತ್ತಿಲ್ಲವೇ ಎಂದು ಮುಖ್ಯಮಂತ್ರಿ ಕೇಳಿದ್ದಾರಲ್ಲ?

ಸಿದ್ದರಾಮಯ್ಯ: ಬಹುರಾಷ್ಟ್ರೀಯ ಕಂಪನಿಗಳ ಹಿತಕಾಯಲು ಕೇಂದ್ರ ಸರ್ಕಾರ ಹೇಳಿದೆ; ಯಡಿಯೂರಪ್ಪ ಮಾಡಿದ್ದಾರೆ. ರಿಲಯನ್ಸ್ ಅಥವಾ ಬೇರೆ ಕಂಪನಿಗಳ ದಾಸ್ತಾನು ಕೇಂದ್ರಗಳನ್ನು ಪರಿಶೀಲನೆ ಮಾಡುವ ಅಧಿಕಾರ ಈಗ ಸರ್ಕಾರದ ಬಳಿಯೇ ಇದೆ. ಹಾಗಾಗಿ ದರ ಜಾಸ್ತಿಯಾದರೆ ನಿಯಂತ್ರಣಕ್ಕೆ ದಾರಿ ಇದೆ. ಆದರೆ, ಅವರದ್ದೇ ಏಕಸ್ವಾಮ್ಯ ಆದ ಬಳಿಕ ಎಲ್ಲ ರೀತಿಯ ಅಡ್ಡದಾರಿಗಳೂ ಶುರುವಾಗಲಿವೆ. ಕಾಳಸಂತೆ ವ್ಯಾಪಾರ, ಕೃತಕ ಅಭಾವ ಸೃಷ್ಟಿಯಂತಹ ಅಕ್ರಮಗಳು ನಡೆಯಲಿವೆ. ಹಿಂದೆ, ತೊಗರಿಬೇಳೆ, ಉದ್ದಿನ ಬೇಳೆ ಹಾಗೂ ಖಾದ್ಯ ತೈಲ ಕೃತಕ ಅಭಾವ ಸೃಷ್ಟಿಸಿ ದರವನ್ನು ಏಕಾಏಕಿ ನಾಲ್ಕು ಪಟ್ಟು ಜಾಸ್ತಿ ಮಾಡಲಾಗಿತ್ತು. ಗೋಡೌನ್ ಮೇಲೆ ದಾಳಿ ನಡೆಸಿ ಅದನ್ನು ನಿಯಂತ್ರಣಕ್ಕೆ ತರಲಾಗಿತ್ತು. ಅಲ್ಲದೇ ಎಪಿಎಂಸಿ ಸರ್ಕಾರದ ಹಿಡಿತದಲ್ಲಿ ಇದ್ದುದರಿಂದ ಅಲ್ಲಿಯ ವಹಿವಾಟು ನಿಯಂತ್ರಣಕ್ಕೆ ಒಳಪಡಿಸಿ, ಮಾರುಕಟ್ಟೆಗೆ ಕಡಿಮೆ ದರದಲ್ಲಿ ಧಾನ್ಯವನ್ನು ಪೂರೈಸಿ ದರ ಇಳಿಯುವಂತೆ ಮಾಡಲಾಗಿತ್ತು. ಕಾಯ್ದೆ ತಿದ್ದುಪಡಿಯಿಂದಾಗಿ ಇಂತಹ ಅವಕಾಶವೇ ಕೈತಪ್ಪಿ ಹೋಗಲಿದೆ. ರೈತರಿಂದ ಕಡಿಮೆ ದರಕ್ಕೆ ಖರೀದಿಸಿ, ಅದನ್ನು ಸಂಗ್ರಹಿಸಿಕೊಟ್ಟುಕೊಂಡು ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸಿ ದರ ಹೆಚ್ಚಿಸುವ ಅಸ್ತ್ರವನ್ನು ಕಂಪನಿಗಳು ಬಳಸಿದರೆ ನೇರವಾಗಿ ಹೊರೆಬೀಳುವುದು ಗ್ರಾಹಕರ ಮೇಲೆಯೇ.

*ಕಾಯ್ದೆ ಬಂದು ಬಿಟ್ಟಿದೆಯಲ್ಲವೇ?

ಸಿದ್ದರಾಮಯ್ಯ: ಕೇಂದ್ರ ಸರ್ಕಾರದ ಹುನ್ನಾರಕ್ಕೆ ರಾಜ್ಯ ಸರ್ಕಾರ ಬಲಿಯಾಗಿದೆ. ಪ್ರಜಾತಂತ್ರದ ಮೇಲೆ ನಂಬಿಕೆ ಇಲ್ಲದ ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯ ಆಶಯವನ್ನೇ ಮಣ್ಣುಪಾಲು ಮಾಡುತ್ತಿದೆ. ಒತ್ತಡ ಹೇರಿ ರಾಜ್ಯ ಸರ್ಕಾರದ ಕೈಯಲ್ಲಿ ಇಂತಹ ಕೆಲಸ ಮಾಡಿಸಿದೆ. ಮಹಾರಾಷ್ಟ್ರದಲ್ಲೂ ತಿದ್ದುಪಡಿ ತಂದಿದ್ದರು. ದೊಡ್ಡಮಟ್ಟದ ಹೋರಾಟ ಹಾಗೂ ಅಪಾಯ ಅರಿವಾದ ಬಳಿಕ ಅದನ್ನು ವಾಪಸ್ ಪಡೆಯಲಾಗಿದೆ.

*ನಿಮ್ಮ ಪಕ್ಷದ ಮುಂದಿನ ನಡೆ?

ಸಿದ್ದರಾಮಯ್ಯ: ರಾಜ್ಯದ ಹಕ್ಕನ್ನೇ ಕೇಂದ್ರ ಸರ್ಕಾರ ಕಿತ್ತುಕೊಂಡಿದೆ. ಸ್ವಾಯತ್ತೆಗೆ ಧಕ್ಕೆ ಬಂದಿದೆ. ರಾಜ್ಯ ಸರ್ಕಾರವನ್ನು ಹೀಗೆ ಹೆದರಿಕೆಯಲ್ಲಿಟ್ಟುಕೊಂಡು ಕೆಲಸ ಮಾಡಿದರೆ ಅರಾಜಕತೆ ಸೃಷ್ಟಿಯಾಗಲಿದೆ. ಮಂಗಳವಾರ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಿ ಹೋರಾಟದ ಸ್ವರೂಪದ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.