ADVERTISEMENT

ಎಪಿಎಂಸಿ: ದೊಣ್ಣೆ ಏಟು ತಪ್ಪಿದೆ; ಬಲಪಡಿಸದೇ ಉಳಿಗಾಲವಿಲ್ಲ

ಬಸವರಾಜ ಹವಾಲ್ದಾರ
Published 19 ನವೆಂಬರ್ 2021, 20:40 IST
Last Updated 19 ನವೆಂಬರ್ 2021, 20:40 IST
ಹುಬ್ಬಳ್ಳಿಯ ಎಪಿಎಂಸಿ ಮಾರುಕಟ್ಟೆ ಬಿಕೋ ಎನ್ನುತ್ತಿದೆ  -–ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಎಪಿಎಂಸಿ ಮಾರುಕಟ್ಟೆ ಬಿಕೋ ಎನ್ನುತ್ತಿದೆ  -–ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಬೀಸೊ ದೊಣ್ಣೆ ತಪ್ಪಿದರೆ, ನೂರು ವರ್ಷ ಆಯಸ್ಸು’ ಎಂಬ ಗಾದೆ ಮಾತಿದೆ. ಈಗ ಎ‍ಪಿಎಂಸಿಗಳಿಗೆ ದೊಣ್ಣೆ ಏಟು ತಪ್ಪಿದೆ. ಆದರೆ.ಅವುಗಳ ಆಯಸ್ಸು ನೂರಾರು ವರ್ಷ ಹೆಚ್ಚಾಗಬೇಕೆಂದರೆ ಅಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿ, ಬಲಪಡಿಸುವ ಕೆಲಸವೂ ಆಗಬೇಕಿದೆ. ಇಲ್ಲದಿದ್ದರೆ, ಎಪಿಎಂಸಿಗಳೂ ಉಳಿಯುವುದಿಲ್ಲ. ಅವುಗಳನ್ನು ನೆಚ್ಚಿಕೊಂಡಿರುವ ರೈತರ ಬಾಳು ಸಂಕಷ್ಟಕ್ಕೆ ಸಿಲುಕಲಿದೆ.

ಹೊಸ ಕಾಯ್ದೆ ಬಂದ ನಂತರ ರಾಜ್ಯದಲ್ಲಿರುವ ಎಪಿಎಂಸಿಗಳ ಪೈಕಿ ಶೇ 55ರಷ್ಟು ಎಪಿಎಂಸಿಗಳ ಆದಾಯ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೇ10ಕ್ಕೆ ಕುಸಿದಿದ್ದರೆ, ಶೇ 30 ರಷ್ಟು ಎಪಿಎಂಸಿಗಳ ಆದಾಯ ಶೇ 30ಕ್ಕೆ, ಉಳಿದ ಎಪಿಎಂಸಿಗಳದ್ದು ಅರ್ಧಕ್ಕೆ ಇಳಿದಿತ್ತು.ರಾಜ್ಯದ ಶೇ60ಕ್ಕೂ ಹೆಚ್ಚು ಎಪಿಎಂಸಿಗಳು ನಿರ್ವಹಣಾ ವೆಚ್ಚ, ಭದ್ರತಾ ಖರ್ಚು ನಿಭಾಯಿಸಲು ಪರದಾಡಬೇಕಾದ ಸ್ಥಿತಿ ಎದುರಿಸುತ್ತಿವೆ.

‘ಹೊಸ ಕಾಯ್ದೆ ರದ್ದತಿ ಘೋಷಣೆಯಿಂದ ಎಪಿಎಂಸಿಗಳಿಗೆ ಒಂದಷ್ಟು ಉಸಿರಾಡಲು ಅವಕಾಶ ದೊರೆಯಬಹುದು. ಆದರೆ, ಅಲ್ಲಿರುವ ನ್ಯೂನತೆಗಳನ್ನು ಸರಿಪಡಿಸಬೇಕು. ರೈತರ ಬಲ ಹೆಚ್ಚಿಸುವ ಕೆಲಸ ಆಗಬೇಕು’ ಎನ್ನುತ್ತಾರೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್.

ADVERTISEMENT

ದಲ್ಲಾಳಿಗಳ ಹಾವಳಿ, ಸೌಲಭ್ಯಗಳ ಕೊರತೆ, ಆನ್‌ಲೈನ್‌ ಹರಾಜು ಜಾರಿ ವಿಳಂಬ, ಹಳೆಯ ಎಪಿಎಂಸಿ ಕಾಯ್ದೆಯ ಕಟ್ಟುನಿಟ್ಟಿನ ಜಾರಿ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳದಿದ್ದರೆ, ರೈತರು ಸಂಕಷ್ಟ ಪಡುವುದು ತಪ್ಪುವುದಿಲ್ಲ ಎನ್ನುವುದು ರೈತ ಮುಖಂಡರ ಆಗ್ರಹ.

ಮಧ್ಯವರ್ತಿಗಳ ಕಾಟ ತಪ್ಪಿಸಲು ಆನ್‌ಲೈನ್‌ ಹರಾಜು ಪದ್ಧತಿ ಜಾರಿಗೊಳಿಸಲಾಗಿದೆ. ಮಂಡ್ಯದ ಎಪಿಎಂಸಿಯಲ್ಲಿ ಇಂದಿಗೂ ಬೆಲ್ಲದ ಮಾರಾಟ ಆನ್‌ಲೈನ್‌ನಲ್ಲಿ ನಡೆಯುತ್ತಿಲ್ಲ. ಅದಕ್ಕೆ ಅಲ್ಲಿರುವ ವ್ಯಾಪಾರಸ್ಥರೇ ಅಡ್ಡಿಗಳನ್ನು ಸೃಷ್ಟಿಸುತ್ತಿದ್ದಾರೆ. ಇಂತಹ ಪ್ರಕರಣಗಳು ಹಲವಾರು ಎಪಿಎಂಸಿಗಳಲ್ಲಿವೆ. ಹಾಗಾಗಿ, ರೈತರಿಗೆ ಉತ್ತಮ ಬೆಲೆ ಇಂದಿಗೂ ದೊರೆಯುತ್ತಿಲ್ಲ.

‘ಫಸಲು ಬಂದಾಗ ಕನಿಷ್ಠ ಬೆಂಬಲ ಬೆಲೆಯಡಿ ಹಲವಾರು ಉತ್ಪನ್ನಗಳನ್ನು ಖರೀದಿಸಲಾಗುತ್ತದೆ. ಆದರೆ, ಒಬ್ಬ ರೈತರಿಂದ ಇಂತಿಷ್ಟೇ ಎಂದು ಖರೀದಿಸಲಾಗುತ್ತದೆ. ಉಳಿದ ಉತ್ಪನ್ನವನ್ನು ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ. ಮುಕ್ತ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತ ಕಡಿಮೆ ಬೆಲೆ ಇದ್ದಾಗ ಸರ್ಕಾರದಿಂದಲೇ ಖರೀದಿಸುವ ಕೆಲಸ ಆಗಬೇಕು ಎನ್ನುತ್ತಾರೆ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ.

ರಾಜ್ಯದ ಕೆಲವು ಎಪಿಎಂಸಿಗಳಲ್ಲಿ ಕ್ಲಿನಿಂಗ್‌, ಗ್ರೇಡಿಂಗ್‌, ಪ್ಯಾಕಿಂಗ್‌ ವ್ಯವಸ್ಥೆ ಇದೆ. ಇದರಿಂದಾಗಿ ಹೆಚ್ಚಿನ ಬೆಲೆ ಪಡೆಯಲು ಸಾಧ್ಯವಾಗುತ್ತದೆ. ಆದರೆ, ಬಹುತೇಕ ಕಡೆಗಳಲ್ಲಿಶೈತ್ಯಾಗಾರಗಳು (ಕೋಲ್ಡ್ ಸ್ಟೋರೇಜ್) ಇಲ್ಲ. ಇದಕ್ಕಾಗಿ ಖಾಸಗಿಯವರನ್ನು ಅವಲಂಬಿಸಬೇಕಾಗಿದೆ. ಬೆಲೆ ಕಡಿಮೆ ಇದ್ದಾಗ ಸಂಗ್ರಹಿಸಿಟ್ಟು, ನಂತರ ಮಾರಾಟಕ್ಕೆ ಅವಕಾಶವಾಗುವಂತೆ ಸೌಲಭ್ಯ ಒದಗಿಸಬೇಕಿದೆ.

‘ಉತ್ಪನ್ನಗಳ ಮಾರಾಟಕ್ಕೆ ರೈತರಿಂದ ಕಮಿಷನ್‌ ಪಡೆಯಬಾರದು. ವರ್ತಕರಿಂದ ಮಾತ್ರ ಪಡೆಯಬೇಕು ಎಂದಿದೆ. ಆದರೆ, ಅಧಿಕಾರಿಗಳು ಕಟ್ಟುನಿಟ್ಟಿನ ನಿಗಾ ವಹಿಸದೇ ಇರುವುದರಿಂದ ವರ್ತಕರು ರೈತರಿಂದಲೂ ಕಮಿಷನ್‌‍ ಪಡೆಯುತ್ತಾರೆ. ಇದನ್ನು ತಪ್ಪಿಸಬೇಕು. ಜೊತೆಗೆ ಉತ್ಪನ್ನ ಮಾರಾಟದ ನಂತರ ಹಣವನ್ನು ದಲ್ಲಾಳಿಗಳು ಪಾವತಿಸಲು ಅವಕಾಶ ನೀಡಲಾಗುತ್ತದೆ. ಇದರಿಂದ ರೈತರಿಗೆ ಸರಿಯಾಗಿ ಹಣ ಸಿಗುವುದಿಲ್ಲ. ಎಪಿಎಂಸಿಗಳ ಮೂಲಕ ರೈತರ ಖಾತೆಗಳಿಗೆ ನೇರವಾಗಿ ಹಣ ಪಾವತಿಯಾಗಬೇಕು ಎನ್ನುವುದು ಶಾಂತಕುಮಾರ್ ಅವರ ಆಗ್ರಹ.

‘ರೈತರ ಉತ್ಪನ್ನ ಉತ್ತಮ ಬೆಲೆಗೆ ಮಾರಾಟವಾಗದಿದ್ದರೆ, ಆ ಉತ್ಪನ್ನವನ್ನು 3 ತಿಂಗಳವರೆಗೆ ಗೋದಾಮುಗಳಲ್ಲಿರಿಸಿಕೊಂಡು ಬಡ್ಡಿ ರಹಿತವಾಗಿ ಉತ್ಪನ್ನದ ಮೌಲ್ಯದ ಶೇ 75ರಷ್ಟು ಹಣವನ್ನು ನೀಡಬೇಕು. ಆಗ ಅವರು ಉತ್ತಮ ಬೆಲೆ ಬಂದಾಗ ಮಾರಾಟ ಮಾಡಲು ಸಾಧ್ಯವಾಗುತ್ತದೆ. ಇದು ಎಪಿಎಂಸಿ ಕಾಯ್ದೆ‌ಯಲ್ಲಿದ್ದರೂ, ಜಾರಿಯಾಗುತ್ತಿಲ್ಲ. ಕೂಡಲೇ ಜಾರಿಗೆ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸುತ್ತಾರೆ.

‘ಸಣ್ಣ ರೈತರ ಸಂಖ್ಯೆ ಹೆಚ್ಚಿದೆ. ಅವರು ಬೆಳೆಯುವ ಅರ್ಧ, ಒಂದು ಕ್ವಿಂಟಲ್‌ ಉತ್ಪನ್ನವನ್ನು 20 ರಿಂದ 40 ಕಿ.ಮೀ. ದೂರದ ಎಪಿಎಂಸಿಗಳಿಗೆ ತರಲಾಗುವುದಿಲ್ಲ. ಹಾಗಾಗಿ, ಅವರು ಸ್ಥಳೀಯ ಮಧ್ಯವರ್ತಿಗಳಿಗೆ ಮಾರಾಟ ಮಾಡುತ್ತಾರೆ. ಅಂತಹ ರೈತರಿಗೆ ಮಾರುಕಟ್ಟೆಗೆ ತರಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು’ ಎನ್ನುವುದು ಕಿರೇಸುಗೂರಿನ ರೈತ ಮುಖಂಡ ಗುರು ರಾಯನಗೌಡ್ರ ಒತ್ತಾಯ.

ಎಪಿಎಂಸಿಗಳಲ್ಲಿ ಅರ್ಧದಷ್ಟು ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡಬೇಕು. ಅವುಗಳ ಅಭಿವೃದ್ಧಿಗೆ ಬೇಕಾದಷ್ಟು ಅನುದಾನ ನೀಡಬೇಕು. ಹೊರಗಡೆ ನಡೆಯುವ ವಹಿವಾಟಿನ ಬೆಲೆ, ಹಣ ಪಾವತಿ ಗಮನಿಸಲು ವಿಶೇಷ ತಂಡಗಳನ್ನು ರಚಿಸಬೇಕು. ರೈತ ಉತ್ಪಾದಕ ಸಂಸ್ಥೆಗಳನ್ನು ಹೆಚ್ಚಿಸುವ ಮೂಲಕ ಅವರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಮೋಸ ಮಾಡುವ ದಲ್ಲಾಳಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಅವಕಾಶ ಮಾಡಿಕೊಡಬೇಕು ಎನ್ನುವುದು ರೈತರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.