ADVERTISEMENT

ಮುಖ್ಯಮಂತ್ರಿ ವಿರುದ್ಧದ ಪ್ರಕರಣಗಳ ಮೇಲ್ಮನವಿ ವಾಪಸ್‌

ತಾಂತ್ರಿಕ ಕಾರಣದಿಂದ ಅರ್ಜಿ ಹಿಂಪಡೆದ ವಕೀಲ ಬಿ. ವಿನೋದ್‌

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 19:05 IST
Last Updated 5 ನವೆಂಬರ್ 2020, 19:05 IST
ಬಿಎಸ್‌ ಯಡಿಯೂರಪ್ಪ
ಬಿಎಸ್‌ ಯಡಿಯೂರಪ್ಪ    

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಮತ್ತು ಭ್ರಷ್ಟಾಚಾರ ಆರೋಪದಡಿ ಸಲ್ಲಿಸಿದ್ದ ಖಾಸಗಿ ದೂರುಗಳನ್ನು ತಿರಸ್ಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಮೂರು ಮೇಲ್ಮನವಿಗಳನ್ನು ವಕೀಲ ಬಿ. ವಿನೋದ್‌ ತಾಂತ್ರಿಕ ಕಾರಣಗಳಿಗಾಗಿ ಹಿಂದಕ್ಕೆ ಪಡೆದಿದ್ದಾರೆ.

ಯಡಿಯೂರಪ್ಪ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಿವಮೊಗ್ಗದ ಕಲ್ಲಹಳ್ಳಿಯ ಕರ್ನಾಟಕ ಗೃಹ ಮಂಡಳಿ ಬಡಾವಣೆಯಲ್ಲಿ ಮಗಳಿಗೆ ನಿವೇಶನ ಮಂಜೂರು ಮಾಡಿರುವುದು, ಭದ್ರಾವತಿ ತಾಲ್ಲೂಕಿನ ಹುಣಸೆಕಟ್ಟೆಯಲ್ಲಿ ಅಕ್ರಮವಾಗಿ 69 ಎಕರೆ ಜಮೀನು ಖರೀದಿಸಿರುವುದು ಮತ್ತು ಕೋಟೆಗಂಗೂರಿನಲ್ಲಿ ಜಮೀನಿನ ಭೂಪರಿವರ್ತನೆ ಮಾಡಿಸಿ ತಮ್ಮ ಕುಟುಂಬದ ಒಡೆತನದ ಧವಳಗಿರಿ ಡೆವಲಪರ್ಸ್‌ ಕಂಪನಿ ಹೆಸರಿಗೆ ವರ್ಗಾವಣೆ ಮಾಡಿಸಿಕೊಂಡಿರುವ ಆರೋಪದ ಮೇಲೆ ವಿನೋದ್‌, ಶಿವಮೊಗ್ಗ ನ್ಯಾಯಾಲಯದಲ್ಲಿ ಮೂರು ಖಾಸಗಿ ದೂರು ದಾಖಲಿಸಿದ್ದರು.

ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧದ ಖಾಸಗಿ ದೂರುಗಳನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ವಿನೋದ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಗುರುವಾರ ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್‌ ಮೈಕಲ್‌ ಕುನ್ಹ ಅವರಿದ್ದ ಪೀಠ, ‘ಸಾರ್ವಜನಿಕ ನೌಕರರ ವಿರುದ್ಧ ಖಾಸಗಿ ದೂರು ಸಲ್ಲಿಸುವ ಮುನ್ನ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದಿರಬೇಕು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಗೆ 2018ರಲ್ಲಿ ತಂದಿರುವ ತಿದ್ದುಪಡಿ ಪ್ರಕಾರ, ದೂರು ಸಲ್ಲಿಸುವ ಮುನ್ನ ಅನುಮತಿ ಕೋರಿ ಅರ್ಜಿಯನ್ನಾದರೂ ಸಲ್ಲಿಸಿರಬೇಕು’ ಎಂದು ತಿಳಿಸಿದರು.

ADVERTISEMENT

ಮೂರೂ ಅರ್ಜಿಗಳನ್ನು ಹಿಂಪಡೆದು, ಸಕ್ಷಮ ಪ್ರಾಧಿಕಾರದಿಂದ ಅನುಮತಿ ಕೋರಿ ಹೊಸದಾಗಿ ದೂರು ನೀಡಲಾಗುವುದು ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಅದನ್ನು ಪುರಸ್ಕರಿಸಿದ ನ್ಯಾಯಪೀಠ, ಅರ್ಜಿಯನ್ನು ಇತ್ಯರ್ಥಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.