ADVERTISEMENT

ಹಿಂದೂ ಧರ್ಮ ಒಡೆಯಲು ಜಾತಿ ಸಮೀಕ್ಷೆ: ವಿರೋಧ ಪಕ್ಷದ ನಾಯಕ ಆರ್‌.ಅಶೋಕ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 16:14 IST
Last Updated 21 ಸೆಪ್ಟೆಂಬರ್ 2025, 16:14 IST
ಆರ್.ಅಶೋಕ
ಆರ್.ಅಶೋಕ   

ಬೆಂಗಳೂರು: ‘ಹಿಂದೂ ಧರ್ಮವನ್ನು ಒಡೆಯುವ ಸಂಚಿನ ಭಾಗವಾಗಿ ಕರ್ನಾಟಕದ ಕಾಂಗ್ರೆಸ್‌ ಸರ್ಕಾರವು ಜಾತಿವಾರು ಸಮೀಕ್ಷೆ ನಡೆಸುತ್ತಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಆರೋಪಿಸಿದರು.

ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಎಲ್ಲ ಜಾತಿಗಳ ಜನರು ಮತಾಂತರವನ್ನು ವಿರೋಧಿಸಿದ್ದಾರೆ. ಕುರುಬ, ಬ್ರಾಹ್ಮಣ, ವಿಶ್ವಕರ್ಮ ಹೀಗೆ ಎಲ್ಲ ಜಾತಿಗಳ ಮುಂದೆ ಕ್ರಿಶ್ಚಿಯನ್‌ ಎಂಬ ಹೆಸರು ತರಲಾಗಿದೆ. ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಕ್ರೈಸ್ತರಾಗಿದ್ದು, ಅವರನ್ನು ಮೆಚ್ಚಿಸಲು ರಾಜ್ಯ ಕಾಂಗ್ರೆಸ್‌ ಸರ್ಕಾರ ಈ ರೀತಿ ಮಾಡುತ್ತಿದೆ’ ಎಂದರು.

‘ಇದು ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆಯಾಗಿದ್ದರೆ, ಅದರಲ್ಲಿ ಜಾತಿಗಳ ಹೆಸರನ್ನು ಏಕೆ ಉಲ್ಲೇಖಿಸಬೇಕು? ಇಲ್ಲದೇ ಇರುವ ಜಾತಿಗಳ ಹೆಸರನ್ನು ಏಕೆ ಸೇರಿಸಬೇಕು? ಇದು ಹಿಂದೂ ಧರ್ಮವನ್ನು ಒಡೆಯುವ ಹುನ್ನಾರವಲ್ಲದೆ ಬೇರೇನಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

‘ಮತಾಂತರವನ್ನು ತಡೆಯುವುದು ಸರ್ಕಾರದ ಹೊಣೆಗಾರಿಕೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತಾಂತರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರದ ಕೆಲವು ಸಚಿವರು ಈ ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರು ಕೇವಲ ಹೇಳಿಕೆ ಕೊಟ್ಟು, ನಾಟಕವಾಡುತ್ತಿದ್ದಾರೆ. ಅವರ ಸಮುದಾಯದ ಜನರೇ ಇದನ್ನು ಸಹಿಸುವುದಿಲ್ಲ. ಅಂತಹ ಸಚಿವರು ರಾಜೀನಾಮೆ ಕೊಡಬೇಕು’ ಎಂದು ಒತ್ತಾಯಿಸಿದರು.

‘ರಾಹುಲ್‌ ಗಾಂಧಿ ಅವರ ಅಪ್ಪಣೆಯಂತೆ ಈ ಸರ್ಕಾರ ಹಿಂದೂ ವಿರೋಧಿ ಕೆಲಸ ಮಾಡುತ್ತಿದೆ. ಹಿಂದೂ ಧರ್ಮಕ್ಕೆ ಅಪಮಾನ ಮಾಡುವುದು, ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವುದು ಮೊದಲಾದ ಕೆಲಸಗಳನ್ನು ಸರ್ಕಾರ ಮಾಡುತ್ತಿದೆ. ಸಾಹಿತಿ ಬಾನು ಮುಷ್ತಾಕ್‌ ಅವರಿಗೆ ಯಾವ ಅರ್ಹತೆ ಇದೆಯೆಂದು ಚಾಮುಂಡೇಶ್ವರಿ ಪೂಜೆಗೆ ಕರೆಸಿದ್ದಾರೆ ಎಂದು ತಿಳಿದಿಲ್ಲ’ ಎಂದರು.

ವಿ.ಸುನಿಲ್ ಕುಮಾರ್
ಹಿಂದೂ ಧರ್ಮದ ಬಲವನ್ನು ಕುಗ್ಗಿಸುವ ಕಾಂಗ್ರೆಸ್‌ನ ಸಂಚನ್ನು ಜಾರಿಗೆ ತರುವಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕರ್ನಾಟಕವನ್ನು ಪ್ರಯೋಗಶಾಲೆ ಮಾಡಿಕೊಳ್ಳಲಾಗಿದೆ
ಆರ್‌.ಅಶೋಕ ವಿಧಾನಸಭೆ ವಿರೋಧ ಪಕ್ಷದ ನಾಯಕ
‘ಆಯೋಗದ ಕಚೇರಿಗೆ ಮುತ್ತಿಗೆ’
‘ಹಿಂದು ಉಪಜಾತಿಗಳು ಹಾಗೂ ಕಾಯಕ ಸಮುದಾಯಗಳಿಗೆ ಕ್ರಿಶ್ಚಿಯನ್‌ ಪದ ಜೋಡಿಸಿ ಸೃಷ್ಟಿಸಿದ್ದ ಹೊಸ ಜಾತಿಗಳನ್ನು ಕೊನೆಗೂ ಹಿಂದುಳಿದ ವರ್ಗಗಳ ಆಯೋಗ ಸಮೀಕ್ಷಾ ಪಟ್ಟಿಯಿಂದ ಕೈ ಬಿಡಲು ನಿರ್ಧರಿಸಿದೆ. ಈ ಬಗ್ಗೆ ಬಿಜೆಪಿ ನಡೆಸಿದ ಹೋರಾಟಕ್ಕೆ ಆಯೋಗ ಮಣಿದಿದೆ. ಆಯೋಗ ಸೃಷ್ಟಿಸಿದ ಇಂಥ 46 ಹೊಸ ಜಾತಿಗಳನ್ನು ಸಮೀಕ್ಷಾ ವ್ಯಾಪ್ತಿಯಿಂದ ಹೊರಗಿಡಲೇಬೇಕು’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್‌ ಕುಮಾರ್ ಒತ್ತಾಯಿಸಿದ್ದಾರೆ. ಈ ಬಗ್ಗೆ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು ‘ಕೇವಲ 33 ಜಾತಿಗಳನ್ನು ಮಾತ್ರ ಕೈ ಬಿಟ್ಟರೆ ಸಾಲದು. ಆಯೋಗ ಈ ಬಗ್ಗೆ ಮರುಚಿಂತನೆ ನಡೆಸಿ ಸಮೀಕ್ಷೆ ಮುಂದೂಡಲಿ. ಆಯೋಗ ನಡೆಸಿದ್ದ ಈ ಪ್ರಯತ್ನ ಮೀಸಲು ವ್ಯವಸ್ಥೆಯನ್ನು ಕೆಡಿಸುವುದಷ್ಟೇ ಅಲ್ಲ ಮತಾಂತರಕ್ಕೆ ನೀಡುವ ಬಹಿರಂಗ ಪ್ರೇರಣೆ ಎಂಬ ನಮ್ಮ ನಿಲುವು ಅಚಲವಾಗಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.