ADVERTISEMENT

ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣ– ₹ 15 ಕೋಟಿ ಬೇಡಿಕೆ: ಮುನಿರತ್ನ

ರೋಗಬಾಧಿತ ಅಡಿಕೆ ಮರಗಳ ಸೋಗೆ ಕತ್ತರಿಸಲು ಸರ್ಕಾರ ನೆರವು– ಮುನಿರತ್ನ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2022, 9:44 IST
Last Updated 12 ಡಿಸೆಂಬರ್ 2022, 9:44 IST
ಎನ್‌.ಮುನಿರತ್ನ
ಎನ್‌.ಮುನಿರತ್ನ   

ಮಂಗಳೂರು: ‘ರಾಜ್ಯದ ಏಳು ಜಿಲ್ಲೆಗಳಲ್ಲಿ ಅಡಿಕೆ ಮರಗಳಲ್ಲಿ ಎಲೆಚುಕ್ಕಿ ರೋಗ ವ್ಯಾಪಕವಾಗಿ ಕಾಣಿಸಿಕೊಂಡಿದೆ. ಇದರ ನಿಯಂತ್ರಣಕ್ಕೆ ಅಡಿಕೆ ಮರಗಳ ಒಣಗಿದ ಸೋಗೆಗಳನ್ನು ಸಮಗ್ರವಾಗಿ ಕತ್ತರಿಸಿ ನಾಶಪಡಿಸಿ, ರಾಸಾಯನಿಕ ಸಿಂಪಡಿಸಬೇಕಾಗಿದೆ. ಅಡಿಕೆ ಬೆಳೆಗಾರರಿಗೆ ಉಚಿತವಾಗಿ ಏಣಿ, ದೋಟಿ ವಿತರಿಸಲು ಹಾಗೂ ರಾಸಾಯನಿಕ ಸಿಂಪಡಿಸಲು ₹ 15 ಕೋಟಿ ಒದಗಿಸುವಂತೆ ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದು ತೋಟಗಾರಿಕೆ ಸಚಿವ ಎನ್‌.ಮುನಿರತ್ನ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ರೋಗಪೀಡಿತ ತೋಟಗಳಿಗೆ ಭೇಟಿ ನೀಡಿರುವ ಸಚಿವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಎಲೆಚುಕ್ಕಿ ರೋಗವು ಕೊಲೆಟೋಟ್ರೈಕಂ ಗ್ಲಿಯೋಸ್ಪೊಯಿರೈಡಿಸ್‌ ಶಿಲೀಂಧ್ರದಿಂದ ಬರುತ್ತದೆ. ರೋಗಬಾಧಿತ ಸೋಗೆಗಳ (ಎಲೆ) ಮೇಲ್ಭಾಗದಲ್ಲಿ ಹಳದಿ ಮತ್ತು ಕಪ್ಪು ಚುಕ್ಕೆಗಳು ಕಾಣಿಸುತ್ತವೆ. ರೋಗಪೀಡಿತ ಸೋಗೆಗಳನ್ನು ಸಮಗ್ರವಾಗಿ ಕತ್ತರಿಸಿ ತೆಗೆದು ಬೆಂಕಿಯಲ್ಲಿ ಸುಟ್ಟು ನಾಶಪಡಿಸಿ ರೋಗ ನಿಯಂತ್ರಿಸಬಹುದು ಎಂದುರೈತರೊಬ್ಬರು ಅನುಭವ ಆಧರಿತ ಸಲಹೆ ನೀಡಿದ್ದಾರೆ. ಇದು ವಿಜ್ಞಾನಿಗಳ ಸಲಹೆಯಲ್ಲ. ರೋಗ ನಿಯಂತ್ರಣಕ್ಕೆ ಇದು ನೆರವಾಗಬಹುದು ಎಂದು ಮನದಟ್ಟಾಗಿದ್ದರಿಂದ ಇದನ್ನು ರಾಜ್ಯದಾದ್ಯಂತ ಜಾರಿಗಳಿಸಲಿದ್ದೇವೆ’ ಎಂದರು.

ADVERTISEMENT

‘ರಾಜ್ಯದಲ್ಲಿ ಒಟ್ಟು 42,504 ಹೆಕ್ಟೇರ್‌ ಪ್ರದೇಶದ ಅಡಿಕೆ ಬೆಳೆ ಎಲೆ ಚುಕ್ಕಿ ರೋಗಬಾಧೆಯನ್ನು ಎದುರಿಸುತ್ತಿದೆ. ಪ್ರತಿ ಗ್ರಾಮದಲ್ಲಿ ಯಾವ ರೈತರು ಎಷ್ಟು ಜಾಗದಲ್ಲಿ ಅಡಿಕೆ ಬೆಳೆಯುತ್ತಾರೆ. ಅವರಿಗೆ ಪೂರೈಸಲು ಎಷ್ಟು ಪ್ರಮಾಣದಲ್ಲಿ ರಾಸಾಯನಿಕ ಬೇಕಾಗುತ್ತದೆ ಎಂಬ ಸಮಗ್ರ ಮಾಹಿತಿ ಕಲೆ ಹಾಕಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಷ್ಟೂ ರೈತರಿಗೆ ದೋಟಿ, ಏಣಿಯನ್ನು ಉಚಿತವಾಗಿ ಒದಗಿಸುತ್ತೇವೆ. ರಾಸಾಯನಿಕ ಸಿಂಪಡಣೆಗೆ ಇಲಾಖೆಯೇ ಏಜೆನ್ಸಿಯನ್ನು ನೇಮಿಸಲಿದೆ. ರೈತರು ತಮ್ಮ ತೋಟಗಳಿಗೆ ಅವರಿಂದಲೇ ಔಷಧಿ ಸಿಂಪಡಿಸಬೇಕು’ ಎಂದು ತಿಳಿಸಿದರು.

‘ರೋಗ ನಿಯಂತ್ರಣಕ್ಕೆ ಶಾಶ್ವತವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಜ್ಞಾನಿಗಳಿಂದಲೂ ಸಲಹೆ ಕೇಳಿದ್ದೇವೆ. ನಾನು ಅಧಿಕಾರಿಗಳ ಜೊತೆ ಇಸ್ರೇಲ್‌ ಪ್ರವಾಸವನ್ನುಮುಂದಿನ ತಿಂಗಳು ಕೈಗೊಳ್ಳಲಿದ್ದೇನೆ. ಈ ರೋಗಕ್ಕೆ ಸಂಬಂಧಿಸಿದ ವಿಡಿಯೊಗಳನ್ನು ಅಲ್ಲಿನ ವಿಜ್ಞಾನಿಗಳಿಗೆ ತೋರಿಸಿ ಅವರಿಂದಲೂ ಸಲಹೆ ಪಡೆದು ಅನುಷ್ಠಾನಗೊಳಿಸುತ್ತೇವೆ’ ಎಂದರು.

ಬೆಳ್ತಂಗಡಿಯಲ್ಲಿ ಅಧಿಕ: ರಾಜ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರದೇಶ ರೋಗ ಬಾಧೆಗೆ ಒಳಗಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳ್ತಂಗಡಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಪ್ರದೇಶದಲ್ಲಿ (700 ಹೆಕ್ಟೇರ್‌) ಎಲೆಚುಕ್ಕಿ ರೋಗ ಬಾಧೆ ಕಾಣಿಸಿಕೊಂಡಿದೆ. ಸುಳ್ಯ ತಾಲ್ಲೂಕಿನಲ್ಲಿ 200 ಹೆಕ್ಟೇರ್‌, ಪುತ್ತೂರು ತಾಲ್ಲೂಕಿನಲ್ಲಿ 100 ಹೆಕ್ಟೇರ್‌, ಬಂಟ್ವಾಳದಲ್ಲಿ 90 ಹೆಕ್ಟೇರ್‌ ಹಾಗೂ ಮಂಗಳೂರು ತಾಲ್ಲೂಕಿನಲ್ಲಿ 10 ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಮರಗಳು ಈ ರೋಗಬಾಧೆಗೆ ಒಳಗಾಗಿವೆ ಎಂದು ಮುನಿರತ್ನ ಮಾಹಿತಿ ನೀಡಿದರು.

–0–

ಕೋಟ್‌...

ಮನುಷ್ಯನಿಗೆ ಗ್ಯಾಂಗ್ರೀನ್‌ ಆದಾಗ ಆ ಭಾಗವನ್ನೇ ಕತ್ತರಿಸಲಾಗುತ್ತದೆ. ಅದೇ ರೀತಿ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ರೋಗಪೀಡಿತ ಸೋಗೆಗಳನ್ನು ಕತ್ತರಿಸಿ ನಾಶಪಡಿಸಬೇಕಿದೆ
ಎನ್‌.ಮುನಿರತ್ನ, ತೋಟಗಾರಿಕಾ ಸಚಿವ

–0–

ಅಂಕಿ ಅಂಶ

6.11 ಲಕ್ಷ ಹೆಕ್ಟೇರ್‌

ರಾಜ್ಯದಲ್ಲಿರುವ ಅಡಿಕೆ ಬೆಳೆಯುವ ಪ್ರದೇಶ

ಶೇ 6.96

ಎಲೆಚುಕ್ಕಿ ರೋಗ ಕಾಣಿಸಿಕೊಂಡ ಅಡಿಕೆ ತೋಟಗಳ ಪ್ರಮಾಣ

8.40 ಲಕ್ಷ ಟನ್‌

ರಾಜ್ಯದಲ್ಲಿ ಉತ್ಪಾದನೆಯಾಗುವ ಅಡಿಕೆಯ ವಾರ್ಷಿಕ ಪ್ರಮಾಣ

ಎಲೆಚುಕ್ಕಿ ರೋಗ: ಎಲ್ಲೆಲ್ಲಿ ಎಷ್ಟೆಷ್ಟು?


ಜಿಲ್ಲೆ; ವಿಸ್ತೀರ್ಣ (ಹಕ್ಟೇರ್‌ಗಳಲ್ಲಿ)

ಚಿಕ್ಕಮಗಳೂರು:20,000

ಶಿವಮೊಗ್ಗ; 12,500

ಹಾಸನ; 4,200

ಉತ್ತರ ಕನ್ನಡ; 4,044

ದಕ್ಷಿಣ ಕನ್ನಡ; 1,100

ಕೊಡಗು; 500

ಉಡುಪಿ; 160

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.