ADVERTISEMENT

ಅಡಿಕೆ ಅಕ್ರಮ ದಾಸ್ತಾನು ಪತ್ತೆ

₹ 72 ಲಕ್ಷ ದಂಡ ವಸೂಲು ಮಾಡಿದ ವಾಣಿಜ್ಯ ತೆರಿಗೆ ಇಲಾಖೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2018, 18:59 IST
Last Updated 21 ಡಿಸೆಂಬರ್ 2018, 18:59 IST
ತುಮಕೂರಿನ ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನಿಟ್ಟಿರುವ ಅಡಿಕೆ ತುಂಬಿದ ಚೀಲಗಳು 
ತುಮಕೂರಿನ ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನಿಟ್ಟಿರುವ ಅಡಿಕೆ ತುಂಬಿದ ಚೀಲಗಳು    

ಬೆಂಗಳೂರು: ತುಮಕೂರು ಹೊರವಲಯದ ಅಂತರಸನಹಳ್ಳಿಯ ಎರಡು ಗೋದಾಮುಗಳ ಮೇಲೆ ದಾಳಿ ಮಾಡಿರುವ ವಾಣಿಜ್ಯ ತೆರಿಗೆ ಅಧಿಕಾರಿಗಳು, ಅಕ್ರಮವಾಗಿ ದಾಸ್ತಾನಿಟ್ಟಿದ್ದ 4,670 ಕ್ವಿಂಟಲ್‌ ಅಡಿಕೆಯನ್ನು ಪತ್ತೆ ಹಚ್ಚಿ ತೆರಿಗೆ ಮತ್ತು ದಂಡ ಸೇರಿ ₹ 72 ಲಕ್ಷ ವಸೂಲು ಮಾಡಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಕಮಿಷನರ್‌ ನಿತೇಶ್‌ ಪಾಟೀಲ್‌ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದಾಗ ಗೋದಾಮಿನ ಮಾಲೀಕರು ಹಾಗೂ ಕೆಲಸಗಾರರು ಪ್ರತಿರೋಧ ತೋರಿದರು. ಇದು ಅಕ್ಕಿ ಗಿರಣಿಯಾಗಿದ್ದು ಭತ್ತ ದಾಸ್ತಾನು ಮಾಡಲಾಗಿದೆ ಎಂದು ದಿಕ್ಕು ತಪ್ಪಿಸಲು ಪ್ರಯತ್ನಿಸಿದರು ಎನ್ನಲಾಗಿದೆ.

ಆದರೆ, ಅಧಿಕೃತ ಅನುಮತಿಯೊಂದಿಗೆ ಬಂದಿದ್ದ ಅಧಿಕಾರಿಗಳ ತಂಡ ಬಲವಂತವಾಗಿ ಗೋದಾಮುಗಳಿಗೆ ಪ್ರವೇಶಿಸಿದಾಗ ₹ 12 ಕೋಟಿ ಮೌಲ್ಯದ 4,670 ಕ್ವಿಂಟಲ್‌ ಅಡಿಕೆ ಪತ್ತೆಯಾಯಿತು. ಅಗತ್ಯ ದಾಖಲೆಗಳಿಲ್ಲದೆ ತೆರಿಗೆ ತಪ್ಪಿಸಿ ಅಕ್ರಮವಾಗಿ ದಾಸ್ತಾನು ಇಡಲಾಗಿತ್ತು.

ADVERTISEMENT

ಪ್ರಕರಣ ದಾಖಲಿಸಿಕೊಂಡ ವಾಣಿಜ್ಯ ತೆರಿಗೆ ಅಧಿಕಾರಿಗಳು ಒಂದು ಗೋದಾಮು ಜಪ್ತಿ ಮಾಡಿದ್ದಾರೆ. ಭಾಗಶಃ ದಂಡ ಮತ್ತು ತೆರಿಗೆ ಹಣ ವಸೂಲು ಮಾಡಿದ್ದಾರೆ. ದಂಡ ಹಾಗೂ ತೆರಿಗೆ ಒಟ್ಟು ₹ 1.2 ಕೋಟಿ ಆಗಲಿದೆ. ತನಿಖೆ ಮುಂದುವರಿದಿರುವುದರಿಂದ ಅಡಿಕೆ ಮಾಲೀಕರ ಹೆಸರನ್ನು ಗೌಪ್ಯವಾಗಿ ಇಡಲಾಗಿದೆ.

ತುಮಕೂರು, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಅಡಿಕೆಯನ್ನು ಅಧಿಕ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ತೆರಿಗೆ ತಪ್ಪಿಸಿ ಖರೀದಿ, ಸಾಗಣೆ ಹಾಗೂ ದಾಸ್ತಾನು ಮಾಡಲಾಗುತ್ತಿದೆ. ಅಕ್ರಮ ದಾಸ್ತಾನು ವಿರುದ್ಧ ಕಾರ್ಯಾಚರಣೆ ಮುಂದುವರಿದಿದೆ ಎಂದು ನಿತೇಶ್‌ ಪಾಟೀಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.