ADVERTISEMENT

ಕೀಟಬಾಧೆಗೆ ಅಡಿಕೆ ಮರ ನಾಶ

ಗರಿಗಳಲ್ಲಿನ ಎಲೆಗಳ ತುದಿಯಿಂದಲೂ ರಸ ಹೀರುತ್ತಿರುವ ಕೀಟ

ಕೆ.ಎಸ್.ಪ್ರಣವಕುಮಾರ್
Published 26 ನವೆಂಬರ್ 2019, 19:07 IST
Last Updated 26 ನವೆಂಬರ್ 2019, 19:07 IST
ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ಕೀಟಬಾಧೆಗೆ ನಾಶವಾಗುತ್ತಿರುವ ಅಡಿಕೆ ಮರಗಳು
ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ಕೀಟಬಾಧೆಗೆ ನಾಶವಾಗುತ್ತಿರುವ ಅಡಿಕೆ ಮರಗಳು   

ಚಿತ್ರದುರ್ಗ: ಉತ್ತಮವಾಗಿ ಆರೈಕೆ ಮಾಡಿ ಬೆಳೆಸುತ್ತಿರುವ ಅಡಿಕೆ ಗಿಡಗಳು ಕಪ್ಪು ಹುಳುಗಳ ಬಾಧೆಯಿಂದ ಕೇವಲ 15 ದಿನಗಳೊಳಗೆ ಒಣಗಲು ಆರಂಭಿಸಿದ್ದು, ಅಡಿಕೆ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ಕಪ್ಪು ಬಣ್ಣದ ಈ ಕೀಟವು ಹೇನು ಮಾದರಿಯಲ್ಲಿದೆ. ಅಡಿಕೆ ಮರಗಳನ್ನು ಹೊಕ್ಕು ನಾಶಪಡಿಸಲು ಮುಂದಾ
ಗುತ್ತಿವೆ. ಮರಗಳಲ್ಲಿ ಗುಂಪು ಗುಂಪಾಗಿ ಸೇರುವ ಸಾವಿರಾರು ಕೀಟಗಳು ಗರಿಗಳಲ್ಲಿನ ಎಲೆಗಳ ತುದಿಯಿಂದಲೂ ರಸವನ್ನು ಹೀರುತ್ತಿವೆ. ಕ್ರಮೇಣ ಗರಿಗಳು ಹಳದಿ ಬಣ್ಣಕ್ಕೆ ತಿರುಗಿ, ಕೆಳಭಾಗದಿಂದ ಮೇಲ್ಭಾಗದವರೆಗೂ ಹಂತ ಹಂತವಾಗಿ ಒಣಗುತ್ತಿವೆ. ಇದರಿಂದಾಗಿ ಗರಿಗಳು ಸುಟ್ಟಂತೆ ಕಾಣುತ್ತಿವೆ.

ಮೂರ್ನಾಲ್ಕು ವರ್ಷಕ್ಕೂ ಮೇಲಿನ ಅಡಿಕೆ ಗಿಡಗಳು ಮೂರು ತಿಂಗಳಿನಿಂದ ಈ ಕೀಟಬಾಧೆಗೆ ತುತ್ತಾಗುತ್ತಿವೆ. ಒಂದರ ಪಕ್ಕ ಮತ್ತೊಂದರಂತೆ ಗಿಡಗಳು ನಾಶವಾಗುತ್ತಿವೆ. ಕೆಲವರ ತೋಟಗಳಲ್ಲಿ ಬೆರಳೆಣಿಕೆಯ ಗಿಡಗಳು ಒಣಗುತ್ತಿದ್ದರೆ, ಮತ್ತೆ ಕೆಲವರ ತೋಟಗಳಲ್ಲಿ ನೂರಾರು ಗಿಡಗಳು ಒಣಗಲು ಆರಂಭಿಸಿವೆ.

ADVERTISEMENT

ಭರಮಸಾಗರ, ಚಿಕ್ಕಜಾಜೂರು, ಹಿರಿಯೂರು ಭಾಗದ ರೈತರ ತೋಟಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬಂದಿದ್ದು, ಸ್ಥಳಕ್ಕೆ ಬಂದು ಪರಿಶೀಲಿಸಿದ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೂ ಕೀಟದ ಹೆಸರು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಈ ಸಮಸ್ಯೆ ಉಲ್ಬಣಿಸುತ್ತಿದೆ. ಸಮಸ್ಯೆ ಉಲ್ಬಣದಿಂದಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೀಟಗಳನ್ನು ಸಂಗ್ರಹಿಸಿ, ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರಕ್ಕೆ ನೀಡಿದ್ದಾರೆ. ವಿಜ್ಞಾನಿಗಳು ಕೀಟದ ಹೆಸರಿನ ಪತ್ತೆಗೆ ಮುಂದಾಗಿ
ದ್ದಾರೆ. ಅದರ ಮಾದರಿಯನ್ನು ಬೆಂಗಳೂರಿನ ರಾಜ್ಯ ಕೃಷಿ ವಿಜ್ಞಾನ ಕೇಂದ್ರಕ್ಕೂ ಕಳುಹಿಸಿಕೊಟ್ಟಿದ್ದಾರೆ.

ಎರಡು–ಮೂರು ವರ್ಷಗಳಿಂದಲೂ ಅಡಿಕೆ ಗಿಡ-ಮರಗಳು ಕೆಂಪು ತಿಗಣೆ ಕೀಟಬಾಧೆಗೆ ತುತ್ತಾಗಿದ್ದವು. ಫೆಬ್ರುವರಿಯಿಂದ ಮೇ ತಿಂಗಳವರೆಗಿನ ಬಿಸಿಲಿನ ತಾಪಮಾನದಲ್ಲಿ ಹೆಚ್ಚಾಗಿ ಈ ಕೀಟಗಳು ಕಾಣಿಸಿಕೊಂಡಿದ್ದವು. ಆಗ ರೈತರು ಮರಗಳನ್ನು ಉಳಿಸಿಕೊಳ್ಳಲು ಪೊಟಾಶಿಯಂ, ಕೀಟನಾಶಕ ಬಳಸಿ ನಿಯಂತ್ರಣಕ್ಕೂ ಮುಂದಾಗಿದ್ದರು.

ಕಪ್ಪುಬಣ್ಣದ ಚಿಕ್ಕ ಕೀಟಗಳು ಅಡಿಕೆ ಗಿಡಗಳನ್ನು ಆವರಿಸಿಕೊಳ್ಳುತ್ತಿವೆ. ಅವು ರಸ ಹೀರಿದ ನಂತರ ಗರಿಗಳು ಕೆಂಪು, ಹಳದಿ ಬಣ್ಣಕ್ಕೆ ತಿರುಗಿ ಒಣಗುತ್ತಿವೆ

-ರಾಘವೇಂದ್ರ ಅಡಿಕೆ ಬೆಳೆಗಾರ, ಚಿಕ್ಕಗೊಂಡನಹಳ್ಳಿ

ಔಷಧೋಪಚಾರ

‘ಮಳೆಗಾಲದಲ್ಲಿ ಅಡಿಕೆ ಮರಗಳಿಗೆ ಕೀಟಗಳ ಸಮಸ್ಯೆ ಹೆಚ್ಚಾಗಿ ಕಂಡು ಬರುವುದಿಲ್ಲ. ಒಂದು ವೇಳೆ ಕೀಟಬಾಧೆ ಕಂಡು ಬಂದಲ್ಲಿ ಇಮಿಡಾ ಕ್ಲೊಪ್ರಿಡ್ (Imidacloprid) ಔಷಧವನ್ನು 0.5 ಎಂಎಲ್‌ನಂತೆ ಪ್ರತಿ ಲೀಟರ್ ನೀರಿಗೆ ಬೆರೆಸುವ ಮೂಲಕ ಗಿಡಗಳಿಗೆ, ಎಲೆಗಳಿಗೆ ಸಿಂಪಡಿಸಬೇಕು. ಪೊಟಾಶಿಯಂ ಕೂಡ ಅಗತ್ಯಕ್ಕೆ ತಕ್ಕಂತೆ ಬಳಸಿದರೆ ಗಿಡಗಳನ್ನು ರಕ್ಷಿಸಿಕೊಳ್ಳಬಹುದು. ಕೀಟಬಾಧೆಗೆ ಔಷಧೋಪಚಾರವೇ ಮದ್ದು’ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ದೇವರಾಜ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.