ಸುಪ್ರೀಂ ಕೋರ್ಟ್
ನವದೆಹಲಿ: ಸಂತ್ರಸ್ತ ಭೂಮಾಲೀಕರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡದೆ ಅವರ ಭೂಮಿಯನ್ನು ಅರ್ಕಾವತಿ ಬಡಾವಣೆಗಾಗಿ ಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಅನುಮತಿ ನೀಡಿದ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪಿಗೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.
ಈ ಪ್ರಕರಣದಲ್ಲಿ ಸಹಜ ನ್ಯಾಯದ ತತ್ವದ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ. ವಿನೋದ್ ಚಂದ್ರನ್ ಅವರ ಪೀಠವು, ಜಮೀನು ಸ್ವಾಧೀನಪಡಿಸಿಕೊಳ್ಳಲು ಪ್ರಾಧಿಕಾರಕ್ಕೆ ಅವಕಾಶ ನೀಡಿದ ವಿಭಾಗೀಯ ಪೀಠದ 2019ರ ಸೆಪ್ಟೆಂಬರ್ 27ರ ಆದೇಶವನ್ನು ರದ್ದುಗೊಳಿಸಿತು.
ಮೇಲ್ಮನವಿದಾರರ ಜಮೀನು ಹೊರಗಿಟ್ಟಿರುವುದರಿಂದ ಮತ್ತು 2003ರ ಪ್ರಾಥಮಿಕ ಅಧಿಸೂಚನೆಗೆ ಮೊದಲೇ ಆ ಜಾಗದಲ್ಲಿ ಕಟ್ಟಡಗಳು ಇದ್ದುದರಿಂದ, ಮೇಲ್ಮನವಿದಾರರ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಹೊರಗಿಡಬಹುದು ಎಂದು ಏಕ ಸದಸ್ಯ ಪೀಠದ ನ್ಯಾಯಮೂರ್ತಿ ತೀರ್ಪು ನೀಡಿದ್ದಾರೆ ಎಂಬುದನ್ನು ನ್ಯಾಯಪೀಠ ಗಮನಿಸಿತು.
ಸಂತ್ರಸ್ತ ಭೂಮಾಲೀಕ ಡಿ.ಎಂ. ಜಗದೀಶ್ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಪೀಠ, ‘ಪ್ರಾಧಿಕಾರ ಸಲ್ಲಿಸಿದ ಪ್ರಮಾಣಪತ್ರವನ್ನಷ್ಟೇ ಪರಿಗಣಿಸಿ ಅದೇ ದಿನ ತೀರ್ಪು ನೀಡಿದ ವಿಭಾಗೀಯ ಪೀಠದ ನಡೆ ಸರಿಯಿಲ್ಲ. ಪ್ರಾಧಿಕಾರದ ಪ್ರಮಾಣಪತ್ರಕ್ಕೆ ಆಕ್ಷೇಪಣೆ ಸಲ್ಲಿಸಲು ಮೇಲ್ಮನವಿದಾರರಿಗೆ ಅವಕಾಶ ನೀಡದಿರುವುದು ಸಹಜ ನ್ಯಾಯದ ತತ್ವಗಳ ಉಲ್ಲಂಘನೆ’ ಎಂದು ಹೇಳಿದೆ. ಏಕ ಸದಸ್ಯ ಪೀಠ ನೀಡಿರುವ ಸಮಂಜಸ ತೀರ್ಪನ್ನು ವಿಭಾಗೀಯ ಪೀಠವು ಪ್ರಾಧಿಕಾರದ ಪ್ರಮಾಣಪತ್ರದ ಆಧಾರದಲ್ಲಿ ರದ್ದುಗೊಳಿಸಿದೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಕಾನೂನಿನ ಪ್ರಕಾರ ಈ ಪ್ರಕರಣವನ್ನು ಹೊಸದಾಗಿ ಪರಿಗಣಿಸಬೇಕು ಎಂದು ವಿಭಾಗೀಯ ಪೀಠಕ್ಕೆ ಸೂಚಿಸಿದೆ.
ಪ್ರಕರಣವೇನು:
ಅರ್ಕಾವತಿ ಬಡಾವಣೆ ನಿರ್ಮಾಣಕ್ಕಾಗಿ 380 ಎಕರೆ 4 ಗುಂಟೆ ಸ್ವಾಧೀನಕ್ಕೆ 2003ರ ಫೆಬ್ರುವರಿ 3ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. 2004ರ ಫೆಬ್ರುವರಿ 23ರಂದು ಅಂತಿಮ ಅಧಿಸೂಚನೆ ಹೊರಡಿಸಿ, 380 ಎಕರೆಯಲ್ಲಿ 154 ಎಕರೆ 26 ಗುಂಟೆಯನ್ನು ಭೂಸ್ವಾಧೀನದಿಂದ ಕೈಬಿಡಲಾಗಿತ್ತು. 2014ರ ಜೂನ್ 18ರಂದು ಪರಿಷ್ಕೃತ ಅಧಿಸೂಚನೆ ಹೊರಡಿಸಿ, 66 ಎಕರೆ 3 ಗುಂಟೆಯನ್ನು ಸ್ವಾಧೀನದಿಂದ ಹೊರಗಿಡಲಾಗಿತ್ತು.
ಮೇಲ್ಮನವಿದಾರರ ತಂದೆಯವರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಭೂಸ್ವಾಧೀನವನ್ನು ಏಕಸದಸ್ಯ ಪೀಠ ರದ್ದುಗೊಳಿಸಿತ್ತು. ಪ್ರಾಧಿಕಾರವು ವಿಭಾಗೀಯ ಪೀಠದ ಮೊರೆ ಹೋಗಿತ್ತು. ಭೂಸ್ವಾಧೀನ ಪ್ರಕ್ರಿಯೆಯನ್ನು ವಿಭಾಗೀಯ ಪೀಠ ಎತ್ತಿ ಹಿಡಿದಿತ್ತು. ಆದರೆ, ಭೂಮಾಲೀಕರು ತಮ್ಮ ಭೂಮಿಯನ್ನು ಭೂಸ್ವಾಧೀನದಿಂದ ಹೊರಗಿಡಬೇಕೆಂದು ಬಯಸಿದರೆ 30 ದಿನಗಳಲ್ಲಿ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡುವುದು ಸೇರಿದಂತೆ ಹಲವಾರು ನಿರ್ದೇಶನಗಳನ್ನು ನೀಡಿತ್ತು.
ತನ್ನ ಜಮೀನಿಗೆ ಹೊಂದಿಕೊಂಡಿರುವ ಜಮೀನನ್ನು ಭೂಸ್ವಾಧೀನದಿಂದ ಕೈಬಿಡಲಾಗಿದೆ. ಹೀಗಾಗಿ, ತಾವು ಸಹ ಅದರ ಪ್ರಯೋಜನ ಪಡೆಯಲು ಅರ್ಹರು ಎಂದು ಮೇಲ್ಮನವಿದಾರರು ಮನವಿ ಸಲ್ಲಿಸಿದ್ದರು. ಪ್ರಾಥಮಿಕ ಅಧಿಸೂಚನೆಗೂ ಮೊದಲು ಪ್ರಶ್ನಾರ್ಹ ಭೂಮಿಯಲ್ಲಿ ಕೆಲವು ರಚನೆಗಳು ಇದ್ದವು ಎಂದು ಅವರು ಪ್ರತಿಪಾದಿಸಿದ್ದರು.
ಈ ಮನವಿಯನ್ನು ಪ್ರಾಧಿಕಾರ ತಿರಸ್ಕರಿಸಿತ್ತು. ಇದರಿಂದಾಗಿ, ಅವರು ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ಹೈಕೋರ್ಟ್ ಅಂಗೀಕರಿಸಿ, ಭೂಸ್ವಾಧೀನ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅವರ ಮನವಿಯನ್ನು ಪರಿಗಣಿಸುವಂತೆ ನಿರ್ದೇಶನ ನೀಡಿತ್ತು. ಅಧಿಕಾರಿಯವರು ಸ್ಥಳ ಪರಿಶೀಲನೆ ನಡೆಸಿದ ಬಳಿಕವೂ ಯಾವುದೇ ಆದೇಶ ನೀಡದ ಕಾರಣ, ಮೇಲ್ಮನವಿದಾರರು ಮತ್ತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಮೇಲ್ಮನವಿದಾರರು ಪರಿಹಾರ ಪಡೆಯಲು ಅರ್ಹರು ಎಂದು ಹೈಕೋರ್ಟ್‌ನ ಏಕಸದಸ್ಯ ಪೀಠ ತೀರ್ಪು ನೀಡಿತ್ತು. ಆದಾಗ್ಯೂ, ವಿಭಾಗೀಯ ಪೀಠವು ಬಿಡಿಎ ಸಲ್ಲಿಸಿದ ಮೇಲ್ಮನವಿಯನ್ನು ಅಂಗೀಕರಿಸಿತ್ತು. ಬಳಿಕ ಸಂತ್ರಸ್ತ ಭೂಮಾಲೀಕರು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.