ADVERTISEMENT

ಶಂಕಿತ ಉಗ್ರರ ಬಂಧನ: ಎನ್‌ಐಎನಿಂದ ತನಿಖೆ ಚುರುಕು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 19:23 IST
Last Updated 7 ಸೆಪ್ಟೆಂಬರ್ 2022, 19:23 IST
   

ಬೆಂಗಳೂರು: ಶಂಕಿತ ಉಗ್ರರಾದ ಅಖ್ತರ್‌ ಹುಸೇನ್‌ ಲಷ್ಕರ್‌ ಹಾಗೂ ಜುಬಾನ್‌ ಪ್ರಕರಣವನ್ನು ಅಧಿಕೃತವಾಗಿ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವರ್ಗಾವಣೆ ಮಾಡಲಾಗಿದ್ದು, ಪ್ರಕರಣದ ತನಿಖೆ ಚುರುಕುಗೊಂಡಿದೆ.

‘ಅಲ್‌ಕೈದಾ’ ಉಗ್ರ ಸಂಘಟನೆ ಸೇರಲು ಮುಂದಾಗಿದ್ದ ಇಬ್ಬರು ಶಂಕಿತರನ್ನು ಕೆಲವು ದಿನಗಳ ಹಿಂದೆ ಸಿಸಿಬಿ ಪೊಲೀಸರು ಬಂಧಿಸಿದ್ದರು.

ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ) ಅಡಿ ದೆಹಲಿ ಎನ್‌ಐಎ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಬಂಧನದ ಬಳಿಕ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದ ಸಿಸಿಬಿ ಪೊಲೀಸರೂ ವಿಚಾರಣೆ ನಡೆಸಿದ್ದರು.

‘ಶಂಕಿತರೊಂದಿಗೆ ಯಾರೆಲ್ಲಾ ಸಂಪರ್ಕದಲ್ಲಿದ್ದರು ಹಾಗೂ ಅವರ ಉದ್ದೇಶ ಪತ್ತೆಗೆ ಎನ್‌ಐಎ ತನಿಖೆ ಮುಂದುವರಿಯಲಿದೆ’ ಎಂದು ಮೂಲಗಳು ತಿಳಿಸಿವೆ.

‘ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಅಖ್ತರ್‌ ಹುಸೇನ್‌ ಲಷ್ಕರ್‌, ತಿಲಕನಗರದ ಬಿಟಿಬಿ ಲೇಔಟ್‌ನ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿದ್ದ ಈತ, ಉಗ್ರ ಚಟುವಟಿಕೆ ಸಂಬಂಧಿಸಿದ ಪೋಸ್ಟ್‌ಗಳನ್ನು ಹಾಕುತ್ತಿದ್ದ. ಯುವಕರನ್ನು ಅಫ್ಗಾನಿಸ್ತಾನಕ್ಕೆ ಕಳುಹಿಸಿ ಭಯೋತ್ಪಾದನೆ ತರಬೇತಿ ನೀಡಲು ಸಂಚು ರೂಪಿಸಿದ್ದ’ ಎಂಬುದು ಸಿಸಿಬಿ ತನಿಖೆ ವೇಳೆ ಪತ್ತೆಯಾಗಿತ್ತು.

‘ಫುಡ್ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ ಅಖ್ತರ್‌ ಹುಸೇನ್‌ ಲಷ್ಕರ್‌ ಸಹ ತಮಿಳುನಾಡಿನ ಜುಬಾನಾ ಮೂಲಕ ಕಾಶ್ಮೀರದ ಮೂಲಕ ಅಫ್ಗಾನಿಸ್ತಾನಕ್ಕೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದ’ ಎಂದು ಮೂಲಗಳು ತಿಳಿಸಿವೆ.

‘ಜಮ್ಮು- ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ್ದರಿಂದ ಆಕ್ರೋಶಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ದೇಶ ವಿರೋಧಿ ಪೋಸ್ಟ್ ಹಾಕುತ್ತಿದ್ದ. ಅದನ್ನು ಗಮನಿಸಿದ್ದ ಉಗ್ರ ಸಂಘಟನೆಯವರು ಅಖ್ತರ್‌ನನ್ನು ಸಂಪರ್ಕಿಸಿದ್ದರು’ ಎಂದು ತನಿಖೆಯ ವೇಳೆ ಗೊತ್ತಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.