ADVERTISEMENT

16ರಂದು ಸಚಿವರ ಸಭೆ ಕರೆದ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್‌

ಪಕ್ಷದ ಕಚೇರಿಯಲ್ಲಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 16:43 IST
Last Updated 12 ಜೂನ್ 2021, 16:43 IST
ಅರುಣ್ ಸಿಂಗ್‌
ಅರುಣ್ ಸಿಂಗ್‌   

ಬೆಂಗಳೂರು: ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು ಶಮನಕ್ಕಾಗಿ ಬೆಂಗಳೂರಿಗೆ ಬರುತ್ತಿರುವ ಪಕ್ಷದ ರಾಜ್ಯ ಉಸ್ತುವಾರಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ಇದೇ 16ರಂದು ಸಚಿವರ ಸಭೆ ಕರೆದಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿರುವ ಒಂದು ಗುಂಪು ನಿರಂತರವಾಗಿ ಬಿಜೆಪಿ ವರಿಷ್ಠರ ಮನವೊಲಿಕೆಗೆ ಪ್ರಯತ್ನಿಸುತ್ತಿದೆ. ಸಚಿವ ಸಿ.ಪಿ. ಯೋಗೇಶ್ವರ್‌ ಸೇರಿದಂತೆ ಹಲವರು ಮತ್ತೆ ಈ ಬೇಡಿಕೆಯನ್ನು ಪಕ್ಷದ ವರಿಷ್ಠರ ಮುಂದೆ ಇಟ್ಟಿದ್ದಾರೆ ಎಂದೂ ಹೇಳಲಾಗುತ್ತಿದೆ.

ಯಡಿಯೂರಪ್ಪ ಮತ್ತು ಅವರ ಮಗ ಬಿ.ವೈ. ವಿಜಯೇಂದ್ರ ನಡೆಯ ಬಗ್ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಕರಾರು ತೆಗೆಯುತ್ತಲೇ ಇದ್ದಾರೆ. ಶಾಸಕಾಂಗ ಪಕ್ಷದ ಸಭೆ ನಡೆಸಿ ಶಾಸಕರ ಅಭಿಪ್ರಾಯ ಆಲಿಸಬೇಕೆಂಬ ಬೇಡಿಕೆಯೂ ಪ್ರಬಲವಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ಅರುಣ್‌ ಸಿಂಗ್‌ ರಾಜ್ಯಕ್ಕೆ ಬರುತ್ತಿದ್ದಾರೆ.

ADVERTISEMENT

‘ಇದೇ 16ರಿಂದ ಮೂರು ದಿನಗಳ ಕಾಲ ಅರುಣ್‌ ಸಿಂಗ್‌ ರಾಜ್ಯದಲ್ಲಿ ಇರುತ್ತಾರೆ. ಮೊದಲ ದಿನವೇ ಸಚಿವರ ಸಭೆ ಕರೆದಿದ್ದಾರೆ. ಮಲ್ಲೇಶ್ವರದಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆಯಲಿರುವ ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ಎಲ್ಲ ಸಚಿವರಿಗೂ ಸೂಚಿಸಲಾಗಿದೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಅರುಣ್‌ ಸಿಂಗ್‌, ಸಚಿವರ ಜತೆ ಚರ್ಚಿಸಿ, ಅಭಿಪ್ರಾಯ ಸಂಗ್ರಹಿಸುವ ಸಾಧ್ಯತೆ ಇದೆ. ಕೋವಿಡ್‌ ನಿಯಂತ್ರಣ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಜಾರಿಗೊಳಿಸಿರುವ ಯೋಜನೆಗಳ ಕುರಿತು ಮಾಹಿತಿ ಸಂಗ್ರಹಿಸುವುದಕ್ಕೂ ಮುಂದಾಗಿದ್ದಾರೆ ಎಂದು ಗೊತ್ತಾಗಿದೆ.

ಶಾಸಕರ ಸಭೆಗೂ ಸಿದ್ಧತೆ: ಪಕ್ಷದಲ್ಲಿನ ಬೆಳವಣಿಗೆಗಳು, ರಾಜ್ಯ ಸರ್ಕಾರದಲ್ಲಿ ಅನುದಾನ ಹಂಚಿಕೆಯಲ್ಲಿನ ತಾರತಮ್ಯ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಲು ಶಾಸಕಾಂಗ ಪಕ್ಷದ ಸಭೆ ನಡೆಸಬೇಕೆಂಬ ಆಗ್ರಹ ಹಲವು ದಿನಗಳಿಂದಲೂ ಇದೆ. ವಿಧಾನಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಸಚೇತಕರಾಗಿರುವ ವಿ. ಸುನಿಲ್‌ ಕುಮಾರ್‌ ಪದೇ ಪದೇ ಈ ಬೇಡಿಕೆಯನ್ನು ಮಂಡಿಸುತ್ತಿದ್ದಾರೆ.

ಅರುಣ್‌ ಸಿಂಗ್‌ ಭೇಟಿಯ ಸಂದರ್ಭದಲ್ಲೇ ಶಾಸಕಾಂಗ ಪಕ್ಷದ ಸಭೆಯನ್ನೂ ನಡೆಸುವ ಸಾಧ್ಯತೆ ಇದೆ. ಅದು ಸಾಧ್ಯವಾಗದೇ ಇದ್ದರೆ ಪಕ್ಷದ ಕಚೇರಿಯಲ್ಲಿ ಎಲ್ಲ ಶಾಸಕರ ಸಭೆ ನಡೆಸಲು ಸಿದ್ಧತೆ ನಡೆದಿದೆ. ಸಚಿವರ ಜತೆಗಿನ ಸಭೆಯ ಬಳಿಕ ಅರುಣ್‌ ಸಿಂಗ್‌ ಈ ಕುರಿತು ನಿರ್ಧಾರಕ್ಕೆ ಬರಲಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.