ADVERTISEMENT

ಯಡಿಯೂರಪ್ಪ ನಾಯಕತ್ವಕ್ಕೇ ಬೆಂಬಲ: ಅರುಣ್‌ಸಿಂಗ್‌ ವರದಿ

ಬಹಿರಂಗ ಹೇಳಿಕೆ; ಶಿಸ್ತು ಕ್ರಮಕ್ಕೆ ಪ್ರಸ್ತಾಪ

ಸಿದ್ದಯ್ಯ ಹಿರೇಮಠ
Published 20 ಜೂನ್ 2021, 21:42 IST
Last Updated 20 ಜೂನ್ 2021, 21:42 IST
ಅರುಣ್ ಸಿಂಗ್
ಅರುಣ್ ಸಿಂಗ್   

ನವದೆಹಲಿ: ‘ಒಬ್ಬ ಸಚಿವ ಹಾಗೂ ಇಬ್ಬರು ಶಾಸಕರು ಮಾತ್ರ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವವನ್ನು ಬದಲಿಸುವಂತೆ ಆಗ್ರಹಿಸಿದ್ದಾರೆ. ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಯಕತ್ವದ ಬಗ್ಗೆ ಕಿಂಚಿತ್ತೂ ಅಸಮಾಧಾನ ವ್ಯಕ್ತಪಡಿಸಿಲ್ಲ’ - ಇದು, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಭಾನುವಾರ ಸಲ್ಲಿಸಿದ 80 ಪುಟಗಳ ವರದಿಯಲ್ಲಿರುವ ಪ್ರಮುಖ ಅಂಶವಾಗಿದೆ.

ಮುಖ್ಯಾಂಶಗಳು:

*ಮೂವರ ಹೊರತು ಮಿಕ್ಕವರ ವಿರೋಧವಿಲ್ಲ
*ಅಸಮಾಧಾನ ತಣಿಸುವಂತೆ ಕೆಲವರ ಮನವಿ
*ಆಂತರಿಕ ಕಚ್ಚಾಟದಿಂದ ಪಕ್ಷಕ್ಕೆ ಮುಜುಗರ

ADVERTISEMENT


ಬೆಂಗಳೂರಿನಲ್ಲಿ ಜೂನ್‌ 16ರಿಂದ ಸತತ ಮೂರು ದಿನ ರಾಜ್ಯದ ಬಿಜೆಪಿ ಶಾಸಕರು ಮತ್ತು ಸಚಿವರ ಅಭಿಪ್ರಾಯವನ್ನು ಅರುಣ್‌ ಸಿಂಗ್‌ ಸಂಗ್ರಹಿಸಿದ್ದರು.

ಆದರೆ, ಆಡಳಿತದಲ್ಲಿ ಯಡಿಯೂರಪ್ಪ ಅವರ ಪುತ್ರ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹಸ್ತಕ್ಷೇಪ ಇದೆ ಎಂದು ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ಅಂಶವೂ ಸಿಂಗ್‌ ಅವರು ಸಲ್ಲಿಸಿರುವ ವರದಿಯಲ್ಲಿ ಪ್ರಮುಖವಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ಕರ್ನಾಟಕದಲ್ಲಿ ಬಿಜೆಪಿ ಮುಖಂಡರ ನಡುವಿನ ಆಂತರಿಕ ಕಚ್ಚಾಟದಿಂದ ಪಕ್ಷಕ್ಕೆ ಇರುಸುಮುರುಸು ಉಂಟಾಗಿದೆ. ವದಂತಿಗಳನ್ನು ಹರಿಯಬಿಟ್ಟಿದ್ದರಿಂದ ಅನಗತ್ಯ ಗೊಂದಲ ಸೃಷ್ಟಿಯಾಗಿರುವುದೂ ನಿಜ ಎಂಬ ಅಂಶವನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಗೊತ್ತಾಗಿದೆ.

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತಿತರರು ಗೂಢಾರ್ಥದ ಅಭಿಪ್ರಾಯ ವ್ಯಕ್ತಪಡಿಸಿ ಅನಗತ್ಯ ಗೊಂದಲ ಉಂಟು ಮಾಡಿದ್ದಾರೆ ಎಂದು ಶಾಸಕರು ದೂರಿದ್ದಾರೆ. ಆಂತರಿಕವಾಗಿ ಪಕ್ಷದ ಚೌಕಟ್ಟಿನೊಳಗೆ ಚರ್ಚಿಸಬಹುದಾದ ವಿಷಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಿರುವ ಕೆಲವು ಮುಖಂಡರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಅಗತ್ಯವಿರುವುದಾಗಿ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದೂ ಹೈಕಮಾಂಡ್‌ ಮೂಲಗಳು ಹೇಳಿವೆ.

ಸಚಿವರೂ ಸೇರಿ ಒಟ್ಟು 55 ಜನ ಶಾಸಕರು ತಮ್ಮನ್ನು ಪ್ರತ್ಯೇಕವಾಗಿ ಭೇಟಿಯಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ, ಹುಬ್ಬಳ್ಳಿ–ಧಾರವಾಡ (ಪಶ್ಚಿಮ) ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ ಮಾತ್ರ ಯಡಿಯೂರಪ್ಪ ಅವರನ್ನು ಬದಲಿಸುವಂತೆ ಕೋರಿದ್ದಾರೆ. ಮಿಕ್ಕವರು, ಆಡಳಿತದಲ್ಲಿ ಯಾವುದೇ ಗೊಂದಲ ಇಲ್ಲ ಎಂದೇ ಹೇಳಿದ್ದಾಗಿ ಅರುಣ್‌ಸಿಂಗ್‌ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಕೋವಿಡ್‌- 19 ಎರಡನೇ ಅಲೆ ಗಂಭೀರಪರಿಣಾಮ ಉಂಟು ಮಾಡಿದ್ದರೂ, ಯಡಿಯೂರಪ್ಪ ನೇತೃತ್ವದ ಸರ್ಕಾರ ಸಮರ್ಪಕವಾಗಿ ಕಾರ್ಯನಿರ್ವಹಿಸಿದೆ. ಸೂಕ್ತ ಪರಿಹಾರ ಘೋಷಿಸಲಾಗಿದೆ. ಆದರೆ, ಕೆಲವು ಮುಖಂಡರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರಿಂದಲೇ ಪಕ್ಷವು ಮುಜುಗರಕ್ಕೆ ಒಳಗಾಗಿದೆ ಎಂದು ಉಲ್ಲೇಖಿಸಲಾಗಿದೆ.

ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಕೆಲವು ದಿನಗಳ ಹಿಂದಷ್ಟೇ ಕೋರಿದ್ದ ಕಾರ್ಕಳ ಶಾಸಕ ಸುನೀಲ್‌ಕುಮಾರ್‌, ಯಡಿಯೂರಪ್ಪ ಅವರ ಆಡಳಿತ ವೈಖರಿಯ ಕುರಿತು ಚಕಾರ ಎತ್ತಿಲ್ಲ. ಆದರೆ, ಯಡಿಯೂರಪ್ಪ ಅವರ ವಿರುದ್ಧ ವ್ಯಕ್ತವಾಗಿರುವಅಸಮಾಧಾನವನ್ನು ತಣಿಸುವ ನಿಟ್ಟಿನಲ್ಲಿ ಪಕ್ಷವು ಗಂಭೀರ ಚಿಂತನೆ ನಡೆಸುವಂತೆ ಕೆಲವರು
ಮನವಿ ಮಾಡಿದ್ದಾರೆ ಎಂದು ಅರುಣ್‌ ಸಿಂಗ್‌ ಪ್ರಸ್ತಾಪಿಸಿದ್ದಾರೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.