ADVERTISEMENT

ಶುಕ್ರವಾರದಿಂದ ಆಶಾ ಕಾರ್ಯಕರ್ತೆಯರು ಸೇವೆಗೆ ಗೈರು: ಅನಿರ್ದಿಷ್ಟಾವಧಿ ಮಷ್ಕರ

₹ 12 ಸಾವಿರಕ್ಕೆ ವೇತನ ಹೆಚ್ಚಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 14:14 IST
Last Updated 9 ಜುಲೈ 2020, 14:14 IST
   

ಬೆಂಗಳೂರು: ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆಶಾ ಕಾರ್ಯಕರ್ತೆಯರುವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಶುಕ್ರವಾರದಿಂದ (ಜು.10) ಅನಿರ್ದಿಷ್ಟಾವಧಿ ಮಷ್ಕರ ನಡೆಸಲು ತೀರ್ಮಾನಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಪ್ರಕರಣ ವರದಿಯಾದಾಗಿನಿಂದಲೂ 42 ಸಾವಿರ ಆಶಾ ಕಾರ್ಯಕರ್ತೆಯರು ಹಗಲಿರುಳು ಸೇವೆ ಸಲ್ಲಿಸುತ್ತಿದ್ದಾರೆ. ಸೋಂಕಿತರ ಪತ್ತೆ ಸೇರಿದಂತೆ ವಿವಿಧ ಕಾರ್ಯದಲ್ಲಿ ಅವರು ನಿರತರಾಗಿದ್ದಾರೆ. ಸದ್ಯ ಅವರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಮಾಸಿಕ ₹ 6 ಸಾವಿರ ವೇತನ ನೀಡಲಾಗುತ್ತಿದೆ. ಈ ಮೊತ್ತವನ್ನು ₹ 12 ಸಾವಿರಕ್ಕೆ ಏರಿಕೆ ಮಾಡಬೇಕು ಎನ್ನುವುದು ಅವರ ಪ್ರಮುಖ ಬೇಡಿಕೆಯಾಗಿದೆ. ಅದೇ ರೀತಿ, ಅಪಾಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನಮಗೆ ಮುಖಗವಸು ಸೇರಿದಂತೆ ವೈಯಕ್ತಿಕ ಸುರಕ್ಷಾ ಸಾಧನಗಳನ್ನು ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

‘ಎಲ್ಲ ಆಶಾ ಕಾರ್ಯಕರ್ತೆಯರು ಸೇವೆ ಸ್ಥಗಿತ ಮಾಡುವ ಬಗ್ಗೆ ಹಾಗೂ ನಮ್ಮ ಬೇಡಿಕೆಗಳ ಬಗ್ಗೆ ಮತ್ತೊಮ್ಮೆ ಜಿಲ್ಲಾ ಆರೋಗ್ಯಾಧಿಕಾರಿಗೆ ಮನವಿ ಪತ್ರವನ್ನುಶುಕ್ರವಾರ ಸಲ್ಲಿಸುತ್ತೇವೆ. ಬೇಡಿಕೆಗಳು ಈಡೇರುವವರೆಗೂ ಸೇವೆಗೆ ಹಾಜರಾಗುವುದಿಲ್ಲ. ಈಗಾಗಲೇ ಹಲವು ಬಾರಿ ನಮ್ಮ ಕಷ್ಟಗಳನ್ನು ಹೇಳಿಕೊಂಡು, ಮನವಿ ಸಲ್ಲಿಸಿದರೂ ಸರ್ಕಾರ ಸ್ಪಂದಿಸಲಿಲ್ಲ. ಸದ್ಯ ನಮ್ಮ ಕೈಸೇರುತ್ತಿರುವ ವೇತನ ಮನೆಯ ಬಾಡಿಗೆ ಕಟ್ಟಲು ಕೂಡ ಸಾಲುತ್ತಿಲ್ಲ’ ಎಂದುರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ನಾಗಲಕ್ಷ್ಮಿ ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಕೋವಿಡ್ ಹಿನ್ನೆಲೆಯಲ್ಲಿರಾಜ್ಯ ಸರ್ಕಾರ ಘೋಷಿಸಿದ್ದ ₹ 3 ಸಾವಿರ ಪರಿಹಾರ ಕೂಡ ಶೇ 40 ರಷ್ಟು ಮಂದಿಗೆ ಇನ್ನೂ ತಲುಪಿಲ್ಲ. ಮುಖಗವಸು, ಸ್ಯಾನಿಟೈಸರ್ ಸೇರಿದಂತೆ ವಿವಿಧ ಸುರಕ್ಷಾ ಸಾಧನಗಳನ್ನು ಕೂಡ ಸಮರ್ಪಕವಾಗಿ ಪೂರೈಸುತ್ತಿಲ್ಲ. ಕಾರ್ಯಕ್ಷಮತೆ ಅನುಸಾರ ನೀಡುವ ಹೆಚ್ಚುವರಿ ಹಣ ಕೂಡ ತಾಂತ್ರಿಕ ಕಾರಣದಿಂದ ಕೈಸೇರುತ್ತಿಲ್ಲ.ಕಳೆದ ನಾಲ್ಕು ತಿಂಗಳಲ್ಲಿ ಹಲವು ಆಶಾ ಕಾರ್ಯಕರ್ತೆಯರು ಹಲ್ಲೆಗೆ ಒಳಗಾಗಿದ್ದಾರೆ. ನಮ್ಮಿಂದ ಮನೆಯ ಸದಸ್ಯರು ಕೂಡ ಸೋಂಕಿತರಾಗುವ ಸಾಧ್ಯತೆ ಇದ್ದರೂ ಎದೆಗುಂದದೆ ಸೇವೆ ಸಲ್ಲಿಸುತ್ತಿದ್ದೇವೆ. ಇಷ್ಟಾಗಿಯೂ ಸರ್ಕಾರ ನಮ್ಮನ್ನು ಕಡೆಗಣಿಸಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.