ADVERTISEMENT

ತಕ್ಷಣವೇ ಸೋಯಾ ಖರೀದಿಸಿ: ಅಶೋಕ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 15:49 IST
Last Updated 26 ಅಕ್ಟೋಬರ್ 2025, 15:49 IST
ಆರ್.ಅಶೋಕ
ಆರ್.ಅಶೋಕ   

ಬೆಂಗಳೂರು: ‘ರಾಜ್ಯ ಸರ್ಕಾರವು ಕೂಡಲೇ ಹೆಸರು, ಸೂರ್ಯಕಾಂತಿ, ಉದ್ದು, ಸೋಯಾ ಖರೀದಿ ಆರಂಭಿಸಬೇಕು’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಒತ್ತಾಯಿಸಿದ್ದಾರೆ.

ಬೀದರ್‌ನಲ್ಲಿ ಸೋಯಾ ಖರೀದಿ ಕೇಂದ್ರ ಆರಂಭಿಸದೇ ಇರುವ ಕಾರಣಕ್ಕೆ ಬೆಳೆಗಾರರು ಖಾಸಗಿ ವ್ಯಕ್ತಿಗಳಿಗೆ ಮಾರುತ್ತಿದ್ದಾರೆ ಎಂದು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವರದಿಯನ್ನು ‘ಎಕ್ಸ್‌’ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.

ಜತೆಗೆ, ‘ಅತಿವೃಷ್ಟಿಯಿಂದ ರೈತರು ಈಗಾಗಲೇ ನಲುಗಿ ಹೋಗಿದ್ದಾರೆ. ಅಳಿದುಳಿದಿರುವ ಬೆಳೆಯನ್ನು ಒಳ್ಳೆಯ ಬೆಲೆಗೆ ಮಾರಾಟ ಮಾಡಲು ಮುಂದಾದರೆ, ಫ್ರೂಟ್ಸ್‌ ಐಡಿ ಇಲ್ಲ, ಗುಣಮಟ್ಟ ಇಲ್ಲ, ಸರಿಯಾದ ಗೋಣಿಚೀಲದಲ್ಲಿ ತುಂಬಿಲ್ಲ ಎಂದು ನೆಪ ಹೇಳಿ ಸತಾಯಿಸಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.

ADVERTISEMENT

‘ಕುರ್ಚಿ ಕಿತ್ತಾಟದಲ್ಲಿ ಮುಳುಗಿಹೋಗಿರುವ ಈ ಸರ್ಕಾರವು, ನೆರೆಬಾಧಿತ ರೈತರ ಸಂಕಷ್ಟವನ್ನು ಸಂಪೂರ್ಣವಾಗಿ ಮರೆತಿದೆ. ರೈತರಿಗೆ ಇನ್ನಷ್ಟು ತೊಂದರೆ ಕೊಡುತ್ತಿದೆ. ತಕ್ಷಣವೇ ಖರೀದಿ ಕೇಂದ್ರಗಳನ್ನು ಆರಂಭಿಸಿ, ರೈತರ ನೆರವಿಗೆ ಧಾವಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಜಮೀರ್ ಕರೆ ಖಂಡನೀಯ’

‘ರೈತರಿಗೆ ವಂಚಿಸಿದ ಆರೋಪಿಗಳನ್ನು ರಕ್ಷಿಸುವಂತೆ ಸಚಿವ ಜಮೀರ್ ಅಹಮದ್‌ ಖಾನ್ ಅವರು ಪೊಲೀಸರಿಗೆ ಕರೆ ಮಾಡಿ ಒತ್ತಡ ಹೇರಿರುವುದು ಖಂಡನೀಯ’ ಎಂದು ಅಶೋಕ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.  ‘ಮುಖ್ಯಮಂತ್ರಿ ಅವರ ಆಪ್ತ ಸಚಿವ ಸಂಪುಟದ ಸದಸ್ಯರೇ ಹೀಗೆ ಕಾನೂನು ಬಾಹಿರವಾಗಿ ನಡೆದುಕೊಳ್ಳುವುದಾದರೆ ರಾಜ್ಯದಲ್ಲಿ ಸಂವಿಧಾನ ಕಾನೂನು ನಿಯಮಗಳು ಇದ್ದು ಏನು ಪ್ರಯೋಜನ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಜಮೀರ್ ಅವರನ್ನು ಇನ್ನೂ ಸಂಪುಟದಲ್ಲಿ ಇರಿಸಿಕೊಂಡು ಯಾವ ಸಂದೇಶ ನೀಡುತ್ತಿದ್ದೀರಿ’ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.