ADVERTISEMENT

700 ದಿನಗಳಲ್ಲಿ 3760 ಕಡತಗಳ ವಿಲೇವಾರಿ: ಡಾ.ಸಿ.ಎನ್‌.ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 11:59 IST
Last Updated 29 ಜುಲೈ 2021, 11:59 IST
ಡಾ.ಸಿ.ಎನ್‌.ಅಶ್ವತ್ಥನಾರಾಯಣ
ಡಾ.ಸಿ.ಎನ್‌.ಅಶ್ವತ್ಥನಾರಾಯಣ   

ಬೆಂಗಳೂರು: ಉನ್ನತ ಶಿಕ್ಷಣ, ಐಟಿ- ಬಿಟಿ, ವಿಜ್ಞಾನ- ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವ, ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು 700 ದಿನಗಳ ತಮ್ಮ ಅಧಿಕಾರಾವಧಿಯಲ್ಲಿ ಒಟ್ಟು 3,760 ಕಡತಗಳನ್ನು ವಿಲೇವಾರಿ ಮಾಡಿ‌ದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ಅವರು ಇದೇ 26 ರಂದು ರಾಜೀನಾಮೆ ನೀಡುವವರೆಗೆ ಅಶ್ವತ್ಥನಾರಾಯಣ ಅವರು ತಮ್ಮ ಇಲಾಖೆಗಳಲ್ಲಿದ್ದ ಎಲ್ಲ ಕಡತಗಳನ್ನು ವಿಲೇವಾರಿ ಮಾಡಿ, ಬಾಕಿ ಕಡತಗಳ ಪ್ರಮಾಣವನ್ನು ಶೂನ್ಯಕ್ಕೆ ತಂದಿದ್ದಾರೆ ಎಂದು ಅವರ ಕಚೇರಿ ಮೂಲಗಳು ತಿಳಿಸಿವೆ.

‘ಇ-ಆಫೀಸ್‌ (ಕಾಗದ ರಹಿತ ಕಡತ) ವ್ಯವಸ್ಥೆಯ ಮೂಲಕವೂ ಸಾವಿರಾರು ಕಡತಗಳನ್ನು ಪಾರದರ್ಶಕವಾಗಿ ವಿಲೇವಾರಿ ಮಾಡಲಾಗಿದೆ. ಇ- ಕಚೇರಿ ಮೂಲಕವೇ ವಿಶ್ವವಿದ್ಯಾಲಯಗಳ ಕಡತಗಳ ವಿಲೇವಾರಿ ಕೂಡ ಆರಂಭವಾಗಿದೆ’ ಎಂದು ಹೇಳಿದೆ.

ADVERTISEMENT

ಅಧಿಕಾರ ಸ್ವೀಕರಿಸಿದಾಗಿನಿಂದ ನಿರ್ಗಮಿಸುವ ದಿನದವರೆಗೂ ಒಟ್ಟು 3,760 ಕಡತಗಳನ್ನು ವಿಲೇವಾರಿ ಮಾಡಲಾಗಿದೆ. ನಂತರ ಬಂದ ಕಡತಗಳನ್ನು ಪರಿಶೀಲಿಸಿ ತ್ವರಿತವಾಗಿ ವಿಲೇವಾರಿ ಮಾಡಲಾಗಿದೆ.

ಉನ್ನತ ಶಿಕ್ಷಣ ಇಲಾಖೆಯಲ್ಲಿ ಒಟ್ಟು 1,746 ಮ್ಯಾನುಯಲ್ ಕಡತಗಳು ಬಂದಿದ್ದು, ಅಷ್ಟನ್ನೂ ವಿಲೇವಾರಿ ಮಾಡಲಾಗಿದೆ. ಜತೆಗೆ, 1,441 ಇ-ಕಡತಗಳು ಬಂದಿದ್ದು, ಅವೂ ವಿಲೇವಾರಿ ಆಗಿವೆ. ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ-ಬಿಟಿ ಇಲಾಖೆಯಲ್ಲಿ 62 ಮ್ಯಾನುಯಲ್ ಕಡತಗಳು, 86 ಇ-ಕಡತಗಳು ವಿಲೇವಾರಿ ಆಗಿವೆ. ಕೌಶಲ್ಯಾಭಿವೃದ್ಧಿ ಇಲಾಖೆಯಲ್ಲಿ 84 ಮ್ಯಾನುಯಲ್ ಕಡತಗಳು, 96 ಇ-ಕಡತಗಳು ಬಂದಿದ್ದವು. ವೈದ್ಯಕೀಯ ಶಿಕ್ಷಣ ಇಲಾಖೆಗೆ ಬಂದಿದ್ದ 245 ಮ್ಯಾನುಯಲ್ ಕಡತಗಳು ವಿಲೇ ಆಗಿವೆ.

ಒಟ್ಟಾರೆ 2,137 ಮ್ಯಾನುಯಲ್ ಕಡತಗಳು, 1,633 ಇ-ಕಡತಗಳನ್ನು ಬಾಕಿ ಇಟ್ಟುಕೊಳ್ಳದೇ ವಿಲೇವಾರಿ ಮಾಡಿದ್ದಾರೆ. ಕೆಲವೊಮ್ಮೆ ರಾತ್ರಿ ಹತ್ತು ಗಂಟೆಯವರೆಗೂ ಕಚೇರಿಯಲ್ಲೇ ಕೂತು ಕಡತಗಳನ್ನು ವಿಲೇವಾರಿ ಮಾಡಿದ್ದರು ಎಂದು ಅಶ್ವತ್ಥನಾರಾಯಣ ಕಚೇರಿ ಮೂಲಗಳು ತಿಳಿಸಿವೆ.

ಬಾಕಿ ಪ್ರಶ್ನೆಯೇ ಇಲ್ಲ:‘ಯಾವುದೇ ಕೆಲಸವನ್ನು ಬಾಕಿ ಇಟ್ಟುಕೊಳ್ಳುವುದು ನನ್ನ ಜಾಯಮಾನವಲ್ಲ. ಬಂದ ಕಡತವನ್ನೂ ಅಧಿಕಾರಿಗಳ ಜತೆ ಚರ್ಚೆ ಮಾಡಿ ಸಾಧ್ಯವಾದಷ್ಟು ತ್ವರಿತವಾಗಿ ವಿಲೇವಾರಿ ಮಾಡಿದ್ದೇನೆ. ಪ್ರವಾಸ ಇದ್ದಾಗ ಒಂದು ಅಥವಾ ಎರಡು ದಿನ ತಡವಾಗಿರುವುದು ಬಿಟ್ಟರೆ ಬಾಕಿ ಇಟ್ಟುಕೊಳ್ಳುವ ಪ್ರಶ್ನೆಯೇ ಇರಲಿಲ್ಲ’ ಅಶ್ವತ್ಥನಾರಾಯಣ ಹೇಳಿದ್ದಾರೆ.

‘ಇ-ಆಫೀಸ್‌ ವ್ಯವಸ್ಥೆಯಿಂದ ಅನೇಕ ಕಡತಗಳು ತ್ವರಿತವಾಗಿ ವಿಲೇವಾರಿ ಆಗಿವೆ. ಇದರಿಂದ ನಾನು ನಿರ್ವಹಣೆ ಮಾಡುತ್ತಿದ್ದ ಎಲ್ಲ ಇಲಾಖೆಗಳಲ್ಲಿ ಕ್ಷಮತೆ ಹೆಚ್ಚಾಗಿದೆ. ಕಡತ ತ್ವರಿತವಾಗಿ ವಿಲೇವಾರಿ ಮಾಡುವ ಸಂಬಂಧ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಆಸಕ್ತಿ ತೋರಿದ್ದು ಇದು ಒಳ್ಳೆಯ ಬೆಳವಣಿಗೆ. ಇದರಿಂದ ಪಾರದರ್ಶಕತೆ ಬರುತ್ತದೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.