ADVERTISEMENT

ಕಾರ್ಯಕರ್ತನ ಮೇಲೆ ಹಲ್ಲೆ ವಿಚಾರ: ಡಿಕೆಶಿಗೆ 'ಗತಕಾಲದ ನೆನಪು ಕಾಡಿತೆ' ಎಂದ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 16:45 IST
Last Updated 10 ಜುಲೈ 2021, 16:45 IST
ಡಿ.ಕೆ. ಶಿವಕುಮಾರ್‌
ಡಿ.ಕೆ. ಶಿವಕುಮಾರ್‌   

ಬೆಂಗಳೂರು: ಹೆಗಲ ಮೇಲೆ ಕೈ ಇರಿಸಲು ಬಂದ ಪಕ್ಷದ ಕಾರ್ಯಕರ್ತರೊಬ್ಬರ ತಲೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಏಟು ನೀಡಿರುವ ವಿಡಿಯೊ ತುಣುಕನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು ತೀವ್ರ ಟೀಕಾಪ್ರಹಾರ ನಡೆಸಿರುವ ಬಿಜೆಪಿ ರಾಜ್ಯ ಘಟಕ, ‘ರೌಡಿ ಕೊತ್ವಾಲನೊಂದಿಗೆ ಇದ್ದ ಗತಕಾಲದ ನೆನಪು ಕಾಡಿತೆ’ ಎಂದು ಪ್ರಶ್ನಿಸಿದೆ.

‘ನೀವು ಕೊತ್ವಾಲನ ಶಿಷ್ಯ ಆಗಿರಬಹುದು. ಜೈಲಿಗೂ ಹೋಗಿ ಬಂದಿರಬಹುದು. ಆದರೆ, ಆ ರಾಕ್ಷಸಿ ಗುಣಗಳನ್ನು ಅಮಾಯಕರ ಮೇಲೆ ತೋರಿಸಬೇಡಿ. ಇದು ಬಸವಣ್ಣನ ನಾಡು ಎಂಬುದು ನೆನಪಿರಲಿ. ಕೆಪಿಸಿಸಿ ಅಧ್ಯಕ್ಷರ ನಡೆ ಇತರರಿಗೆ ಮಾದರಿಯಾಗಿರಲಿ’ ಎಂದು ಬಿಜೆಪಿ ಹೇಳಿದೆ.

ಶಿವಕುಮಾರ್‌ ಅವರ ದರ್ಪದ ವರ್ತನೆ ಹಲವಾರು ಬಾರಿ ಬಹಿರಂಗವಾಗಿದೆ. ವಿದ್ಯುತ್‌ ಪೂರೈಕೆಯಲ್ಲಿನ ಸಮಸ್ಯೆ ಹೇಳಿಕೊಂಡ ವ್ಯಕ್ತಿಯ ಬಂಧನಕ್ಕೆ ಪೊಲೀಸರನ್ನು ಕಳಿಸಿದ್ದರು. ಜತೆಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ವಿದ್ಯಾರ್ಥಿ ಮೇಲೂ ಹಲ್ಲೆ ನಡೆಸಿದ್ದರು. ತಾವು ಮಾತನಾಡುವಾಗ ಮಾತನಾಡಿದರೆ ಒದ್ದು ಹೊರ ಹಾಕುವುದಾಗಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ್ದರು ಎಂದು ಟ್ವೀಟ್‌ನಲ್ಲಿ ದೂರಲಾಗಿದೆ.

ADVERTISEMENT

‘ಸಾರ್ವಜನಿಕವಾಗಿ ಹೊಡೆಯುವುದು, ಒದೆಯುವುದು, ಮೊಬೈಲ್‌ ಕಿತ್ತೆಸೆಯುವುದು ರೌಡಿ ಲಕ್ಷಣ ಅಲ್ಲವೆ? ನೀವು ಹೊಡಿ, ಬಡಿ ರಾಜಕಾರಣದ ರಾಯಭಾರಿ ಆಗಲು ಹೊರಟಿದ್ದೀರಾ? ಭೂಗತ ಜಗತ್ತಿನ ರೀತಿಯ ವರ್ತನೆಗಳೇ ನಿಮಗೆ ಅನಿವಾರ್ಯ ಎಂದಾದರೆ ಸಾರ್ವಜನಿಕ ಜೀವನ ಬಿಟ್ಟುಬಿಡಿ’ ಎಂದು ಶಿವಕುಮಾರ್‌ ಅವರನ್ನು ಬಿಜೆಪಿ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.