ADVERTISEMENT

ವಿಧಾನಸಭೆ | ಬಫರ್ ಝೋನ್ ಕಡಿತ: ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ

ಸದನ ಸಮಿತಿ ರಚಿಸುವಂತೆ ಬಿಜೆಪಿ, ಜೆಡಿಎಸ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 15:56 IST
Last Updated 19 ಆಗಸ್ಟ್ 2025, 15:56 IST
<div class="paragraphs"><p>ಸಂಗ್ರಹ ಚಿತ್ರ&nbsp;</p></div>

ಸಂಗ್ರಹ ಚಿತ್ರ 

   

ಬೆಂಗಳೂರು: ‘ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ದಿ ಪ್ರಾಧಿಕಾರ ತಿದ್ದುಪಡಿ ಮಸೂದೆ– 2025’ರ ಕುರಿತು ಚರ್ಚಿಸಲು ಸದನ ಸಮಿತಿ ರಚಿಸಬೇಕು’ ಎಂಬ ತಮ್ಮ ಬೇಡಿಕೆಗೆ ಮನ್ನಣೆ ಸಿಗದ ಕಾರಣ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು. ಅದರ ನಡುವೆಯೇ ಸರ್ಕಾರ ಮಸೂದೆಗೆ ಅಂಗೀಕಾರ ಪಡೆಯಿತು.

ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಅವರು ತಿದ್ದುಪಡಿ ಮಸೂದೆಯನ್ನು ಮಂಡಿಸಿದರು.

ADVERTISEMENT

ರಾಜ್ಯದಲ್ಲಿರುವ ಕೆರೆಗಳಿಗೆ ಏಕರೂಪದಲ್ಲಿದ್ದ 30 ಮೀಟರ್‌ ಬಫರ್ ಝೋನ್ (ಸಂರಕ್ಷಿತ ಪ್ರದೇಶ) ಕಡಿತಗೊಳಿಸಲು ಅವಕಾಶ ಕಲ್ಪಿಸುವ ಈ ತಿದ್ದುಪಡಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಎಸ್. ಸುರೇಶ್ ಕುಮಾರ್, ‘ಈ ತಿದ್ದುಪಡಿ ಬೆಂಗಳೂರಿಗೆ ಮಾರಕವಾಗಿದೆ. ಸರ್ಕಾರ ರಿಯಲ್ ಎಸ್ಟೇಟ್‌ ಲಾಬಿಗೆ ಮಣಿದಿದೆ’ ಎಂದು ಆರೋಪಿಸಿದರು. ಅಲ್ಲದೆ, ಈ ತಿದ್ದುಪಡಿಯನ್ನು ಸದನ ಸಮಿತಿ ರಚಿಸಿ ಅದರ ಅವಗಾಹನೆಗೆ ನೀಡಬೇಕು’ ಎಂದು ಆಗ್ರಹಿಸಿದರು. ವಿರೋಧ ಪಕ್ಷದ ನಾಯಕ ಆರ್. ಅಶೋಕ, ಬಿಜೆಪಿಯ ಎಸ್‌.ಆರ್‌. ವಿಶ್ವನಾಥ್‌ ಅವರೂ ದನಿಗೂಡಿಸಿದರು.

ಆಕ್ಷೇಪಗಳಿಗೆ ಪ್ರತಿಕ್ರಿಯಿಸಿದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ‘ಕೆರೆಗಳ ಬಫರ್ ಝೋನ್ ವಿಚಾರವಾಗಿ ತಿದ್ದುಪಡಿ ತರುವಂತೆ ಯಾವುದೇ ಬಿಲ್ಡರ್‌ಗಳು ಮನವಿ ಮಾಡಿಲ್ಲ. ಈ ಹಿಂದೆ ಕಂಠೀರವ ಸ್ಟೇಡಿಯಂ, ಕೆಂಪೇಗೌಡ ಬಸ್ ನಿಲ್ದಾಣವನ್ನು ಕೆರೆಗಳ ಮೇಲೆ ನಿರ್ಮಾಣ ಮಾಡಲಾಯಿತು. ಅದು ಆಗಿನ ಕಾಲ. ಈಗ ಯಾವುದೇ ಕಾರಣಕ್ಕೆ ಕೆರೆಗಳನ್ನು ಒತ್ತುವರಿ ಮಾಡುವುದಿಲ್ಲ. ನಾವು ಕೆರೆಗಳ ಸಂರಕ್ಷಣೆ ಮಾಡಬೇಕು ಎಂದು ಈ ತಿದ್ದುಪಡಿಗೆ ಮುಂದಾಗಿದ್ದೇವೆ’ ಎಂದು ಸಮರ್ಥನೆ ನೀಡಿದರು.

ತೆಲಂಗಾಣ, ಆಂಧ್ರ ಪ್ರದೇಶ, ಅಸ್ಸಾಂ, ಮಧ್ಯಪ್ರದೇಶ, ತಮಿಳುನಾಡು ಮತ್ತಿತರ ರಾಜ್ಯಗಳಲ್ಲಿರುವ ಬಫರ್ ಝೋನ್ ಕುರಿತು ಮಾಹಿತಿ ನೀಡಿದ ಅವರು, ‘ನಮಗೆ ಎನ್‌ಜಿಟಿ ತೀರ್ಪುಗಳ ಬಗ್ಗೆಯೂ ಅರಿವಿದೆ. ಸುಪ್ರೀಂ ಕೋರ್ಟ್‌ನ ತೀರ್ಪುಗಳ ವಿರುದ್ಧ ಹೋಗುತ್ತಿಲ್ಲ. ಬೆಂಗಳೂರಿನ ರಾಜಕಾಲುವೆಗಳ ಬಫರ್ ಝೋನ್‌ಗಳಲ್ಲಿ ಕಟ್ಟಡ ಹಾಗೂ ಇತರ ನಿರ್ಮಾಣ ಕೆಲಸಗಳು ಆಗುತ್ತವೆ ಎನ್ನುವ ಮುನ್ನೆಚರಿಕೆ ವಹಿಸಿಕೊಂಡು ಸುಮಾರು 300 ಕಿ.ಮೀ ಉದ್ದಕ್ಕೆ ರಾಜಕಾಲುವೆ ಪಕ್ಕದಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದೇವೆ’ ಎಂದರು.

ಎರಡು ಮಸೂದೆಗಳಿಗೆ ಅಂಗೀಕಾರ

ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ‘ಡಾ. ಮನಮೋಹನ್‌ ಸಿಂಗ್‌ ಬೆಂಗಳೂರು ನಗರ ವಿಶ್ವವಿದ್ಯಾಲಯ’ ಎಂದು ನಾಮಕರಣ ಮಾಡಲು ‘ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ (ತಿದ್ದುಪಡಿ) ಮಸೂದೆ’ ಮತ್ತು ಅಂತರ್ಜಲ ಸಂರಕ್ಷಣೆಗಾಗಿ ಕೇಂದ್ರ ಅಂತರ್ಜಲ ಪ್ರಾಧಿಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಲು ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) (ತಿದ್ದುಪಡಿ) ಮಸೂದೆಗೆ ವಿಧಾನಸಭೆ ಅಂಗೀಕಾರ ನೀಡಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.