ADVERTISEMENT

ಲೇ ಆರೆಸ್ಸೆಸ್‌ನವ್ರಾ ...ಥೂ ನಿಮ್ಮ... ಯಾಕೆ ಕೂಗಾಡ್ತೀರಿ: ಶಾಸಕ ಶಿವಲಿಂಗೇಗೌಡ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 11:30 IST
Last Updated 4 ಫೆಬ್ರುವರಿ 2026, 11:30 IST
ಶಾಸಕ ಕೆ.ಎಂ.ಶಿವಲಿಂಗೇಗೌಡ
ಶಾಸಕ ಕೆ.ಎಂ.ಶಿವಲಿಂಗೇಗೌಡ   

ಬೆಂಗಳೂರು: ‘ಲೇ ಆರೆಸ್ಸೆಸ್‌ನವ್ರಾ ...ಥೂ ನಿಮ್ಮ... ಯಾಕೆ ಕೂಗಾಡ್ತೀರಿ...ನಿಮಗೆ ಬೆಂಕಿ ಹಾಕಾ. ಅಸೆಂಬ್ಲಿಗೆ ಬಂದು ಡ್ಯಾನ್ಸ್‌ ಮಾಡ್ತೀರಾ? ನಿಮಗೆ ನಾಚಿಕೆ ಮಾನ– ಮರ್ಯಾದೆ ಇದೆಯಾ?’

ಹೀಗೆಂದು ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ವಿರುದ್ಧ ಮಾತಿನ ಕೆಂಡದ ಮಳೆ ಸುರಿಸಿದ್ದು ಕಾಂಗ್ರೆಸ್‌ನ ಕೆ.ಎಂ.ಶಿವಲಿಂಗೇಗೌಡ.

‘ವಿಬಿ ಜಿ ರಾಮ್‌ ಜಿ ಕಾಯ್ದೆಯನ್ನು ವಿರೋಧಿಸಿ ಮಂಡಿಸಿದ ನಿರ್ಣಯದ ಪರ ಮಾತನಾಡಲು ನಿಂತ ಶಿವಲಿಂಗೇಗೌಡರಿಗೆ ಬಿಜೆಪಿ ಸದಸ್ಯರು ಅಡ್ಡಿ ಮಾಡಿದರೆಂದು ರೊಚ್ಚಿಗೆದ್ದರು.

ADVERTISEMENT

ಶಿವಲಿಂಗೇಗೌಡ ಅವರ ನಿಂದನೆ ಮಾತುಗಳು ಹೆಚ್ಚಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಅವರ ವಿರುದ್ಧ ಘೋಷಣೆಗಳನ್ನು ಕೂಗುವುದನ್ನೂ ತಾರಕಕ್ಕೇರಿಸಿದರು. ‘ಕೊಬ್ಬರಿ ಕಳ್ಳ, ಕೊಬ್ಬರಿ ಭ್ರಷ್ಟ... ದೇವೇಗೌಡರಿಗೆ ಮೋಸ ಮಾಡಿದವರು ’ ಎಂಬುದಾಗಿ ಘೋಷಣೆಗಳನ್ನು ಕೂಗಿದರು.

‘ಇವರು ವಿರೋಧ ಪಕ್ಷದವರಾ... ಇಲ್ಲಿಗೆ ಕೋತಿಗಳನ್ನು ತಂದು ಬಿಡಲಾಗಿದೆ. ನೀವು ಆರೆಸ್ಸೆಸ್‌ನವರು ದೇಶವನ್ನು ಹಾಳು ಮಾಡಿದ್ದೀರಿ. ಇಲ್ಲಿ ನಾವು ಭಾಷಣ ಮಾಡುವಾಗ ಅಡ್ಡಿಪಡಿಸುತ್ತೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧರಣಿ ನಿರತ ಬಿಜೆಪಿಯ ಶರಣು ಸಲಗರ ಮತ್ತು ವೇದವ್ಯಾಸ್ ಕಾಮತ್ ಅವರು, ‘ಕೊಬ್ರಿಯಲ್ಲಿ ಭ್ರಷ್ಟಾಚಾರ ಮಾಡಿದ ಶಿವಲಿಂಗೇಗೌಡರಿಗೆ ಧಿಕ್ಕಾರ. ಅಧಿಕಾರದ ಆಸೆಗೆ ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮೋಸ ಮಾಡಿ, ಅವರ ಬೆನ್ನಿಗೆ ಚೂರಿ ಹಾಕಿ ಕಾಂಗ್ರೆಸ್ ಸೇರಿದ ಶಿವಲಿಂಗೇಗೌಡ ಅವರಿಗೆ ಧಿಕ್ಕಾರ’ ಎಂದು ಹೇಳಿದ್ದು ಗೌಡರನ್ನು ಮತ್ತಷ್ಟು ಕೆರಳಿಸಿತು.

‘ನಿನ್ನ ಹೆಂಡ್ತಿ ತಹಶಿಲ್ದಾರ್‌. ನೀನು ಹೆಂಡ್ತೀನ ಬಿಟ್ಟು ಹಣ ಹೊಡಿತಾ ಇದ್ದೀಯಾ. ನೀನು ಅತಿ ಭ್ರಷ್ಟ’ ಎಂದು ಶರಣು ಸಲಗರ ವಿರುದ್ಧ ಕಿಡಿಕಾರಿದ ಶಿವಲಿಂಗೇಗೌಡ ಅವರು, ‘ಇವರನ್ನು ಕೂಡಲೇ ಸದನದಿಂದ ಹೊರ ಹಾಕಬೇಕು. 80 ವರ್ಷದ ವಿಧಾನಸಭೆಯ ಇತಿಹಾಸದಲ್ಲಿ ಇಂತಹ ಆಯೋಗ್ಯ ಕೆಲಸ ಮಾಡಿದವರು ಯಾರೂ ಇಲ್ಲ’ ಎಂದರು.

‘ನೀವು ಮಾನ ಮರ್ಯಾದೆ ಇಲ್ಲದ ಅಯೋಗ್ಯರು. ಆರ್‌ಎಸ್‌ಎಸ್‌ಗೆ ಧಿಕ್ಕಾರ ಹಾಕುತ್ತೇನೆ. ನಿಮ್ಮಂತ ನೂರಾರು ನಾಯಿಗಳು ಬಂದರು ನಾನು ಹೆದರುವುದಿಲ್ಲ. ನಿಮ್ಮ ಜೀವನದಲ್ಲೇ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ’ ಎಂದು ಶಿವಲಿಂಗೇಗೌಡ ಸವಾಲೆಸೆದರು.

ಈ ಹಂತದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಸಚಿವ ತಿಮ್ಮಾಪುರ ಜತೆ ಶಿವಲಿಂಗೇಗೌಡರಿಗೆ ಧಿಕ್ಕಾರ ಹಾಕುವುದನ್ನು ಮುಂದುವರಿಸಿದರು.

ಆಗ ಮಧ್ಯ ಪ್ರವೇಶಿಸಿದ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅವರು, ‘ಶಿವಲಿಂಗೇಗೌಡರು ಕೆಲವು ಅಸಂಸದೀಯ ಪದಗಳನ್ನು ಬಳಸಿದ್ದಾರೆ. ಅವುಗಳನ್ನು ಕಡತದಿಂದ ತೆಗೆದುಹಾಕಬೇಕು. ಶರಣು ಸಲಗರ ಅವರ ಪತ್ನಿಯ ವಿರುದ್ಧವೂ ಆರೋಪ ಮಾಡಿದ್ದಾರೆ. ಅವರು ಇಲ್ಲಿ ಬಂದು ತಮ್ಮನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಅಪ್ಪ... ಇತ್ಯಾದಿ ಪದಗಳನ್ನು ಬಳಸಿದರೆ. ಈ ಸಂಬಂಧ ಶಿವಲಿಂಗೇಗೌಡರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.