ADVERTISEMENT

ಹಾಸನಕ್ಕೆ ಏರ್‌ಪೋರ್ಟ್, ಕನಕಪುರಕ್ಕೆ ಕಾಲೇಜು

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಘೋಷಣೆ- – ದೇವೇಗೌಡರು, ಡಿ.ಕೆ.ಶಿವಕುಮಾರ್ ಮನವಿಗೆ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 20:02 IST
Last Updated 5 ಫೆಬ್ರುವರಿ 2021, 20:02 IST
ಬಿ.ಎಸ್. ಯಡಿಯೂರಪ್ಪ
ಬಿ.ಎಸ್. ಯಡಿಯೂರಪ್ಪ   

ಬೆಂಗಳೂರು: ಹಾಸನದಲ್ಲಿ ವಿಮಾನ ನಿಲ್ದಾಣ ಹಾಗೂ ಕನಕಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಶುಕ್ರವಾರ ಪ್ರಕಟಿಸಿದರು.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ವಿಧಾನಸಭೆಯಲ್ಲಿ ಉತ್ತರ ನೀಡಿದ ಅವರು, ‘ಹಾಸನ ವಿಮಾನ ನಿಲ್ದಾಣ ಪ್ರಸ್ತಾವ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಜೆಡಿಎಸ್‌ ಸರ್ಕಾರ ಇದ್ದಾಗ ಈ ಯೋಜನೆಯನ್ನು ಯಾಕೆ ಜಾರಿಗೊಳಿಸಿಲ್ಲ ಎಂಬುದು ಗೊತ್ತಿಲ್ಲ. ವಿಮಾನ ನಿಲ್ದಾಣ ನಿರ್ಮಿಸುವಂತೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ವಿನಂತಿಸಿದ್ದಾರೆ. ಆದ್ಯತೆ ನೀಡಿ ಈ ಕೆಲಸ ಮಾಡುವೆ’ ಎಂದು ಅಭಯ ನೀಡಿದರು.

‘ಮೊನ್ನೆ ನನ್ನನ್ನು ಭೇಟಿ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕನಕಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವಂತೆ ಮನವಿ ಮಾಡಿದ್ದಾರೆ. ವೈದ್ಯಕೀಯ ಕಾಲೇಜು ಸ್ಥಾಪಿಸಲಾಗುವುದು’ ಎಂದು ಯಡಿಯೂರಪ್ಪ ಹೇಳಿದರು.

ADVERTISEMENT

ಆಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಬಾಗಲಕೋಟೆಗೆ ವಿಮಾನ ನಿಲ್ದಾಣ’ ಎಂದರು. ‘ನಿಮ್ಮ ಕೆಲಸವನ್ನೂ ಮಾಡಿಕೊಡುತ್ತೇನೆ’ ಎಂದು ಯಡಿಯೂರಪ್ಪ ಭರವಸೆ ನೀಡಿದರು.

‘ಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟ ಉಂಟಾಗಿತ್ತು. ಹೀಗಾಗಿ, ಹಲವು ಕಾಮಗಾರಿಗಳಿಗೆ ಅನುದಾನ ಸ್ಥಗಿತಗೊಳಿಸಲಾಗಿತ್ತು. ಈ ಕೆಲಸಗಳನ್ನು ಆರಂಭಿಸುವಂತೆ ಸೂಚಿಸಿದ್ದೇನೆ. ಇನ್ನೆರಡು ತಿಂಗಳಲ್ಲಿ ತೆರಿಗೆ ಸಂಗ್ರಹ ಇನ್ನಷ್ಟು ಸುಧಾರಣೆ ಆಗಲಿದೆ. ಮಂಜೂರಾದ ಕಾಮಗಾರಿಗಳಿಗೆ ಶೇ 85ರಷ್ಟು ಹಣ ಖರ್ಚು ಮಾಡಲಿದ್ದೇವೆ’ ಎಂದು ಅವರು ಹೇಳಿದರು.

ಅನುಭವ ಮಂಟಪ: ಬಸವ ಕಲ್ಯಾಣದಲ್ಲಿ ₹600 ಕೋಟಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಿಸಲಾಗುವುದು. ಇದಕ್ಕಾಗಿ ₹200 ಕೋಟಿ ಬಿಡುಗಡೆ ಮಾಡಲಾಗಿದ್ದು, ಟೆಂಡರ್‌ ಕರೆಯಲಾಗುವುದು. ನನ್ನ ಅವಧಿಯಲ್ಲೇ ಈ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

‘2020–21ರಲ್ಲಿ ರಾಜ್ಯದ ಬಜೆಟ್‌ ಗಾತ್ರ ₹2.34 ಲಕ್ಷ ಕೋಟಿ ಇತ್ತು. ಆ ವರ್ಷ ಜನವರಿ ವರೆಗೆ ₹1.66 ಲಕ್ಷ ಕೋಟಿ (ಶೇ 71 ಸಾಧನೆ) ವೆಚ್ಚ ಮಾಡಲಾಗಿತ್ತು. 2020–21ರಲ್ಲಿ ₹2.37 ಲಕ್ಷ ಕೋಟಿಯ ಬಜೆಟ್‌ ಮಂಡಿಸ
ಲಾಗಿತ್ತು. ಕೋವಿಡ್‌ ಕಾರಣಕ್ಕೆ ಅದನ್ನು ₹2.18 ಲಕ್ಷ ಕೋಟಿಗೆ ಪರಿಷ್ಕರಿಸಲಾಗಿತ್ತು. ಜನವರಿ ಅಂತ್ಯದ ವರೆಗೆ ₹1.55 ಲಕ್ಷ ಕೋಟಿ ವೆಚ್ಚ ಮಾಡಿ ಶೇ 72 ಸಾಧನೆ ಮಾಡಲಾಗಿದೆ‘ ಎಂದು ಹೇಳಿದರು.

’ಈ ವರ್ಷ ರಾಜ್ಯ ₹87 ಸಾವಿರ ಕೋಟಿ ಸಾಲ ಪಡೆಯಲು ಅವಕಾಶ ಇದೆ. ಜನವರಿ ಅಂತ್ಯದ ವರೆಗೆ ₹57 ಸಾವಿರ ಕೋಟಿ ಸಾಲ ಪಡೆದಿದ್ದೇವೆ. ಇನ್ನೆರಡು ತಿಂಗಳಲ್ಲಿ ₹32 ಸಾವಿರ ಕೋಟಿ ಸಾಲ ಪಡೆಯಬಹುದು‘ ಎಂದು ಹೇಳಿದರು.

’20–21ರಲ್ಲಿ ರಾಜ್ಯದ ರಾಜಸ್ವ ಸಂಗ್ರಹ ₹ 1,79,920 ಕೋಟಿಗಳೆಂದು ಅಂದಾಜು ಮಾಡಲಾಗಿದೆ. ಅದರಲ್ಲಿ ರಾಜ್ಯದ ಸ್ವೀಕೃತಿ ₹1,19,758 ಕೋಟಿ. ಕೇಂದ್ರ ಸರ್ಕಾರದ ಸಹಾಯನುದಾನ, ಜಿಎಸ್‌ಟಿ ಪರಿಹಾರ ಹಾಗೂ ತೆರಿಗೆ ಪಾಲು ₹60,162 ಕೋಟಿ. ಅದರಲ್ಲಿ ತೆರಿಗೆ ಪಾಲು ₹28,591 ಕೋಟಿ, ಸಹಾಯ ಅನುದಾನ ₹15,454 ಕೋಟಿ
ಹಾಗೂ ಜಿಎಸ್‌ಟಿ ಪರಿಹಾರ ₹16,116 ಕೋಟಿ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.