ADVERTISEMENT

₹ 2 ಕೋಟಿವರೆಗಿನ ಕಾಮಗಾರಿ ಕೆಆರ್‌ಐಡಿಎಲ್‌ಗೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 19:31 IST
Last Updated 24 ಮಾರ್ಚ್ 2021, 19:31 IST

ಬೆಂಗಳೂರು: ಟೆಂಡರ್‌ ಕರೆಯದೆಯೇ ₹2 ಕೋಟಿ ಮೊತ್ತದವರೆಗಿನ ಕಾಮಗಾರಿಗಳನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್‌) ಮೂಲಕ ಅನುಷ್ಠಾನಗೊಳಿಸಲು ಅವಕಾಶ ಕಲ್ಪಿಸುವುದಕ್ಕಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ (ತಿದ್ದುಪಡಿ) ಕಾಯ್ದೆಗೆ (ಕೆಟಿಪಿಪಿ ಕಾಯ್ದೆ) ವಿಧಾನಸಭೆಯಲ್ಲಿ ಬುಧವಾರ ಅಂಗೀಕಾರ ನೀಡಲಾಯಿತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯ ಪ್ರಸ್ತಾವಕ್ಕೆ ಹಣಕಾಸು ಇಲಾಖೆ ಮತ್ತು ಕಾನೂನು ಇಲಾಖೆ ತಕರಾರು ತೆಗೆದಿದ್ದವು. ಹಾಗಿದ್ದರೂ ಸದನದಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗಿದೆ.

’ಕಾಮಗಾರಿ ಅನುಷ್ಠಾನದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಮತ್ತು ಟೆಂಡರ್‌ ನೀಡುವಾಗ ಸ್ಪರ್ಧೆ ಇರಬೇಕು ಎಂಬ ಉದ್ದೇಶದಿಂದಲೇ ಕೆಟಿಪಿಪಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಆದರೆ, ಕೆಆರ್‌ಐಡಿಎಲ್‌ಗೆ 4ಜಿ ಅಡಿ ವಿನಾಯಿತಿ ನೀಡಿದರೆ ಕಾಯ್ದೆಯ ಉದ್ದೇಶವೇ ವಿಫಲವಾಗುತ್ತದೆ. ಗುತ್ತಿಗೆದಾರರು ಬೀದಿಪಾಲು ಆಗಲಿದ್ದಾರೆ’ ಎಂದು ಕರ್ನಾಟಕ ರಾಜ್ಯ ಎಸ್‌.ಸಿ, ಎಸ್‌ಟಿ ಗುತ್ತಿಗೆದಾರರ ಸಂಘ ಎಚ್ಚರಿಸಿತ್ತು.

ADVERTISEMENT

ಈ ಬಗ್ಗೆ ಪ್ರಜಾವಾಣಿಯ ಫೆ.18ರ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು.

ವಿಧಾನಸಭೆಯಲ್ಲಿ ಬುಧವಾರ ಕಾಂಗ್ರೆಸ್‌ ಸದಸ್ಯರ ಧರಣಿಯ ನಡುವೆಯೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಸೂದೆ ಮಂಡಿಸಿದರು. ಚರ್ಚೆ ನಡೆಸದೆಯೇ ಮಸೂದೆಗೆ ಅಂಗೀಕಾರ ಪಡೆಯಲಾಯಿತು.

‘ವಿ.ವಿಗಳಿಂದ ಪರಿಶಿಷ್ಟರ ನಿಧಿ ದುರ್ಬಳಕೆ: ಶೀಘ್ರ ಸಭೆ’

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಹಾಸ್ಟೆಲ್‌ಗಳಿಗೆ ಮೂಲಸೌಲಭ್ಯ ಒದಗಿಸುವುದು ಸೇರಿದಂತೆ ವಿವಿಧ ಅಗತ್ಯಗಳಿಗೆ ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯಲ್ಲಿ ಸರ್ಕಾರ ನೀಡುತ್ತಿರುವ ಅನುದಾನವನ್ನು ವಿಶ್ವವಿದ್ಯಾಲಯಗಳು ಅನ್ಯ ಉದ್ದೇಶಕ್ಕೆ ಬಳಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರವೇ ಕುಲಪತಿಗಳ ವಿಶೇಷ ಸಭೆ ಕರೆಯಲಾಗುವುದು’ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

‘ವಿಶ್ವವಿದ್ಯಾಲಯವೊಂದರ ಕುಲಪತಿ ₹ 7 ಕೋಟಿಯನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿರುವ ಕುರಿತು ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ನ ರಮೇಶ್‌ ಗೌಡ ಕೇಳಿದ ಪ್ರಶ್ನೆಗೆ ಪಶುಸಂಗೋಪನೆ ಸಚಿವ ಪ್ರಭು ಚವಾಣ್‌ ಪ್ರತಿಕ್ರಿಯಿಸಿ, ಈ ಬಗ್ಗೆ ಮಾಹಿತಿ ಪಡೆದು ಉತ್ತರಿಸುತ್ತೇನೆ’ ಎಂದರು.

ಆಗ ಕಾರಜೋಳ, ‘ಇದು ಕೇವಲ ಒಂದು ವಿಶ್ವವಿದ್ಯಾಲಯದ ಸಮಸ್ಯೆಯಲ್ಲ. ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಹೀಗೆ ಆಗುತ್ತಿದೆ’ ಎಂದರು.

ರಾಜ್ಯದ ವಿವಿಧ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್‌.ಸಿ, ಎಸ್‌.ಟಿ ವಿದ್ಯಾರ್ಥಿಗಳಿಗೆ ವಸತಿ ನಿಲಯ, ಪಠ್ಯಪುಸ್ತಕ ಸೇರಿದಂತೆ ಮೂಲಸೌಕರ್ಯ ಒದಗಿಸಲು ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯಿಂದ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ, ಒಂಬತ್ತು ವಿಶ್ವವಿದ್ಯಾಲಯಗಳು ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯಡಿ ಬಂದಿರುವ ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಂಡಿವೆ. ಎಸ್‌.ಸಿ, ಎಸ್‌.ಟಿ ವಿದ್ಯಾರ್ಥಿಗಳ ಸೌಲಭ್ಯಕ್ಕಾಗಿ ನೀಡಿರುವ ಅನುದಾನವನ್ನು ಕುಲಪತಿಗಳ ವೈಯಕ್ತಿಕ ಖಾತೆಗೆ ವರ್ಗಾಯಿಸಿಕೊಳ್ಳಲು ಅವಕಾಶ ಇಲ್ಲ’ ಎಂದರು.

ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, ‘ಅನ್ಯ ಉದ್ದೇಶಕ್ಕೆ ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯ ಹಣ ಬಳಸಿಕೊಂಡವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಅವಕಾಶವಿದೆ. ಸರ್ಕಾರ ಶೀಘ್ರ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.