ADVERTISEMENT

ಆಸ್ತಿ ಮುಟ್ಟುಗೋಲು ಯಾರಿಂದಲೂ ಸಾಧ್ಯವಿಲ್ಲ: ರೆಡ್ಡಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 13:34 IST
Last Updated 11 ಜನವರಿ 2023, 13:34 IST
   

ಗಂಗಾವತಿ (ಕೊಪ್ಪಳ ಜಿಲ್ಲೆ): ‘ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಹೊಸ ಪಕ್ಷ ಸ್ಥಾಪಿಸಿ 16 ದಿನಗಳಾಗುವಷ್ಟರಲ್ಲಿಯೇ ಸಿಬಿಐ ಆಸ್ತಿ ಮುಟ್ಟುಗೋಲಿಗೆ ಮುಂದಾಗಿದ್ದು, ಇದು ಯಾರಿಂದಲೂ ಸಾಧ್ಯವಿಲ್ಲ’ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕ ಜನಾರ್ದನ ರೆಡ್ಡಿ ಹೇಳಿದರು.

ಇಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿ ‘ಪಕ್ಷ ಸಂಘಟನೆ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಜನರಿಗೆ ಮಾಹಿತಿ ನೀಡುತ್ತಿದ್ದೇನೆ. ಕೆಲವರು ಅವುಗಳನ್ನೇ ಹ್ಯಾಕ್‌ ಮಾಡಿಸಿ ಚುನಾವಣಾ ತಯಾರಿಗೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿದ್ದಾರೆ. ಜನರ ಪ್ರೀತಿ ಇರುವ ತನಕ ನನ್ನನ್ನು ಏನೂ ಮಾಡಲು ಆಗುವುದಿಲ್ಲ’ ಎಂದರು.

‘ಬಂಧನದ ವೇಳೆ ಸಿಬಿಐ ನನ್ನಿಂದ ₹1,020ಕೋಟಿ ಜಪ್ತಿ ಮಾಡಿ ಪ್ರಕರಣ ದಾಖಲಿಸಿತ್ತು. ಸದ್ಯ ₹4 ಸಾವಿರ ಕೋಟಿ ಆಸ್ತಿ ಜಪ್ತಿಯಾಗಿದ್ದರೂ ಚುನಾವಣೆ ಖರ್ಚಿಗೆ ಯಾವುದೇ ಕಷ್ಟವಿಲ್ಲ’ ಎಂದರು.

ADVERTISEMENT

‘ಯಾರನ್ನೂ ಹೆದರಿಸಿ ದುಡ್ಡು ಹೊಡೆದಿಲ್ಲ. ಸ್ವಂತ ಶ್ರಮದಿಂದ ಗಳಿಸಿದ ಆಸ್ತಿ ಅದು. ಜೈಲಿನಲ್ಲಿ ಕಿರಿದಾದ ಕೊಠಡಿಯಲ್ಲಿ ನಾಲ್ಕು ವರ್ಷ ವನವಾಸ ಕಳೆದು ಬಂದಿದ್ದು, ಯಾರಿಗೂ ಹೆದರುವುದಿಲ್ಲ. ಅಕ್ರಮ ಆಸ್ತಿ ಪ್ರಕರಣದ ಆರೋಪದಿಂದ ಮುಕ್ತನಾಗುವೆ. ನಂತರವೇ ಉಸಿರು ಬಿಡುವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.