ನವದೆಹಲಿ: ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದಲ್ಲಿ ಸಿಬಿಐ ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಶಿವಕುಮಾರ್ ಪರವಾಗಿ ಹಿರಿಯ ವಕೀಲ ಮುಕುಲ್ ರೊಹಟಗಿ ಅವರ ವಾದವನ್ನು ಆಲಿಸಿದ ಬಳಿಕ ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಹಾಗೂ ಸತೀಶ್ ಚಂದ್ರ ಶರ್ಮಾ ಪೀಠವು ಶಿವಕುಮಾರ್ ಅರ್ಜಿಯನ್ನು ವಜಾಗೊಳಿಸಿತು.
‘ಅರ್ಜಿದಾರರದ್ದು ಎಂದು ಹೇಳಲಾದ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು 2017ರ ಆಗಸ್ಟ್ 2ರಂದು ದಾಳಿ ನಡೆಸಿದ್ದರು. ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರಕ್ರಿಯೆಗಳು ನಡೆಯಲು ಸಾಧ್ಯವಿಲ್ಲ. ಆದಾಯ ತೆರಿಗೆ ಇಲಾಖೆಯ ಪ್ರಕ್ರಿಯೆ ಜಾರಿಯಲ್ಲಿರುವಾಗ ಸಿಬಿಐ ಮತ್ತೊಂದು ಪ್ರಕ್ರಿಯೆ ನಡೆಸಲು ಸಾಧ್ಯವಿಲ್ಲ’ ಎಂದು ರೊಹಟಗಿ ವಾದಿಸಿದರು.
‘2018ರ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 17ಎ ಪ್ರಕಾರ ಜನಪ್ರತಿನಿಧಿಗಳ ವಿಚಾರಣೆ ನಡೆಸುವ ಮುನ್ನ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಈ ನಿಯಮದ ಅನುಸಾರ ಪೂರ್ವಾನುಮತಿ ಪಡೆಯುವವರೆಗೆ ತನಿಖೆ ಮತ್ತು ವಿಚಾರಣೆಗೆ ಅವಕಾಶ ಇಲ್ಲ. ಎಫ್‌ಐಆರ್ ದಾಖಲಾಗಿರುವುದು 2020ರ ಅಕ್ಟೋಬರ್ 3ರಂದು. ಆದ್ದರಿಂದ ಸೆಕ್ಷನ್ 17ಎ ಇದಕ್ಕೆ ಅನ್ವಯವಾಗುತ್ತದೆ’ ಎಂದು ಅವರು ಪ್ರತಿಪಾದಿಸಿದರು.
ಪ್ರಕರಣವೇನು?: 2013ರ ಏಪ್ರಿಲ್ 1ರಿಂದ 2018ರ ಏಪ್ರಿಲ್ 30ರ ಅವಧಿಯಲ್ಲಿ ಶಿವಕುಮಾರ್ ಅಕ್ರಮವಾಗಿ ₹ 74.93 ಕೋಟಿ ಮೌಲ್ಯದ ಆಸ್ತಿ ಗಳಿಸಿದ್ದಾರೆ ಎಂದು ಸಿಬಿಐ ಎಫ್‌ಐಆರ್ ದಾಖಲಿಸಿತ್ತು.
2013ರ ಮಾರ್ಚ್ 31ರ ವೇಳೆಗೆ ಶಿವಕುಮಾರ್ ಕುಟುಂಬ ₹ 33.92 ಕೋಟಿ ಆಸ್ತಿ ಹೊಂದಿತ್ತು. ಐದು ವರ್ಷಗಳಲ್ಲಿ ಅವರ ಕುಟುಂಬ ₹ 166.79 ಕೋಟಿಯನ್ನು ವರಮಾನ ಮತ್ತು ಇತರ ರೂಪದಲ್ಲಿ ಪಡೆದಿದೆ. ಇದೇ ಅವಧಿಯಲ್ಲಿ ₹ 113.12 ಕೋಟಿ ವೆಚ್ಚ ಮಾಡಲಾಗಿದೆ ಎಂಬ ಅಂಶ ಸಿಬಿಐ ಎಫ್‌ಐಆರ್‌ನಲ್ಲಿತ್ತು.
2018ರ ಏ.30ರ ವೇಳೆಗೆ ಆರೋಪಿತರ ಕುಟುಂಬ ₹ 128.60 ಕೋಟಿ ಆಸ್ತಿ ಹೊಂದಿತ್ತು. ವರಮಾನ, ಸ್ವೀಕೃತಿ ಮತ್ತು ವೆಚ್ಚಕ್ಕೆ ಹೋಲಿಸಿದರೆ ಶೇಕಡ 44.93ರಷ್ಟು ಹೆಚ್ಚುವರಿ ಆಸ್ತಿ ಇರುವುದು ಪ್ರಾಥಮಿಕ ತನಿಖೆ ವೇಳೆ ಪತ್ತೆಯಾಗಿದೆ ಎಂದು ಸಿಬಿಐ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿತ್ತು.
ಶಿವಕುಮಾರ್ ವಿರುದ್ಧ 2020ರ ಅಕ್ಟೋಬರ್ 3ರಂದು ಪ್ರಕರಣ ದಾಖಲಿಸಿದ್ದ ಸಿಬಿಐ, ತನಿಖೆ ನಡೆಸುತ್ತಿತ್ತು. ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿದ್ದ ಕಾಂಗ್ರೆಸ್ ಸರ್ಕಾರ, ಪ್ರಕರಣದ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಸಿಬಿಐ ಪ್ರಶ್ನಿಸಿದ್ದು, ವಿಚಾರಣಾ ಹಂತದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.