ADVERTISEMENT

ಅಸಿಸ್ಟಿವ್‌ ಟೆಕ್ನಾಲಜಿ ಎಲ್ಲರಿಗೂ ತಲುಪಲಿ: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 21:45 IST
Last Updated 23 ಫೆಬ್ರುವರಿ 2023, 21:45 IST
‘ಸಹಾಯಕ ತಂತ್ರಜ್ಞಾನಗಳ’ ಕುರಿತ ಜಾಗೃತಿ ಸಮಾವೇಶದಲ್ಲಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ಸಮರ್ಥನಂ ಸಂಸ್ಥಾಪಕ ಡಾ.ಮಹಾಂತೇಶ್ ಜಿ. ಕಿವಡಸನ್ನವರ್ ಸ್ಮರಣಿಕೆ ನೀಡಿದರು. ಎಸ್.ಲತಾ ಕುಮಾರಿ, ನೀಲೇಶ್ ದೇಶ್‌ಪಾಂಡೆ ಇದ್ದರು
‘ಸಹಾಯಕ ತಂತ್ರಜ್ಞಾನಗಳ’ ಕುರಿತ ಜಾಗೃತಿ ಸಮಾವೇಶದಲ್ಲಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ಸಮರ್ಥನಂ ಸಂಸ್ಥಾಪಕ ಡಾ.ಮಹಾಂತೇಶ್ ಜಿ. ಕಿವಡಸನ್ನವರ್ ಸ್ಮರಣಿಕೆ ನೀಡಿದರು. ಎಸ್.ಲತಾ ಕುಮಾರಿ, ನೀಲೇಶ್ ದೇಶ್‌ಪಾಂಡೆ ಇದ್ದರು   

ಬೆಂಗಳೂರು: ‘ನಗರದಲ್ಲಿ ಎಲ್ಲ ವ್ಯವಸ್ಥೆಗಳನ್ನು ಅಂಗವಿಕಲರೂ ಸೇರಿದಂತೆ ಎಲ್ಲರಿಗೂ ತಲುಪಿಸುವ ಸಮಗ್ರ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ಐಟಿ–ಬಿಟಿ ಇಲಾಖೆ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದರು.

ಸಮರ್ಥನಂ ಹಾಗೂ ಡಿಸಿಎಕ್ಸ್ ಟೆಕ್ನಾಲಜಿ ವತಿಯಿಂದ ಆಯೋಜಿಸಿದ್ದ ‘ಸಹಾಯಕ ತಂತ್ರಜ್ಞಾನಗಳ’ (ಅಸಿಸ್ಟಿವ್‌ ಟೆಕ್ನಾಲಜಿ) ಕುರಿತ ಜಾಗೃತಿ ಸಮಾವೇಶವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ನಗರದ ಯಾವುದೇ ಭಾಗಕ್ಕೆ ಅಂಗವಿಕಲರು ತಲುಪಲು ಸುಗಮ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಂದೇ ರೀತಿಯ ಬದ್ಧತೆಯಿಂದ ಒಟ್ಟಾಗಿ ಕೆಲಸ ಮಾಡಬೇಕು. ಅಂಗವಿಕಲರು ಎಲ್ಲ ರೀತಿಯ ಸಾಮರ್ಥ್ಯದಿಂದ ಜೀವನ ನಡೆಸುವಂತಾಗಬೇಕು ಎಂದರು.

ADVERTISEMENT

ಬೆಂಗಳೂರು ತಂತ್ರಜ್ಞಾನದ ಪ‍ರಿಹಾರಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ. ದೇಶ ಹಾಗೂ ವಿಶ್ವಕ್ಕೆ ಪರಿಹಾರಗಳನ್ನು ನೀಡುತ್ತಿದೆ. ಅಂಗವಿಕಲರಿಗೂ ಎಲ್ಲ ಪರಿಹಾರ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತದೆ ಎಂದರು.

‘ಡಿಜಿಟಲ್‌ ಹಾಗೂ ಸಹಾಯಕ ತಂತ್ರಜ್ಞಾನ ಸಂಬಂಧಿ ಸಮಸ್ಯೆಗಳಿಗೆ ಸಿಗುವ ಪರಿಹಾರವನ್ನು ಎಲ್ಲರಿಗೂ ತಲುಪಿಸಲು ಅಗತ್ಯ ಸಂಪರ್ಕ ಸೇತುವೆ ಬೇಕಿದೆ. ಸಾಕಷ್ಟು ಪ್ರಯತ್ನಗಳಾಗಿದ್ದರೂ, ಅದು ಸಾಕಾಗಿಲ್ಲ. ಹೆಚ್ಚು ಬದ್ಧತೆ ಬೇಕು. ಕೆಲವೇ ಜನರನ್ನು ತಲುಪಿದರೆ ಸಾಕಾಗುವುದಿಲ್ಲ. ಅಂಗವೈಕಲ್ಯ ಎಂಬ ಪರಿಸ್ಥಿತಿ ಯಾರಿಗೆ ಬೇಕಾದರೂ ಬರಬಹುದು. ಹೀಗಾಗಿ ಸಮಾಜದ ಎಲ್ಲ ಜನರಿಗೂ ಪರಿಹಾರಗಳು ತಲುಪಬೇಕು‌. ಪ್ರಯತ್ನ ದೀರ್ಘಕಾಲಿಕವಾಗಿರಬೇಕು’ ಎಂದರು.

ಸಮರ್ಥನಂ ಸಂಸ್ಥಾಪಕ ಡಾ.ಮಹಾಂತೇಶ್ ಜಿ. ಕಿವಡಸನ್ನವರ್ ಮಾತನಾಡಿ, ‘ಅಂಗವಿಕಲರಿಗೆ ಸಹಾಯಕ ತಂತ್ರಜ್ಞಾನದ ಬಳಕೆಗೆ ವ್ಯವಸ್ಥೆ ರಚಿಸಿ, ಈ ಕ್ಷೇತ್ರಕ್ಕೆ ಹೂಡಿಕೆದಾರರನ್ನು ಆಕರ್ಷಿಸಿ ಬುದ್ಧಿಮತ್ತೆಯನ್ನು ಬಳಸಿಕೊಂಡು ಜಾಗೃತಿ ಮೂಡಿಸುವುದು ಈ ಸಮಾವೇಶದ ಉದ್ದೇಶವಾಗಿದೆ’ ಎಂದರು.

ಅಂಗವಿಕಲರು, ಅಂಗವಿಕಲ ಇಲಾಖೆ ನೌಕರರು, ವೈದ್ಯರು, ವಿಶೇಷ ಚೇತನ ಶಾಲೆಯ ಶಿಕ್ಷಕರು, ಎಟಿ ಸ್ಟಾರ್ಟ್ ಅಪ್‌ಗಳು, ಹೂಡಿಕೆದಾರರು, ಸರ್ಕಾರಿ ಅಧಿಕಾರಿಗಳು, ಉದ್ಯೋಗದಾತರು ಸೇರಿದಂತೆ 300ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಸಹಾಯಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಸ್ತುಪ್ರದರ್ಶನ ಆಯೋಜಿಸಲಾಗಿತ್ತು.

ಡಿಸಿಎಕ್ಸ್‌ ಟೆಕ್ನಾಲಜಿ ಮುಖ್ಯಸ್ಥ ಲೋಕೇಂದ್ರ ಸೇಥಿ, ಡಿಸಿಎಕ್ಸ್ ಟೆಕ್ನಾಲಜಿಯ ಮಾನವ ಸಂಪನ್ಮೂನ ವಿಭಾಗದ ನಿರ್ದೇಶಕ ನೀಲೇಶ್ ದೇಶ್‌ಪಾಂಡೆ, ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿರ್ದೇಶಕರಾದ ಎಸ್.ಲತಾ ಕುಮಾರಿ, ಮೈಕ್ರೊಸಾಫ್ಟ್ ಇಂಡಿಯಾದ ಹಿರಿಯ ಪ್ರಧಾನ ಸಂಶೋಧಕ ಡಾ.ಮನೋಹರ ಸ್ವಾಮಿನಾಥನ್, ಕಂಟಿನ್ಯುಯಲ್ ಎಂಜಿ ಸಲಹೆಗಾರ ಡಾ.ಕೆ.ಶ್ರೀರಾಮ್ ಹಾಗೂ ಎಎನ್‌ಝಡ್‌ ವ್ಯವಸ್ಥಾಪಕ ನಿರ್ದೇಶ ವೆಂಕಟರಮಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.